ಪ್ರಧಾನಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ
ನವದೆಹಲಿ, ಆ.5-ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ಮತ್ತು 35ಎ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿ ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮಾತು ಉಳಿಸಿಕೊಂಡಿದ್ದಾರೆ.
ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯು ತ್ತಿವೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಗೊಳಿಸುವುದರ ವಿರುದ್ಧ ಕಾಂಗ್ರೆಸ್
ನೇತೃತ್ವದಲ್ಲಿ ಪ್ರತಿಪಕ್ಷಗಳು ಒಟ್ಟಾಗಿ ಕೇಂದ್ರದ ವಿರುದ್ಧ ಸಮರ ಸಾರಿವೆ. ಈ ವಿವಾದ ಜಮ್ಮು-ಕಾಶ್ಮೀರದ ನಾಗರಿಕರು, ಅಲ್ಲಿನ ಪರಿಸ್ಥಿತಿಗಿಂತ ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ತಮ್ಮ ಮತ ಬ್ಯಾಂಕ್ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಸರಕಾಗಿ ಪರಿಣಮಿಸಿದೆ. ಇದೇ ವಿಚಾರದಲ್ಲಿ ಕಾಂಗ್ರೆಸ್, ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಸೇರಿದಂತೆ ಎನ್‍ಡಿಎ ಹೊರತಾದ ಬಹುತೇಕ ಪಕ್ಷಗಳು ಕೇಂದ್ರದ ವಿರುದ್ಧ ಸಮರ ಸಾರಿವೆ. ಆದರೆ, ಆ ಪಕ್ಷಗಳ ನಿಲುವು ಮತ್ತು ಪಾಕಿಸ್ತಾನದ ನಿಲುವು ಒಂದೇ ತೆರನಾಗಿರುವುದರಿಂದ ಜಮ್ಮು-ಕಾಶ್ಮೀರದ ಮಟ್ಟಿಗೆ ಈ ಹೋರಾಟ ಯಶಸ್ವಿ ಯಾಗಬಹುದಾದರೂ ದೇಶದ ಇತರೆ ಭಾಗಗಳಲ್ಲಿ ಬಿಜೆಪಿಗೆ ವರದಾನವಾಗುವುದು ಖಚಿತ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370 ಮತ್ತು ವಿಧಿ 35ಎ ಅನ್ನು ಹಿಂಪಡೆದಿದೆ. ಗೃಹ ಸಚಿವ ಅಮಿತ್ ಶಾ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸಲಾಗಿದೆ ಎಂದು ಘೋಷಣೆ ಮಾಡಿದರು.
ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸುವ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದಾರೆ. ಅತ್ತ ಅಮಿತ್ ಶಾ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ತಿದ್ದುಪಡಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಎಷ್ಟೇ ಸಮಾಧಾನಿಸುವ ಪ್ರಯತ್ನ ಮಾಡಿದರೂ ಸದಸ್ಯರು ಸುಮ್ಮನಾಗಲಿಲ್ಲ. ಆ ಮೂಲಕ ಜಮ್ಮು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಬೆಳವಣಿಗೆಗಳು ಮತ್ತು ತೀವ್ರ ಕುತೂಹಲಕ್ಕೆ ತೆರೆ ಬಿದ್ದಿದ್ದು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ.
