– ಡಾ. ಎಸ್.ಪಿ. ಯೋಗಣ್ಣ
ಮನುಷ್ಯ ಇಂದು ಹಲವಾರು ಸೋಂಕು ರೋಗಗಳಿಗೀಡಾಗುತ್ತಿದ್ದಾನೆ. 19ನೇ ಶತಮಾನ ಮತ್ತು 20ನೇ ಶತಮಾನದ ಪ್ರಾರಂಭದಲ್ಲಿ ಸಿಡುಬು, ಪ್ಲೇಗ್, ಪೋಲಿಯೋ ಇತ್ಯಾದಿ ಸೋಂಕು ರೋಗ ಗಳಿಗೀಡಾಗು ತ್ತಿದ್ದು, ಅವುಗಳನ್ನು ನಿರ್ಮೂಲನೆ ಮಾಡಿದ ಮೇಲೆ ಹೊಸ ಹೊಸ ಭಯಾನಕ ಸೋಂಕು ರೋಗ ಗಳು ಇಂದು ಜನ್ಮತಾಳುತ್ತಿವೆ.
ಸೋಂಕಾಣುಗಳು ಸೂಕ್ಷ್ಮಜೀವಿ ನಿರೋಧಕ ಔಷಧಗಳಿಗೆ ಪ್ರತಿರೋಧತ್ವ ವನ್ನು ರೂಢಿಸಿಕೊಂಡು ನಾಶವಾಗದೆ ಉಳಿಯುವ ಉಪಾಯಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಇದು ಹೊಸ ಹೊಸ ಸೂಕ್ಷ್ಮಜೀವಿ ನಿರೋಧಕ ಔಷಧಗಳ ಅನ್ವೇಷಣೆಗಳಿಗೆ ನಾಂದಿಯಾಗುತ್ತಿದೆ. ಸೂಕ್ಷ್ಮಜೀವಿಗಳೂ ಹೊಸ ಹೊಸ ಜೀವಿ ಗಳಾಗಿ ರೂಪಗೊಂಡು ಅವುಗಳನ್ನು ನಾಶಮಾಡುವ ಮನುಷ್ಯನ ಪ್ರಯತ್ನ ದಿಂದ ಪಾರಾಗುತ್ತಿವೆ. ಎಲ್ಲವೂ ಬದುಕು ಳಿಯಬೇಕೆಂಬುದು ಸೃಷ್ಟಿಯ ನಿಯಮ. ನಿಫಾ ವೈರಾಣು ಸಹ ರೂಪಾಂತರ ಗೊಂಡಿರುವ ಹೊಸ ಭಯಾನಕ ವೈರಾಣುವಿರಬಹುದು.
ಪರಿಸರದಲ್ಲಿರುವ ಸೂಕ್ಷ್ಮಜೀವಿಗಳನ್ನು ಅವುಗಳ ರಚನೆ, ಗುಣಲಕ್ಷಣಗಳು ಇತ್ಯಾದಿ ಗಳ ಆಧಾರದ ಮೇಲೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್, ರಿಕೆಟೇಷಿಯಾ, ಕ್ಲೈಮೀಡಿಯಾ, ಪ್ರೋಟೋಜೋವಾ ಇತ್ಯಾದಿಗಳಾಗಿ ವಿಂಗಡಿಸಲಾಗಿದೆ. ಎಲ್ಲ ಗುಂಪಿನ ಸೂಕ್ಷ್ಮ ಜೀವಿಗಳು ಮನುಷ್ಯನಲ್ಲಿ ಸೋಂಕನ್ನುಂಟು ಮಾಡುತ್ತವೆ. ಸೂಕ್ಷ್ಮ ಜೀವಿಗಳು ಮನುಷ್ಯನ ದೇಹವನ್ನಾವರಿ ಸುವಿಕೆಯನ್ನು “ಸೋಂಕು” (Infection) ಎಂದೂ, ಇವುಗಳಿಂದುಂಟಾಗುವ ರೋಗಗಳನ್ನು “ ಸೋಂಕು ರೋಗ ಗಳು” (Infective diseases) ಎಂದೂ, ಸೋಂಕನ್ನುಂಟು ಮಾಡುವ ಜೀವಿಯನ್ನು “ಸೋಂಕಾಣು” (Infective agent) ಎಂದೂ ಕರೆಯಲಾಗುತ್ತದೆ.
ಮನುಷ್ಯನಿಗೂ ಮತ್ತಿತರ ಜೀವಿಗಳಿಗೂ ಪೂರಕ ಅಥವಾ ಮಾರಕ ಸಂಬಂಧಗಳಿವೆ. ಕೆಲವು ಸೂಕ್ಷ್ಮ ಜೀವಿಗಳು ಪರಿ ಸರದಲ್ಲಿ ಆಹಾರೋತ್ಪತ್ತಿ ಕ್ರಿಯೆಯಲ್ಲಿ ಪ್ರಮುಖ ವಾಗಿ ಭಾಗವಹಿಸಿ ಮಾನವನ ಬದುಕಿನ ಪೂರಕವಾಗಿವೆ. ಮತ್ತೆ ಕೆಲವು ಮನುಷ್ಯನ ದೇಹವನ್ನಾವರಿಸಿ ರೋಗ ಗ್ರಸ್ತವನ್ನಾಗಿಸು ತ್ತವೆ. ಮನುಷ್ಯನ ದೇಹ ದೊಳಗೇ ಇರುವ ಕೆಲವು ಬ್ಯಾಕ್ಟೀರಿಯಾ ಜೀವಿಗಳು ದೇಹದ ಆರೋಗ್ಯಕ್ಕೆ ಪೂರಕವಾಗುವ ಅಂಶಗಳ ಸೃಷ್ಟಿಗೆ ಕಾರಣಕರ್ತವಾಗಿವೆ. ಮನುಷ್ಯನಿಗೆ ಪೂರಕವಾಗುವ ಮತ್ತು ಮಾರಕವಾಗುವ ಎರಡೂ ಜೀವಿಗಳನ್ನು ಸೃಷ್ಟಿಸಿದ ಸೃಷ್ಟಿ ಕರ್ತನ ಉದ್ದೇಶ ನಿಗೂಢ.
ನಿರ್ದಿಷ್ಟ ಸೋಂಕಾಣು ಮನುಷ್ಯನ ದೇಹದೊಳಗಿನ ನಿರ್ದಿಷ್ಟ ಅಂಗಾಂಗಕ್ಕೆ ಆಕರ್ಷಿತವಾಗುತ್ತವೆ. ನರಗ್ರಾಹಿ ಸೋಂಕಾಣು (Neurotrophic) ಅಂಗಾಂಶಕ್ಕೂ, ಜೀರ್ಣಾಂಗಗ್ರಾಹಿ (enterotrophic) ಸೋಂಕಾಣು ಜೀರ್ಣಾಂಗಕ್ಕೂ, ರಕ್ತಗ್ರಾಹಿ ಸೋಂಕಾಣು ರಕ್ತಕಣಗಳಿಗೂ ಹೀಗೆ ಆಯಾಯ ಅಂಗಾಂಗಗಳಿಗೆ ಆಕರ್ಷಿತ ವಾಗುತ್ತವೆ. ನಿಫಾ ವೈರಾಣು ಪ್ರಧಾನ ವಾಗಿ ನರಗ್ರಾಹಿ ಮತ್ತು ಶ್ವಾಸಕೋಶಗ್ರಾಹಿ ವೈರಾಣು ವಾಗಿದ್ದು, ಮೆದುಳಿನಲ್ಲಿ ಮತ್ತು ಉಸಿರಾಂಗಗಳಲ್ಲಿ ಮನೆಮಾಡಿ ಪ್ರಧಾನವಾಗಿ ಮೆದುಳು ಮತ್ತು ಶ್ವಾಸಕೋಶಗಳನ್ನು ಕಾಯಿಲೆಗೀಡು ಮಾಡುತ್ತದೆ. ಇದೊಂದು ಪೂರ್ವ ನಿಗದಿತ, ಜನ್ಮದತ್ತವಾಗಿ ಗಳಿಕೆ ಮಾಡಿಕೊಂಡ ಸೋಂಕಾಣುವಿನ ಗುಣ, ಸೋಂಕಿಗೀಡಾದ ಅಂಗಾಂಗವನ್ನು ಸೋಂಕಾಣುಗಳು ನಾಶ ಮಾಡುವುದ ಲ್ಲದೆ, ಅವು ವಿಷಮ ವಸ್ತುಗಳನ್ನು (Toxins)ಗಳನ್ನು ಸುರಿಕೆ ಮಾಡುತ್ತವೆ. ವಿಷಮ ವಸ್ತುಗಳು ಮನುಷ್ಯ ದೇಹದ ಲ್ಲುಂಟಾಗುವ ಸೋಂಕಾಣುಗಳ ನಿರೋಧಕ ವಸ್ತುಗಳನ್ನು ನಾಶಪಡಿಸಿ, ಸೋಂಕಾಣುಗಳು ವೃದ್ಧಿಸಲು ಸಹಕಾರಿ ಯಾಗುವುದಲ್ಲದೆ, ದೇಹದ ವಿವಿಧ ಅಂಗಾಂಗ ಗಳ ಕಾರ್ಯಗಳನ್ನು ವಿಫಲಗೊಳಿಸಿ ದೇಹದ ಮೇಲೆ ಗಂಭೀರ ಪರಿಣಾಮವ ನ್ನುಂಟು ಮಾಡುತ್ತವೆ. ಒಂದು ಜೀವಿಯ ರಕ್ಷಕವಾದರೆ, ಮತ್ತೊಂದು ಅದೇ ಜೀವಿಯ ನಾಶಕ.
ವೈರಸ್
ಸೋಂಕಾಣುಗಳಲ್ಲಿ ವೈರಾಣುಗಳು ಅತೀ ಮುಖ್ಯವಾಗಿದ್ದು, ಇವುಗಳಲ್ಲಿ ಆರ್. ಎನ್.ಎ (ರೈಬೋ ನ್ಯೂಕ್ಲಿಕ್ ಆ್ಯಸಿಡ್) ಮತ್ತು ಡಿ.ಎನ್.ಎ (ಡಿ ಆಕ್ಸಿರೈಬೊನ್ಯೂಕ್ಲಿಕ್ ಆ್ಯಸಿಡ್) ಎಂಬ ಎರಡು ವಿಧಗಳಿವೆ. ವೈರಾಣು ಗಳು ಜೀವಕೋಶಗಳೊಳಗೆ ನುಸುಳಿ ವಂಶವಾಹಿನಿಗಳೊಳಕ್ಕೆ (ಜೀನ್ಸ್) ಸೇರಿಕೊಂಡು ವಂಶವಾಹಿನಿಗಳನ್ನೇ ಅವ್ಯ ವಸ್ಥೆಗೊಳಿಸಿ ಜೀವಕೋಶದ ಕಾರ್ಯಗಳನ್ನು ಏರುಪೇರುಗೊಳಿಸಿ ಕಾಯಿಲೆಗಳನ್ನುಂಟು ಮಾಡುತ್ತವೆ. ಇನ್ನಿತರ ಸೋಂಕಾಣುಗಳು ಈ ರೀತಿ ವಂಶವಾಹಿನಿಗಳೊಳಕ್ಕೆ ನುಸುಳು ವುದಿಲ್ಲ. ಲಭ್ಯ ಸೂಕ್ಷ್ಮಜೀವಿ ನಿರೋಧಕ ಔಷಧಗಳು(ಆ್ಯಂಟಿ ಬಯಾಟಿಕ್ಸ್) ವಂಶವಾಹಿನಿಗಳೊಳಕ್ಕೆ ರವಾನೆಯಾಗದಿರು ವುದರಿಂದ ವೈರಾಣುಗಳನ್ನು ನಾಶಮಾಡುವುದು ಬಹು ಕಷ್ಟಕರ. ಈ ಕಾರಣಕ್ಕಾಗಿಯೇ ವೈರಾಣುಗಳ ಕಾಯಿಲೆ ಗಂಭೀರ ಸ್ವರೂಪ ತಾಳುವುದು ಮತ್ತು ಇವುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದಿರುವುದು.
ವೈರಾಣುಗಳು ಪರಿಸರದಲ್ಲಿದ್ದು, ಇನ್ನಿತರ ಪ್ರಾಣಿಗಳು ಮತ್ತು ಮಾನವನ ದೇಹದಲ್ಲಿ ಜೀವಿಸಿ ತಮ್ಮ ಸಂತಾನಾಭಿ ವೃದ್ಧಿ ಕ್ರಿಯೆಯನ್ನು ಮುಂದುವರೆಸುತ್ತವೆ. ಪ್ರತಿಯೊಂದು ಜೀವಿಯೂ ತನ್ನ ವಂಶಾ ಭಿವೃದ್ಧಿಯನ್ನು ಮುಂದುವರೆಸಬೇಕೆಂಬುದು ಸೃಷ್ಟಿಯ ನಿಯಮ. ಸೂಕ್ಷ್ಮಜೀವಿಗಳು ತಮ್ಮ ವಂಶಾಭಿವೃದ್ಧಿಗಾಗಿ ಪೂರ್ವ ನಿಗದಿಯಂತೆ ಮನುಷ್ಯನ ದೇಹವನ್ನು ಪ್ರವೇಶಿಸುತ್ತವೆಯೇ ವಿನಃ ಮನುಷ್ಯನನ್ನು ರೋಗಗ್ರಸ್ತನನ್ನಾಗಿಸಬೇಕೆಂಬುದು ಅವುಗಳ ಉದ್ದೇಶವಲ್ಲ. ಆದರೆ ಮನುಷ್ಯನ ಮನೋವೃತ್ತಿಯೇ ಬೇರೆ.
