ಖಾಸಗಿ ಆಸ್ಪತ್ರೆ ಓಪಿಡಿ ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು

ಖಾಸಗಿ ಆಸ್ಪತ್ರೆ ಓಪಿಡಿ ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ

July 29, 2018

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಕಮಿಷನ್ ಮಸೂದೆ ಖಂಡಿಸಿ ಶನಿವಾರ ದೇಶದಾದ್ಯಂತ ಕರೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್‍ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾರತೀಯ ವೈದ್ಯಕೀಯ ಸಂಘ, ಖಾಸಗಿ ಆಸ್ಪತ್ರೆಗಳು ಶನಿವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಓಪಿಡಿ ಬಂದ್ ಮಾಡುವಂತೆ ಶುಕ್ರವಾರ ಸಂಜೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕ ಎಲ್ಲಾ ಜಿಲ್ಲಾ ಘಟಕಗಳಿಗೆ ಮಾಹಿತಿ ರವಾನಿಸಿತ್ತು. ಆದರೆ ಜಿಲ್ಲಾ ಘಟಕಗಳು ಕಳೆದ ರಾತ್ರಿಯಷ್ಟೇ ಖಾಸಗಿ ಆಸ್ಪತ್ರೆಗಳಿಗೆ ಮಾಹಿತಿ ನೀಡಿದ್ದವು. ಹಾಗಾಗಿ ಮಾಹಿತಿ ಕೊರತೆಯಿಂದ ಮೈಸೂರಿನಲ್ಲಿ ಇಂದು ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿವಿಧ ಬಡಾವಣೆಯಲ್ಲಿನ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳಲ್ಲಿ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡಲಾಯಿತು. ಭಾರತೀಯ ವೈದ್ಯಕೀಯ ಸಂಘ ಕೇವಲ ಓಪಿಡಿ ಬಂದ್ ಮಾಡುವಂತೆ ಸೂಚಿಸಿದ್ದರಿಂದ ಒಳ ರೋಗಿಗಳ ವಿಭಾಗಗಳಲ್ಲಿ ವೈದ್ಯರು ಎಂದಿನಂತೆ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಕಂಡು ಬಂದಿತು. ಖಾಸಗಿ ಆಸ್ಪತ್ರೆಗಳ ಬಂದ್‍ನಿಂದಾಗಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಂದ್‍ಗೆ ಮುಂದಾಗಿದ್ದ ಖಾಸಗಿ ಆಸ್ಪತ್ರೆಗಳಲ್ಲಿಯೂ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು.

ಗ್ರಹಣದ ಎಫೆಕ್ಟ್: ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜನರು ದೇವಾಲಯಗಳತ್ತ ಮುಖ ಮಾಡಿದ್ದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರೂ ಆಸ್ಪತ್ರೆಗಳಿಗೆ ಬರಲಿಲ್ಲ. ಹಾಗಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ವಿರಳವಾಗಿತ್ತು. ಮಧ್ಯಾಹ್ನದ ನಂತರ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳಿಗೆ ರೋಗಿಗಳು ಬರಲಾರಂಭಿಸಿದರು.

ಕೆ.ಆರ್.ಆಸ್ಪತ್ರೆ ಮಾಮೂಲಿ ಚಿತ್ರಣ: ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ ಬರುವಷ್ಟೇ ಪ್ರಮಾಣದಲ್ಲಿ ರೋಗಿಗಳು ಚಿಕಿತ್ಸೆ ಪಡೆದರು. ಖಾಸಗಿ ಆಸ್ಪತ್ರೆಗಳ ಬಂದ್‍ನಿಂದ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚಿನ ವೈದ್ಯರನ್ನು ನಿಯೋಜಿಸಲಾಗಿತ್ತು.

ಮನವಿ ಸಲ್ಲಿಸಿದ ನಿಯೋಗ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಕಮಿಷನ್ ಮಸೂದೆಯನ್ನು ಕೈ ಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಮೈಸೂರು ಘಟಕದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರಿಗೆ ಮನವಿ ಸಲ್ಲಿಸಿದರು. ರಾಷ್ಟ್ರೀಯ ವೈದ್ಯಕೀಯ ಕಮಿಷನ್ ಮಸೂದೆಯು ಖಾಸಗಿ ಆಸ್ಪತ್ರೆಗಳ ಅಸ್ತಿತ್ವವನ್ನೇ ಕಸಿದುಕೊಳ್ಳಲಿದೆ. ಜೊತೆಗೆ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಗದಾಪ್ರಹಾರ ನಡೆಸಲಿರುವ ಮಸೂದೆಯ ಅವಶ್ಯಕತೆಯಿಲ್ಲ. ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳ ವಿರೋಧದ ನಡುವೆಯೂ ಮಸೂದೆ ಅಂಗೀಕರಿಸಬಾರದು ಎಂದು ವೈದ್ಯರು ಮನವಿಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮೈಸೂರು ಘಟಕದ ಅಧ್ಯಕ್ಷ ಡಾ.ಎಂ.ಎಸ್.ವಿಶ್ವೇಶ್ವರ, ಉಪಾಧ್ಯಕ್ಷರಾದ ಡಾ.ಸುರೇಶ್ ರುದ್ರಪ್ಪ, ಡಾ.ಬಿ.ಎನ್.ಆನಂದರವಿ, ಕಾರ್ಯದರ್ಶಿ ಡಾ.ಸುಜಾತರಾವ್, ಪದಾಧಿಕಾರಿಗಳಾದ ಡಾ.ಸಿ.ರಾಜನ್, ಡಾ.ಎಸ್.ಪಿ.ಯೋಗಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »