ಫೆ. 9ರಂದು ಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆ
ಮೈಸೂರು

ಫೆ. 9ರಂದು ಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆ

January 26, 2020
  • ಜ.28 ನಾಮಪತ್ರ ಸಲ್ಲಿಕೆಗೆ ಕಡೇ ದಿನ, ಬಿಜೆಪಿ, ಕಾಂಗ್ರೆಸ್‍ನಲ್ಲಿ ತಲಾ ಮೂವರು ಆಕಾಂಕ್ಷಿಗಳು
  • ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಜೆಡಿಎಸ್‍ನ ರಾಜು ಮತ್ತೆ ಸ್ಪರ್ಧೆಗೆ ಚಿಂತನೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ ಸದಸ್ಯ ಸ್ಥಾನಕ್ಕೆ ಫೆಬ್ರವರಿ 9ರಂದು ಉಪ ಚುನಾವಣೆ ನಡೆಯಲಿದೆ.

ಮೈಸೂರಿನ ಆಕಾಶವಾಣಿ ಸರ್ಕಲ್‍ನಲ್ಲಿರುವ ಪಾಲಿಕೆ ವಲಯ ಕಚೇರಿ-4ರಲ್ಲಿ ಚುನಾವಣಾಧಿಕಾರಿ ಕಚೇರಿ ಯಲ್ಲಿ ಜನವರಿ 1ರಿಂದ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ನಾಲ್ವರು ಮಾತ್ರ ನಾಮ ಪತ್ರಗಳ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಹೋಗಿದ್ದಾರಾದರೂ ಇಂದು ಮಧ್ಯಾಹ್ನ 3 ಗಂಟೆ ವರೆಗೆ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸಿಲ್ಲ ಎಂದು ಚುನಾವಣಾಧಿಕಾರಿ ಶಿವೇಗೌಡ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಜನವರಿ 28ರ ಮಂಗಳವಾರ ಮಧ್ಯಾಹ್ನ 3 ಗಂಟೆ ವರೆಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶವಿದೆ. ಜನವರಿ 29ರಂದು ನಾಮಪತ್ರಗಳ ಪರಿಶೀಲನೆ ನಡೆಯ ಲಿದೆ. ಜನವರಿ 31 ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನವಾಗಿದೆ. ಫೆಬ್ರವರಿ 9ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಫೆಬ್ರವರಿ 11 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿವೇಗೌಡ ತಿಳಿಸಿದರು.

ಆಕಾಂಕ್ಷಿಗಳು: ಈ ಉಪ ಚುನಾ ವಣೆಯಲ್ಲಿ 18ನೇ ವಾರ್ಡ್ (ಯಾದವಗಿರಿ) ಪರಿಶಿಷ್ಟ ಪಂಗಡ (ಎಸ್‍ಟಿ) ಅಭ್ಯರ್ಥಿಗೆ ಮೀಸಲಾಗಿದೆ. ಈ ವ್ಯಾಪ್ತಿಯಲ್ಲಿ ಬಿಜೆಪಿಗೆ ನೆಲೆ ಯಿದ್ದು, ಕಾಂಗ್ರೆಸ್ ಸಹ ಪೈಪೋಟಿ ನೀಡಬಹುದಾಗಿದೆ. ಆದರೆ ಜಾತ್ಯಾತೀತ ಜನತಾ ದಳಕ್ಕೆ ಇಲ್ಲಿ ನೀರಸ ಪ್ರತಿಕ್ರಿಯೆ ಈವರೆಗಿದೆ.