ವೈರಾಣುಗಳು ತಮ್ಮ ಜೀವನ ಚಕ್ರ ಕ್ರಿಯೆಯನ್ನು ವಿವಿಧ ಜೀವಿಗಳಲ್ಲಿ ಸೇರಿ ಕೊಂಡು ಪೂರೈಸುತ್ತವೆ. ಒಂದು ಜೀವಿಯಲ್ಲಿ ವೈರಾಣುಗಳು ಯಾವುದೇ ಕಾಯಿಲೆಯನ್ನು ಉತ್ಪತ್ತಿ ಮಾಡದೆ ಆಶ್ರಯ ಪಡೆಯುತ್ತವೆ. ಮತ್ತೊಂದು ಜೀವಿಯಲ್ಲಿ ಆಶ್ರಯ ಪಡೆಯುವಾಗ ಆಶ್ರಯಧಾತ ಜೀವಿಯನ್ನೇ ರೋಗಕ್ಕೀಡು ಮಾಡುತ್ತವೆ. ಇದೆಂಥ ವಿಪರ್ಯಾಸ! ಉದಾ – ನಿಫಾ ವೈರಾಣು ಬಾವಲಿ ಹಕ್ಕಿಯಲ್ಲಿ ಅದಕ್ಕೆ ಯಾವುದೇ ಕಾಯಿಲೆಯನ್ನುಂಟು ಮಾಡದೆ ಆಶ್ರಯ ಪಡೆಯುತ್ತದೆ. ಆದರೆ ಮನುಷ್ಯನಿಗೆ ಮಾರಣಾಂತಿಕವಾಗುತ್ತದೆ.
ರೋಗೋತ್ಪತ್ತಿ ಸಾಮಥ್ರ್ಯ (Virulence)
ವೈರಸ್‍ಗಳು ಪರಿಸರದಲ್ಲಿ ಅಥವಾ ಜೀವಿಗಳಲ್ಲಿದ್ದರೂ ಪೂರಕ ವಾತಾವರಣ ಲಭಿಸಿದಾಗ ಮಾತ್ರ ಅವು ರೋಗೋತ್ಪತ್ತಿ ಸಾಮಥ್ರ್ಯವನ್ನು ಗಳಿಕೆ ಮಾಡುತ್ತವೆ. ಪರಿ ಸರದ ಉಷ್ಣಾಂಶ, ವೈರಾಣುಗಳ ಸಂಖ್ಯೆ, ಜನ್ಮದತ್ತವಾಗಿ ಗಳಿಕೆ ಮಾಡಿಕೊಂಡ ರೋಗೋತ್ಪತ್ತಿ ಸಾಮಥ್ರ್ಯ ಇತ್ಯಾದಿಗಳು ವೈರಸ್ಸಿನ ರೋಗೋತ್ಪತ್ತಿ ಸಾಮಥ್ರ್ಯವನ್ನು ನಿರ್ಧರಿಸುತ್ತವೆ. ಕೆಲವು ವೈರಸ್ಸುಗಳು ಬೇಸಿಗೆ ಕಾಲದಲ್ಲಿ, ಮತ್ತೆ ಕೆಲವು ಚಳಿಗಾಲದಲ್ಲಿ, ಮಳೆಗಾಲದಲ್ಲಿ ಹೆಚ್ಚು ವೃದ್ಧಿಯಾಗಿ ಹೆಚ್ಚಿನ ರೋಗ ಸಾಮಥ್ರ್ಯವನ್ನು ಗಳಿಕೆ ಮಾಡಿ ಕೊಳ್ಳ್ಳುತ್ತವೆ. ಇನ್ನುಳಿದ ಸಮಯದಲ್ಲಿ ಮೌನವಾಗಿರುತ್ತವೆ. ಅಧಿಕ ರೋಗ ಸಾಮಥ್ರ್ಯವಿರುವ ವೈರಾಣುಗಳು ಗಂಭೀರ ಸ್ವರೂಪದ ಕಾಯಿಲೆಗಳನ್ನುಂಟು ಮಾಡುತ್ತವೆ. ಉದಾ-ನಿಫಾ ವೈರಸ್ಸು.