ಸೂಚನೆ ನೀಡಿತ್ತು: ಮೋದಿ-2 ಸರ್ಕಾರ ಅಧಿಕಾರಕ್ಕೆ ಬಂದು, ಅಮಿತ್ ಶಾ ಗೃಹ ಸಚಿವರಾದಾಗಲೇ ಸಂವಿಧಾನದ ವಿಧಿ 370 ಮತ್ತು ವಿಧಿ 35ಎ ರದ್ದುಗೊಳಿಸುವ ಸೂಚನೆ ದೊರಕಿತ್ತು. ಸೋಮವಾರ ಈ ನಿರ್ಧಾರ ಕೈಗೊಳ್ಳಲು ಮೊದಲೇ ನಿರ್ಧರಿಸಿದ್ದ ಕೇಂದ್ರ ಸರ್ಕಾರ ಕಳೆದ ಒಂದು ವಾರದಿಂದ ಅದಕ್ಕೆ ಬೇಕಾದ ಅಂತಿಮ ಸಿದ್ಧತೆಗಳನ್ನು ನಡೆಸಿತ್ತು. ಆದರೆ, ಇದಕ್ಕೆ ಬೇಕಾದ ಪೂರ್ವ ತಯಾರಿಗಾಗಿ ಮೋದಿ ಸರ್ಕಾರ ಬರೋಬ್ಬರಿ ಐದು ವರ್ಷ ತೆಗೆದುಕೊಂಡಿತ್ತು. ಅದಕ್ಕೆ ಪೂರಕವಾಗಿ ಜಮ್ಮು-ಕಾಶ್ಮೀರ ಭಾಗದ ಜನರ ನಾಡಿ ಮಿಡಿತ ಅರಿಯುವ ಕೆಲಸವನ್ನೂ ಅದು ಮಾಡಿತ್ತು.
ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂಬ ಮೂರು ಭಾಗಗಳಿವೆ. ಈ ಪೈಕಿ ಜಮ್ಮುವಿನಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೆ, ಕಾಶ್ಮೀರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಡಾಕ್‍ನಲ್ಲಿ ಬೌದ್ಧರ ಸಂಖ್ಯೆ ಹೆಚ್ಚಿದೆ. ಅವುಗಳಲ್ಲಿ ಜಮ್ಮು ಮತ್ತು ಲಡಾಕ್ ಭಾಗದ ಜನ ತಮ್ಮ ರಾಜ್ಯ ಭಾರತದ ಅವಿಭಾಜ್ಯ ಅಂಗವಾಗಿರಬೇಕು ಎಂದು ಬಯಸಿದ್ದರೆ, ಕಾಶ್ಮೀರದ ಮುಸ್ಲಿಮರು ಪ್ರತ್ಯೇಕತೆಯತ್ತ ವಾಲಿದ್ದರು. ಈ ರೀತಿ ಪ್ರತ್ಯೇಕತೆಯ ಕೂಗು ಎತ್ತಿದವರಲ್ಲಿ ಪಾಕಿಸ್ತಾನದ ಬಗ್ಗೆ ಒಲವು ಹೊಂದಿದವರು, ಪ್ರತ್ಯೇಕತಾವಾದಿಗಳೇ ಅಧಿಕವಾಗಿದ್ದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಸೇರಿದಂತೆ ಆ ರಾಜ್ಯದ ರಾಜಕೀಯ ಪಕ್ಷಗಳು ವಿಶೇಷ ಸ್ಥಾನಮಾನದ ಪರವಾಗಿದ್ದವು. ವಿಶೇಷವೆಂದರೆ, ಆ ರಾಜ್ಯದ ಕಾಶ್ಮೀರ ಸೇರಿದಂತೆ ಎಲ್ಲಾ ಭಾಗದ ಮುಸ್ಲಿಮೇತರರಿಗೆ ವಿಶೇಷ ಸ್ಥಾನಮಾನ ಬೇಕಾಗಿರಲಿಲ್ಲ. ಇದೆಲ್ಲವನ್ನು ಅಧ್ಯಯನ ನಡೆಸಿಯೇ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ವಿಧಿ 370 ಮತ್ತು 35ಎ ವಿಧಿಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ.
2014ರಿಂದಲೇ ಕಾರ್ಯತಂತ್ರ: ಸಂವಿಧಾನದ 370 ಮತ್ತು 35ಎ ವಿಧಿ ರದ್ದುಪಡಿಸುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಸ್ಥಾನಮಾನ ವಿರೋಧಿಸುವವರ ಪಾಲಿನ ಹೀರೋ ಆಗಿದ್ದಾರೆ. ಆದರೆ, ಈ ಪ್ರಕ್ರಿಯೆ ಚುರುಕುಗೊಳಿಸಿ ನಿರ್ಧಾರ ಕೈಗೊಂಡಿದ್ದು ಅಮಿತ್ ಶಾ ಅವರೇ ಆಗಿದ್ದರೂ 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೇ ಅದಕ್ಕೆ ಬೀಜ ಬಿತ್ತನೆ ಮಾಡಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಬೆಂಬಲಿಸುತ್ತಾ, ಭಾರತೀಯ ಸೇನೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರು, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದವರು, ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ಕ್ರಮ ಅಂದಿನಿಂದಲೇ ಶುರುವಾಗಿತ್ತು. ಆರಂಭದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಕ್ರಮೇಣ ಜನರೂ ಕೇಂದ್ರ ಸರ್ಕಾರ ಮತ್ತು ಸೇನೆಯ ಪರ ನಿಂತರು. ಇಡೀ ದೇಶವೇ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು. ಅದಕ್ಕಾಗಿ ವಿಶೇಷ ಸ್ಥಾನಮಾನ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿತ್ತು.
ರಾಷ್ಟ್ರೀಯತೆ, ದೇಶಪ್ರೇಮ, ಐಕ್ಯತೆಯ ವಿಚಾರ ಬಂದಾಗ ದೇಶವೇ ಒಟ್ಟಾಗುತ್ತದೆ ಎಂಬುದನ್ನು ಮೋದಿ-1 ಸರ್ಕಾರದ ಸಮಯದಲ್ಲಿ ದೃಢಪಡಿಸಿಕೊಳ್ಳಲಾಯಿತು. ಅಲ್ಲದೆ, 2019ರ ಚುನಾವಣೆಯಲ್ಲಿ 2014ಕ್ಕಿಂತಲೂ ಹೆಚ್ಚು ಜನಬೆಂಬಲದೊಂದಿಗೆ ಮೋದಿ-2 ಸರ್ಕಾರ ಅಧಿಕಾರಕ್ಕೆ ಬಂದಾಗ ಅದು ಇನ್ನಷ್ಟು ಸ್ಪಷ್ಟವಾಯಿತು. ಜತೆಗೆ ಮೋದಿ-2ನಲ್ಲಿ ಅಮಿತ್ ಶಾ ಗೃಹ ಸಚಿವರಾಗಿದ್ದು, ಮತ್ತಷ್ಟು ವೇಗ ಪಡೆದುಕೊಂಡಿತು. ಅದರ ಪರಿಣಾಮ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ರಾಜಕೀಯ ಪಕ್ಷಗಳು ಪೂರ್ಣ ಎಚ್ಚೆತ್ತುಕೊಳ್ಳುವ ಮುನ್ನವೇ ಕೇಂದ್ರ ಸರ್ಕಾರ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸಿ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿದೆ. ಈಗ ಈ ವಿಚಾರದಲ್ಲಿ ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಕಾರಣದಿಂದಲೇ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ಆ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಭಯೋತ್ಪಾದಕರ ನಿಗ್ರಹಕ್ಕೆ ನೆರವಾಗಲಿದೆ ಎಂಬಿತ್ಯಾದಿ ವಿಚಾರಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಜನರಿಗೆ ತಲುಪಿಸುವ ಕೆಲಸ ಆರಂಭಿಸಿದೆ. ಬಿಜೆಪಿಯು ಜನರಲ್ಲಿ ವಾಸ್ತವ ಸಂಗತಿ ಬಿತ್ತುವ ಕೆಲಸ ಮಾಡುತ್ತಿದೆ.
