ಎನ್‍ಎಂಸಿ ಮಸೂದೆ ವಿರೋಧಿಸಿ ಖಾಸಗಿ ವೈದ್ಯರಿಂದ ಆಸ್ಪತ್ರೆ ಬಂದ್, ಧಿಕ್ಕಾರ ದಿವಸ್ ಆಚರಣೆ
ಹಾಸನ

ಎನ್‍ಎಂಸಿ ಮಸೂದೆ ವಿರೋಧಿಸಿ ಖಾಸಗಿ ವೈದ್ಯರಿಂದ ಆಸ್ಪತ್ರೆ ಬಂದ್, ಧಿಕ್ಕಾರ ದಿವಸ್ ಆಚರಣೆ

July 29, 2018

ಹಾಸನ: ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಖಾಸಗಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಧಿಕ್ಕಾರ ದಿವಸ್ ಆಚರಿಸಿದರು.

ರಾಷ್ಟ್ರೀಯ ವೈದ್ಯಕೀಯ ಆಯೋಗದ ರಚನೆ ಮಸೂದೆಯನ್ನು ಅಧಿವೇಶನದಲ್ಲಿ ಅಂಗೀಕರಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ದೇಶಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಮುಷ್ಕರದ ಅಂಗವಾಗಿ ಖಾಸಗಿ ಆಸ್ಪತ್ರೆಗಳು ಓಪಿಡಿ ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದವು. ಖಾಸಗಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಬೀದಿಗಿಳಿದು ಹೋರಾಟ ಮಾಡುವುದರ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರದಿಂದ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿ ಸೇವೆಯನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೊರ ರೋಗಿಗಳು ತೊಂದರೆ ಅನುಭವಿಸಿದರು. ಸರ್ಕಾರಿ ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ಪ್ರತಿಭಟನೆಯಲ್ಲಿ ಭಾರತೀಯ ವೈದ್ಯ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ನಾಗೇಶ್, ಕಾರ್ಯದರ್ಶಿ ಡಾ.ಜೆ.ಕೆ.ಯತೀಶ್ ಕುಮಾರ್, ಖಜಾಂಚಿ ಡಾ.ಈಶ್ವರ್ ಪ್ರಸಾದ್, ಬಷೀರ್ ಅಹಮದ್, ಡಾ.ಹೆಚ್.ನಾಗರಾಜು, ಡಾ.ಸಾವಿತ್ರಿ ಇತರರಿದ್ದರು.

Translate »