ಸೋಂಕಾಣುಗಳು ತಗುಲಿದ ಎಲ್ಲರಲ್ಲೂ ಸೋಂಕು ರೋಗಗಳು ಉತ್ಪತ್ತಿಯಾಗು ವುದಿಲ್ಲ. ಸೋಂಕಾಣುವಿನ ರೋಗೋತ್ಪತ್ತಿ ಸಾಮಥ್ರ್ಯ ಮತ್ತು ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಇವುಗಳ ಸಾಮಥ್ರ್ಯಕ್ಕನುಗುಣವಾಗಿ ರೋಗೋತ್ಪತ್ತಿ ನಿರ್ಧಾರವಾಗುತ್ತದೆ. ಸೋಂಕಾಣುವಿನ ರೋಗೋತ್ಪತ್ತಿ ಸಾಮಥ್ರ್ಯ ಮನುಷ್ಯ ದೇಹದ ನಿರೋಧಕ ಶಕ್ತಿಯನ್ನು ಹಿಮ್ಮೆಟ್ಟಿಸಿದಾಗ ಮಾತ್ರ ಸೋಂಕಾಣುಗಳು ವೃದ್ಧಿಯಾಗಿ ರೋಗ ಉತ್ಪತ್ತಿಯಾಗುತ್ತದೆ. ಪರಿಸ್ಥಿತಿ ವ್ಯತಿರಿಕ್ತವಾಗಿದ್ದಲ್ಲಿ ಮನುಷ್ಯನ ರೋಗ ನಿರೋಧಕ ಶಕ್ತಿ ಸೋಂಕಾಣುಗಳನ್ನು ಸದೆ ಬಡಿದು ಅವುಗಳನ್ನು ನಾಶಪಡಿಸಿ, ರೋಗೋ ತ್ಪತ್ತಿಯಾಗದಂತೆ ತಡೆಯುತ್ತದೆ. ಸಮರ್ಥ ರೋಗ ನಿರೋಧಕ ಶಕ್ತಿಯ ಗಳಿಕೆ, ಜನ್ಮ ದತ್ತ ಗಳಿಕೆ ಮತ್ತು ಆರೋಗ್ಯಕರ ಜೀವನ ಶೈಲಿಗಳನ್ನು ಅವಲಂಬಿಸಿರುತ್ತದೆ. ಸಮ ತೋಲನ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಯೋಗಾಭ್ಯಾಸ, ಧೂಮಪಾನ, ಮದ್ಯಪಾನ, ಮತ್ತಿತರ ದುಶ್ಚಟಗಳ ರಹಿತ ಬದುಕು ಮತ್ತು ಸದಾ ಕಾಲ ಸಂತೋಷ ವಾಗಿರುವ ಮನಸ್ಥಿತಿ ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ.
ಮಾರಣಾಂತಿಕ ಸೋಂಕು ರೋಗಗಳು
ನಿಫಾ ವೈರಸ್ ಸೋಂಕು, ಹೆಚ್1 ಎನ್1 ಸೋಂಕು, ಆಂಥ್ರಾಕ್ಸ್, ಜಪಾನಿನ ಮೆದುಳೂತುರಿ, ಈಬೋಲಾ ವೈರಸ್ ಇತ್ಯಾದಿ ವೈರಸ್ ಸೋಂಕುಗಳು ದಿಢೀರನೆ ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ರೋಗಿಯನ್ನು ಬಲಿ ತೆಗೆದುಕೊಳ್ಳುತ್ತವೆ. ಇವು ಸಾಂಕ್ರಾಮಿಕ ರೋಗದಂತೆ ಬಹು ಬೇಗ ಹರಡಿ ಬಹುಪಾಲು ಜನರನ್ನು ಏಕ ಕಾಲದಲ್ಲಿ ಕಾಯಿಲೆಗೀಡು ಮಾಡುತ್ತವೆ. ಈ ವೈರಾಣುಗಳನ್ನು ಉದ್ದೇಶಪೂರ್ವಕ ವಾಗಿ ಮನುಷ್ಯರನ್ನು ಕೊಲ್ಲಲು ಜೈವಿಕ ಭಯೋತ್ಪಾದನೆ (Bio Terrorism) ಗಾಗಿ ಉಗ್ರಗಾಮಿಗಳು ಉಪಯೋಗಿಸುತ್ತಾರೆ. ಈ ಭಯಾನಕ ರೋಗಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ಇವುಗಳನ್ನು ತಡೆಗಟ್ಟುವ ಕಾರ್ಯಕ್ರಮಗಳೇ ಹೆಚ್ಚು ಸಮಂಜಸ. ಇವು ಸಮುದಾಯದಲ್ಲಿ ಬಹುಬೇಗ ಹರಡಿ ಒಮ್ಮೆಲೆ ಜನರನ್ನು ಬಲಿತೆಗೆದುಕೊಳ್ಳುತ್ತವೆ.
