ಪ್ರವಾಸಿ ಗೈಡ್‍ಗಳಿಗೆ ಸಚಿವರಿಂದ ಆಹಾರ ಕಿಟ್ ವಿತರಣೆ
ಹಾಸನ

ಪ್ರವಾಸಿ ಗೈಡ್‍ಗಳಿಗೆ ಸಚಿವರಿಂದ ಆಹಾರ ಕಿಟ್ ವಿತರಣೆ

April 6, 2020

ಹಾಸನ, ಏ.5- ಬೇಲೂರಿನಲ್ಲಿ ಪ್ರವಾಸಿ ಗೈಡ್‍ಗಳಿಗೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪಡಿತರ ಸಾಮಗ್ರಿ ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ಕೊರೊನಾ ಸೋಂಕು ನಿಯಂತ್ರಣ ಕ್ರಮದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದೇಶ ಜಾರಿ ಯಲ್ಲಿದೆ. ಇದರಿಂದ ಪ್ರವಾಸಿ ಮಾರ್ಗದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಊಟೋಪಚಾರಕ್ಕಾಗಿ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಚಿಕ್ಕಮಗಳೂರು ಬೇಲೂರು ಹಾಸನ ಹೊಳೆ ನರಸೀಪುರ ಬಿಳಿಕೆರೆ ನಾಲ್ಕು ಲೈನ್ ರಸ್ತೆ ಪ್ರಸ್ತಾಪ ಹಿಂದಿನಿಂದಲೂ ಇದೆ. ಹಾಲಿ ಬೇಲೂರುವರೆಗೆ ರಾಷ್ಟ್ರೀಯ ಶುಂಠಿ ಹೆದ್ದಾರಿಗೆ ಸೇರಿದ್ದು, ಚಿಕ್ಕಮಗಳೂರು ಬೇಲೂರು ನಡುವಿನ ರಸ್ತೆ ತಾಂತ್ರಿಕ ಕಾರಣಗಳಿಂದ ಕೈಬಿಟ್ಟಿದ್ದು ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ ಎಂದರು.

ಇದೇ ರೀತಿ ಚಿಕ್ಕಮಗಳೂರು ಬೇಲೂರು ಹಾಸನ ರೈಲ್ವೆ ಯೋಜನೆಗೆ ಮಂಜೂರಾತಿ ದೊರೆತಿದೆ. ರಾಜ್ಯ ಸರ್ಕಾರ ಜಮೀನು ಒದಗಿಸಿದರೆ ತಕ್ಷಣ ಕೆಲಸ ಪ್ರಾರಂಭಿಸುವುದಾಗಿ ರೈಲ್ವೆ ಸಚಿವರು ತಮಗೆ ವೈಯಕ್ತಿಕವಾಗಿ ತಿಳಿಸಿದ್ದಾರೆ ಎಂದು ಸಚಿವ ಸಿ.ಟಿರವಿ ಹೇಳಿದರು.

ಬೇಲೂರು ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಿಕ ವಾರ್ಷಿಕ ಪೂಜೆ ನಡೆದಿದೆ. ಜಿಲ್ಲಾಧಿಕಾರಿ ಯವರ ಸೂಚನೆ ಹಾಗೂ ಕೇಂದ್ರ ಸರ್ಕಾರದ ಲಾಕ್‍ಡೌನ್ ಆದೇಶ ಜಾರಿ ಗೊಳಿಸಿರುವುದರಿಂದ ಬೇಲೂರಿನಲ್ಲಿ ರಥೋತ್ಸವ ನಡೆದಿಲ್ಲ. ಕೊರೊನಾ ಸೋಂಕು ದೂರಾಗಿ ಎಲ್ಲವೂ ಸುಸೂತ್ರವಾದ ನಂತರ ವಿಜೃಂಭಣೆಯಿಂದ ರಥೋತ್ಸವ ನಡೆಸಬಹುದು ಎಂದರು. ಶಾಸಕರಾದ ಕೆ.ಎಂ.ಲಿಂಗೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Translate »