ಪಾಕ್ ಮತ್ತು ಪ್ರತಿಪಕ್ಷಗಳ ಹೋಲಿಕೆಗೆ ಮುಂದಾಗಲಿದೆ ಬಿಜೆಪಿ: ಕೇಂದ್ರದ ಈ ಕಾರ್ಯಕ್ಕೆ ಪಾಕಿಸ್ತಾನದ ನಡೆಯೂ ನೆರವಾಗುತ್ತಿದೆ. ಭಾರತದ ಭಾಗವಾಗಿರುವ ಜಮ್ಮು-ಕಾಶ್ಮೀರದ ಬಗ್ಗೆ ಪಾಕಿಸ್ತಾನಕ್ಕೇಕೆ ಇಷ್ಟೊಂದು ಒಲವು ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ಈಗಾಗಲೇ ಎತ್ತಿದ್ದಾರೆ. ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸಲು ಪಾಕಿಸ್ತಾನ ವಿರೋಧಿಸುತ್ತದೆ ಎಂದಾದರೆ ಅದರಿಂದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿ ಭಾರತಕ್ಕೆ ಬೆದರಿಕೆಯೊಡ್ಡುವ ತನ್ನ ಹುನ್ನಾರಕ್ಕೆ ಅಡ್ಡಿಯಾಗುತ್ತಿದೆ ಎಂದರ್ಥ. ಆರ್ಥಿಕ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಮ್ಮು-ಕಾಶ್ಮೀರ ಪ್ರಗತಿ ಹೊಂದಿದರೆ ಪಾಕಿಸ್ತಾನದ ಬೇಳೆ ಬೇಯುವುದಿಲ್ಲ. ಹೀಗಾಗಿ ದೇಶದ ಆಂತರಿಕ ವಿಚಾರದ ಬಗ್ಗೆ ಪಾಕ್ ಪ್ರಸ್ತಾಪಿಸುತ್ತಿದೆ. ಅದಕ್ಕೆ ಪೂರಕವಾಗಿ ಪ್ರತಿಪಕ್ಷಗಳು ಕೂಡ ವರ್ತಿಸುತ್ತಿರುವುದರಿಂದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ದೇಶದ ಸಮಗ್ರತೆ, ಅಭಿವೃದ್ಧಿಗಿಂತ ಅಲ್ಪಸಂಖ್ಯಾತರ ಓಲೈಕೆ, ಮತಬ್ಯಾಂಕ್ ರಾಜಕಾರಣವೇ ಪ್ರಮುಖವಾಗಿದೆ ಎಂಬುದನ್ನು ಕೇಂದ್ರದಲ್ಲಿ ಅಧಿಕಾರದ ನೇತೃತ್ವ ವಹಿಸಿರುವ ಬಿಜೆಪಿ ದೇಶದ ಜನರಿಗೆ ಮುಟ್ಟಿಸುವ ಕೆಲಸ ಮಾಡುವುದು ಖಂಡಿತ. ಇದಕ್ಕೆ ಕಾರಣ, ಈ ಹಿಂದೆ ಉರಿ, ಪುಲ್ವಾಮಾ ದಾಳಿ ಮುಂತಾದ ಉಗ್ರರ ಅಟ್ಟಹಾಸ, ಸರ್ಜಿಕಲ್ ಸ್ಟ್ರೈಕ್, ಹೀಗೆ ಭಯೋತ್ಪಾದನೆ ಮತ್ತು ಜಮ್ಮು-ಕಾಶ್ಮೀರ ವಿಚಾರದಲ್ಲಿ ಪ್ರತಿಪಕ್ಷಗಳು ಪ್ರತಿ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದವು. ಆಗೆಲ್ಲಾ ದೇಶದ ಜನ ಕೇಂದ್ರದ ಜತೆ ನಿಂತಿದ್ದರು. ಅದರ ಪರಿಣಾಮ ದೇಶದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗಿ ಪ್ರತಿಪಕ್ಷಗಳ ಬಲ ಕುಂದಿತ್ತು. ಅದೇ ರೀತಿ ಸಂವಿಧಾನದ ವಿಧಿ 370 ಮತ್ತು ವಿಧಿ 35ಎ ರದ್ದು ವಿಚಾರವನ್ನೂ ರಾಷ್ಟ್ರೀಯತೆ ಮತ್ತು ಸಮಗ್ರತೆಗೆ ಸಮರ್ಥಿಸಿ, ಪ್ರತಿಪಕ್ಷಗಳ ವಿರುದ್ಧ ಸಮರ ಸಾರಲು ಬಿಜೆಪಿ ಯತ್ನಿಸುವುದು ಖಚಿತ.