ನಿಫಾ ವೈರಸ್ಸಿನ ಸೋಂಕು
ನಿಫಾ ವೈರಸ್ಸಿನ ಸೋಂಕು ಈಗ ಕೇರಳ ದಲ್ಲಿ ಕಂಡು ಬಂದಿದ್ದು, ಈಗಾಗಲೇ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ. ನಿಫಾ ವೈರಾಸ್ ಆರ್.ಎನ್.ಎ. ವೈರಸ್ಸಾಗಿ ದ್ದು, ಇದು ಹಂದಿ, ನಾಯಿ, ಬೆಕ್ಕು, ಆಡು ಮತ್ತು ಬಾವಲಿಗಳು ಇದರ ಸೋಂಕಿಗೆ ಪ್ರಧಾನವಾಗಿ ಈಡಾಗುತ್ತವೆ. ಇದು ಪ್ರಧಾನ ವಾಗಿ ಪ್ರಾಣಿಗಳ ಕಾಯಿಲೆಯಾಗಿದ್ದು, ಪ್ರಾಣಿಗಳಿಂದ ಮನುಷ್ಯನಿಗೆ ಹಣ್ಣು, ಆಹಾರ, ಗಾಳಿ, ನೀರಿನಿಂದ ಹರಡುತ್ತದೆ. (Zonotic Disease) ಬಾವಲಿಗಳಲ್ಲಿ ನಿಫಾ ವೈರಸ್, ಅವುಗಳಿಗೆ ಯಾವುದೇ ಕಾಯಿಲೆಯನ್ನುಂಟು ಮಾಡದೆ ಅದರಲ್ಲಿ ಆಶ್ರಯ ಪಡೆದು ವೃದ್ಧಿಯಾಗುತ್ತವೆ. ಬಾವಲಿಯ ಜೊಲ್ಲು ರಸ, ಮಲ, ಮೂತ್ರ, ವೀರ್ಯಗಳಲ್ಲಿ ವಾಸಿಸುವ ಈ ವೈರಸ್ ಸ್ರಾವಗಳು ನೀರಿಗೆ, ಆಹಾರ ಪದಾರ್ಥಗಳಿಗೆ, ಹಣ್ಣುಗಳಿಗೆ ಮಿಶ್ರಿತವಾಗಿ ಅವುಗಳ ಮೂಲಕ ಮಾನವನನ್ನು ಸೇರಿ ಅವನಲ್ಲಿ ರೋಗವನ್ನುಂಟು ಮಾಡುತ್ತವೆ. ಬಾವಲಿ, ಹಣ್ಣುಗಳನ್ನು ಕಚ್ಚಿದಾಗ ಅವು ಗಳಿಗೆ ಲೇಪನಗೊಳ್ಳುವ ಜೊಲ್ಲುರಸದಲ್ಲಿ ರುವ ವೈರಾಣುಗಳು ಹಣ್ಣಿನ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತವೆ. ಬಾವಲಿಗಳ ಮಲ-ಮೂತ್ರಗಳು ನೀರಿಗೆ ಮಿಶ್ರಣವಾದಲ್ಲಿ ನೀರಿನ ಮೂಲಕವೂ ಮಾನವ ದೇಹವನ್ನು ವೈರಸ್ಸುಗಳು ಪ್ರವೇಶಿ ಸುತ್ತವೆ. ಮಾನವ ದೇಹವನ್ನು ಪ್ರವೇಶಿಸಿದ 6-11 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೈರಾಣುಗಳು ಪ್ರಧಾನವಾಗಿ ಮೆದುಳು ಮತ್ತು ಇನ್ನಿತರ ನರಮಂಡಲ ಹಾಗೂ ಉಸಿರಾಟದ ಅಂಗಾಂಗವನ್ನು ಪ್ರಧಾನವಾಗಿ ಕಾಯಿಲೆಗೀಡು ಮಾಡುತ್ತವೆ.
ರೋಗ ಲಕ್ಷಣಗಳು ಮತ್ತು ಚಿಕಿತ್ಸೆ
ಜ್ವರ, ಮಾನಸಿಕ ಅಸ್ತವ್ಯಸ್ತತೆ, ಪ್ರಜ್ಞಾಹೀನತೆ, ಫಿಟ್, ಅತೀವ ನಿಶ್ಯಕ್ತಿ, ತಲೆನೋವು, ಉಸಿರಾಟ ತೊಂದರೆ, ಕೆಮ್ಮು, ವಾಂತಿ, ಮೈಕೈ ನೋವು, ಭೇದಿ, ಹೃದಯದ ಬಡಿತ ಏರಿಕೆ, ಉಸಿರಾಟದ ಏರಿಕೆ, ಏರು ರಕ್ತದ ಒತ್ತಡ ಅಥವಾ ರಕ್ತ ಒತ್ತಡ ಕುಸಿತ ಇತ್ಯಾದಿ ತೊಂದರೆಗಳುಂಟಾಗುತ್ತವೆ. ಕಣ್ಣಿನ ಲಕ್ವ, ಮುಖದ ಲಕ್ವ, ಕೈಕಾಲುಗಳ ಲಕ್ವಗಳುಂಟಾಗುತ್ತವೆ. ಈ ಬಗೆಯ ರೋಗ ಲಕ್ಷಣಗಳು ದಿಢೀರನೆ ಕಾಣಿಸಿಕೊಳ್ಳು ತ್ತವೆ. ಈ ಲಕ್ಷಣಗಳು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಬಹುಪಾಲು ರೋಗಿಗಳು ಸಾವನ್ನಪ್ಪುತ್ತಾರೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಒತ್ತಾಸೆಯ ಸಾಂದರ್ಭಿಕ ಚಿಕಿತ್ಸೆ ಗಳು ರೋಗ ನಿರೋಧಕ ಸಾಮಥ್ರ್ಯ ಚೆನ್ನಾಗಿರುವ ರೋಗಿಗಳನ್ನು ಕಾಯಿಲೆ ಯಿಂದ ಪಾರು ಮಾಡಬಹುದು. ಮಕ್ಕಳು, ಮುಪ್ಪಿನವರು ಮತ್ತು ರೋಗನಿರೋಧಕ ಸಾಮಥ್ರ್ಯ ಕುಗ್ಗಿದವರಲ್ಲಿ ಸಾವು ಖಚಿತ. ಬದುಕುಳಿದವರಲ್ಲಿ ಶಾಶ್ವತ ನರನ್ಯೂನತೆಗಳು, ಫಿಟ್‍ಗಳು ಕಾಣಿಸಿ ಕೊಳ್ಳುತ್ತವೆ.