ಬಿಜೆಪಿ: ಉಪ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯಿಂದ ಹಿಂದೂ ಪರ ಸಂಘಟನೆಯ ಮೈಕಾ ಪ್ರೇಮ್‍ಕುಮಾರ್, ಗೋಕುಲಂನ ಶಿವಪ್ರಕಾಶ್ ಹಾಗೂ ಮಂಜುನಾಥಪುರದ ಮಹೇಶ ಸ್ಪರ್ಧಿಸಲು ಮುಂದಾಗಿದ್ದು, ಪಕ್ಷದಿಂದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ. ಬಿ.ಹೆಚ್. ಮಂಜು ನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಇನ್ನೂ ಹಲವರಿಂದ ಅರ್ಜಿ ಬರಬಹುದು. ನಾಳೆ (ಜ. 26) ಸಂಜೆ ವೇಳೆಗೆ ಪಕ್ಷದ ಮುಖಂಡರೆಲ್ಲರೂ ಸೇರಿ ಆಕಾಂಕ್ಷಿಗಳ ಸಭೆ ನಡೆಸಿ ಅಂತಿಮವಾಗಿ ಗೆಲ್ಲುವ ಅಭ್ಯರ್ಥಿ ಆಕಾಂಕ್ಷಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್: 2018ರ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದ ಕಾಂಗ್ರೆಸ್‍ನ ಆರ್. ರವೀಂದ್ರಕುಮಾರ್ ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಉಪಾಧ್ಯಕ್ಷ ಕನಕಗಿರಿಯ ಜಯಕುಮಾರ್ ಹಾಗೂ ಎಸ್.ಆರ್. ಮಂಜುನಾಥ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಜೆಡಿಎಸ್: ಕಳೆದ ಚುನಾವಣೆಯಲ್ಲಿ ಕೇವಲ 421 ಮತ ಪಡೆದು ಪರಾಭವಗೊಂಡಿದ್ದ ಜೆಡಿಎಸ್‍ನ ಎನ್.ರಾಜು ಅವರು ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆಗಿಳಿಯಲು ಬಯಸಿದ್ದಾರೆ. ನಾಳೆ (ಭಾನುವಾರ) ಸಂಜೆವರೆಗೆ ನೋಡಿ ಕೊಂಡು ಅರ್ಜಿ ಸಲ್ಲಿಸಿದವರ ಪೈಕಿ ಪಕ್ಷದ ಮುಖಂಡರು ಒಮ್ಮತದ ಅಭ್ಯರ್ಥಿಗೆ ಜೆಡಿಎಸ್‍ನಿಂದ ಟಿಕೆಟ್ ನೀಡಲಿ ದ್ದಾರೆ ಎಂದು ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲುವೇ ಗೌಡ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

2018ರ ಫಲಿತಾಂಶ: 2018ರ ಆಗಸ್ಟ್ 31ರಂದು ನಡೆದಿದ್ದ ಮೈಸೂರು ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 18ರಲ್ಲಿದ್ದ ಒಟ್ಟು 18,815 ಮತದಾರರ ಪೈಕಿ 5651 ಮಂದಿ ಮತ ಚಲಾಯಿ ಸಿದ್ದರು. ಆ ಪೈಕಿ 76 ಮತಗಳು ‘ನೋಟಾ’ ಪಾಲಾಗಿದ್ದವು.

ಬಿಜೆಪಿಯ ಗುರುವಿನಾಯಕ 2,683 ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಕಾಂಗ್ರೆಸ್‍ನ ಆರ್.ರವೀಂದ್ರ ಕುಮಾರ್‍ಗಿಂತ 454 ಅಧಿಕ ಮತ ಗಳಿಸಿ ಪಾಲಿಕೆ ಸದಸ್ಯ ರಾಗಿ ಆಯ್ಕೆಯಾಗಿದ್ದರು. ಉಳಿದಂತೆ ಕಾಂಗ್ರೆಸ್‍ನ ಆರ್.ರವೀಂದ್ರಕುಮಾರ್ 2,229, ಜೆಡಿಎಸ್‍ನ ಎನ್.ರಾಜು 421, ಪಕ್ಷೇತರರಾದ ಎಸ್.ಮಹೇಶ್ 177 ಹಾಗೂ ಸ್ವಾಮಿ 65 ಮತಗಳನ್ನು ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 2018ರ ಸೆಪ್ಟೆಂಬರ್ 3ರಂದು ಫಲಿತಾಂಶ ಪ್ರಕಟವಾಗಿತ್ತು.

Translate »