ಜಮ್ಮು-ಕಾಶ್ಮೀರ, ಲಡಾಖ್ ಇನ್ನು ಮುಂದೆ ಕೇಂದ್ರಾಡಳಿತ ಪ್ರದೇಶ
ನವದೆಹಲಿ, ಆ. 5- ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ, 370 ಅನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರಕ್ಕೆ ಇದ್ದ ರಾಜ್ಯದ ಸ್ಥಾನಮಾನ ವನ್ನೂ ವಾಪಸ್ ಪಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಸಂಸತ್‍ನಲ್ಲಿ ಹೇಳಿದ್ದು, ಜಮ್ಮು-ಕಾಶ್ಮೀರವನ್ನು ವಿಭಜನೆ ಮಾಡುವ ಐತಿಹಾಸಿಕ ನಿರ್ಣಯವನ್ನು ಘೋಷಿಸಿದ್ದಾರೆ. ಜಮ್ಮು-ಕಾಶ್ಮೀರದಿಂದ ಲಡಾಕ್‍ನ್ನು ಪ್ರತ್ಯೇಕಗೊಳಿಸಿ, ಎರಡೂ ಪ್ರದೇಶಗಳು ಇನ್ನು ಮುಂದಿನ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶವಾಗಿರಲಿವೆ. ಜಮ್ಮು-ಕಾಶ್ಮೀರ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದರೆ, ಲಡಾಕ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿರಲಿದೆ.
ಕಾಶ್ಮೀರ ಉದ್ವಿಗ್ನ: ಮುಫ್ತಿ, ಅಬ್ದುಲ್ಲಾ ಬಂಧನ
ಶ್ರೀನಗರ,ಆ.5-ಸಂವಿಧಾನದ 370ನೇ ವಿಧಿ ಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾ ರದ ಕ್ರಮದಿಂದ ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇರು ವುದರಿಂದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫ್‍ರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿದೆ. ರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇ ಯಕ ಅಂಗೀಕಾರದ ಹಿನ್ನೆಲೆಯಲ್ಲಿ ಕಣಿವೆ ಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾ ಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು
ರದ್ದುಗೊಳಿಸುವ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಬೇಕೆಂಬ ಕಾರಣಕ್ಕೇ ಭಾನುವಾರ ರಾತ್ರಿಯೇ ಕಾಶ್ಮೀರದ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಜೊತೆಗೆ ಮೊಬೈಲ್, ಇಂಟರ್ನೆಟ್ ಸೂಲಭ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಹಿಂಸಾಚಾರವಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈಗಾಗಲೇ ಈ ವಿಧಿಯನ್ನು ರದ್ದುಗೊಳಿಸಲಾಗಿದ್ದು, ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಸೋಮವಾರ ಸಂಜೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಕೇಂದ್ರ ಸರ್ಕಾರ ಕಾಶ್ಮೀರಿಗಳಿಗೆ ಮೋಸ ಮಾಡುತ್ತಿದೆ ಎಂದು ಉಭಯ ನಾಯಕರೂ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. “ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಏರ್ಪಡುವ ಸೂಚನೆ ಸಿಕ್ಕಿದ್ದು, ಅದರಲ್ಲಿ ನೀವೂ ಭಾಗಿಯಾಗಲಿದ್ದೀರಿ ಎಂಬ ಸೂಚನೆಯ ಮೇರೆಗೆ ನಿಮ್ಮನ್ನು ಬಂಧಿಸುತ್ತಿದ್ದೇವೆ. ನಿಮ್ಮ ಇತ್ತೀಚಿನ ಹೇಳಿಕೆಗಳು ಮತ್ತು ವರ್ತನೆಗಳು ಅದಕ್ಕೆ ಪುಷ್ಟಿ ನೀಡಿವೆ” ಎಂದು ಮುಫ್ತಿಯವರಿಗೆ ನೀಡಲಾದ ಶ್ರೀನಗರದ ಎಗ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಪತ್ರದಲ್ಲಿ ಹೇಳಲಾಗಿದೆ.