ರೋಗದ ಇತಿಹಾಸ
ನಿಫಾ ವೈರಸ್ ಸೋಂಕನ್ನು 1999ರಲ್ಲಿ ಮಲೇಷಿಯಾದ ನಿಫಾ ಗ್ರಾಮದಲ್ಲಿ ಹಂದಿ ಸಾಕುವವರಲ್ಲಿ ಮೊಟ್ಟ ಮೊದಲಿಗೆ ಗುರುತಿಸಲಾಯಿತು. ಈ ಕಾರಣದಿಂದಲೆ ಈ ವೈರಸ್ಸನ್ನು “ನಿಫಾ” ವೈರಸ್ ಎಂದು ಕರೆದಿರುವುದು. ಭಾರತದಲ್ಲೂ ಈ ಸೋಂಕು ಇದ್ದು, ಆಗ್ಗಿಂದಾಗ್ಗೆ ಕಡಿಮೆ ಪ್ರಮಾಣದಲ್ಲಿ ಮರುಕಳಿಸುತ್ತಿದೆ.
ಕಾಯಿಲೆಯ ದೃಢೀಕರಣ
- ವೈರಾಣುವಿಗೆ ವಿರುದ್ಧವಾಗಿ ಮನುಷ್ಯನ ದೇಹದಲ್ಲಿ ರೋಗನಿರೋಧಕ ವಸ್ತುಗಳು ಉತ್ಪತ್ತಿಯಾಗಿ ವೈರಾಣುಗಳನ್ನು ನಾಶಪಡಿಸುತ್ತವೆ.
- ರೋಗಿಯ ರಕ್ತವನ್ನು ಇಲೈಸಾ ಪರೀಕ್ಷೆಗೆ ಒಳಪಡಿಸಿ ರಕ್ತದಲ್ಲಿರುವ ನಿಫಾ ವೈರಾಣು ನಿರೋಧಕ ವಸ್ತುಗಳನ್ನು ಗುರುತಿಸುವುದರಿಂದ ಕಾಯಿಲೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ.
- ಸತ್ತ ಪ್ರಾಣಿಗಳ ರಕ್ತದಲ್ಲಿ ಮತ್ತು ಅಂಗಾಂಶಗಳಲ್ಲಿ ವೈರಾಣುಗಳಿರುವಿಕೆ ಯನ್ನು ದೃಢೀಕರಿಸಿಕೊಳ್ಳುವುದರಿಂದ.
ಕಾಯಿಲೆ ಹರಡುವ ವಿಧಾನ
- ಬಾವಲಿಗಳು ಕಚ್ಚಿದ ಹಣ್ಣುಗಳ ಸೇವನೆ.
- ಬಾವಲಿಗಳ ಮಲ-ಮೂತ್ರ ಮಿಶ್ರಿತ ನೀರಿನ(ಬಾವಿನೀರು) ಸೇವನೆ.
- ಹಂದಿ, ನಾಯಿ, ಬೆಕ್ಕು, ಕುದುರೆ, ಆಡು, ಕುರಿಗಳ ಉಸಿರಿನ ಸಂಪರ್ಕದಿಂದ.
- ಸೋಂಕಿತ ಮನುಷ್ಯನಿಂದ ಮನುಷ್ಯ ನಿಗೆ ಉಸಿರಿನ ಮೂಲಕ.
ಯಾರಲ್ಲಿ ನಿಫಾ ಸೋಂಕನ್ನು ಶಂಕಿಸಬೇಕು?
ಬಾವಲಿಗಳ ಸಂತಾನ ಸಮಯ ಡಿಸೆಂಬರ್‍ನಿಂದ ಮೇ ತಿಂಗಳಾಗಿರು ವುದರಿಂದ ಈ ಅವಧಿಯಲ್ಲಿ ಕಾಣಿಸಿ ಕೊಳ್ಳುವ ಅತೀವ ಜ್ವರ, ಪ್ರಜ್ಞಾಹೀನತೆ, ಮಾನಸಿಕ ಅವ್ಯವಸ್ಥೆ ದಿಢೀರನೆ ಕಾಣಿಸಿಕೊಂಡು ಬಹುಬೇಗ ಗಂಭೀರ ಸ್ಥಿತಿ ತಲುಪುವವರಲ್ಲಿ ಇದನ್ನು ಶಂಕಿಸಬೇಕು.
ತಡೆಗಟ್ಟುವ ವಿಧಾನ
- ಕಚ್ಚಿದ ಗುರುತಿರುವ ಹಣ್ಣುಗಳನ್ನು ತಿನ್ನಬಾರದು.
- ಹಣ್ಣುಗಳನ್ನು ಶುಚಿತ್ವಗೊಳಿಸಿ ತಿನ್ನಬೇಕು.
- ಸೋಂಕಿರುವ ಹಂದಿ, ನಾಯಿ, ಆಡು, ಕುರಿ ಮತ್ತು ಬಾವಲಿಗಳಿಂದ ದೂರವಿರಬೇಕು.
- “ನೀರಾ”ವನ್ನು ಸೇವಿಸಬಾರದು.
- ನಿಫಾ ರೋಗಿಗಳ ಸಂಪರ್ಕದಲ್ಲಿರು ವವರು ಮಾಸ್ಕನ್ನು ಮುಖಕ್ಕೆ ಹಾಕಿ ಕೊಂಡು ಮತ್ತು ಕೈಗೆ ಕೈ ಚೀಲಗಳನ್ನು ಹಾಕಿಕೊಂಡು ಎಚ್ಚರಿಕೆಯಿಂದ ಜೊತೆಗಿರಬೇಕು.
- ನಿಫಾ ಸೋಂಕಿರುವ ಹಾಗೂ ಶಂಕಿತ ರೋಗಿಗಳನ್ನು ಆಸ್ಪತ್ರೆಯ ಪ್ರತ್ಯೇಕ ಕೊಠಡಿಗಳಲ್ಲಿಟ್ಟು ಚಿಕಿತ್ಸೆ ಮಾಡಬೇಕು.
- ಆಸ್ಪತ್ರೆಗಳಲ್ಲಿ ಸೋಂಕಿನ ರೋಗಿಗಳನ್ನು ಪ್ರತ್ಯೇಕ ವಾರ್ಡಿನಲ್ಲಿಟ್ಟು ಸೋಂಕು ನಿರೋಧಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು.
- ಆಸ್ಪತ್ರೆಯ ಸಿಬ್ಬಂದಿಗಳು ಕಟ್ಟು ನಿಟ್ಟಾಗಿ ಸೋಂಕು ತಡೆಗಟ್ಟುವ ವಿಧಿ-ವಿಧಾನಗಳನ್ನು ಅನುಸರಿಸಬೇಕು.
- ಪರಿಸರದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
- ಸಾವಿಗೀಡಾದ ರೋಗಿಯ ಹೆಣವನ್ನು ಮುಟ್ಟಬಾರದು, ಹತ್ತಿರ ಹೋಗಬಾರದು, ಸುಡುವುದು ಕ್ಷೇಮಕರ.
- ನಿಫಾ ವೈರಾಣು ನಿರೋಧಕ ಲಸಿಕೆ ಕಂಡು ಹಿಡಿಯುವ ಸಂಶೋಧನೆ ಜರುಗುತ್ತಿದೆ.
ಸೋಂಕಾಣುಗಳು ಸೂಕ್ಷ್ಮಜೀವಿ ನಿರೋಧಕ ಔಷಧಗಳಿಗೆ ಪ್ರತಿರೋಧತ್ವವನ್ನು ರೂಢಿಸಿಕೊಂಡು ನಾಶವಾಗದೆ ಉಳಿಯುವ ಉಪಾಯಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಇದು ಹೊಸ ಹೊಸ ಸೂಕ್ಷ್ಮಜೀವಿ ನಿರೋಧಕ ಔಷಧಗಳ ಅನ್ವೇಷಣೆಗಳಿಗೆ ನಾಂದಿಯಾಗುತ್ತಿದೆ. ಸೂಕ್ಷ್ಮಜೀವಿಗಳೂ ಹೊಸ ಹೊಸ ಜೀವಿಗಳಾಗಿ ರೂಪಗೊಂಡು ಅವುಗಳನ್ನು ನಾಶಮಾಡುವ ಮನುಷ್ಯನ ಪ್ರಯತ್ನದಿಂದ ಪಾರಾಗುತ್ತಿವೆ. ಎಲ್ಲವೂ ಬದುಕುಳಿಯಬೇಕೆಂಬುದು ಸೃಷ್ಟಿಯ ನಿಯಮ. ನಿಫಾ ವೈರಾಣು ಸಹ ರೂಪಾಂತರಗೊಂಡಿರುವ ಹೊಸ ಭಯಾನಕ ವೈರಾಣುವಿರಬಹುದು.