ಸಂವಿಧಾನದ 370ನೇ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ನಾಂದಿ
ಮೈಸೂರು

ಸಂವಿಧಾನದ 370ನೇ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ನಾಂದಿ

August 9, 2019

ಜಮ್ಮು-ಕಾಶ್ಮೀರ ನಮ್ಮ ದೇಶದ ಮುಕುಟ. ಇಂತಹ ರಾಜ್ಯದಲ್ಲಿ ಉಗ್ರವಾದ ಹಾಗೂ ಭಯೋತ್ಪಾದನೆ ತಲೆ ಎತ್ತಲು, ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಲು ಕಲಂ 370 ಮತ್ತು 35ಎ ಕಾರಣವಾಗಿತ್ತು. ಹೀಗಾಗಿ ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಈ ವಿಧಿಗಳನ್ನು ರದ್ದು ಮಾಡಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿ ವರ್ತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಲಂ 370 ರದ್ದು ಮಾಡಿರುವ ತಮ್ಮ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಕಳೆದ ಸೋಮವಾರ ರಾಜ್ಯಸಭೆ ಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದಿದ್ದರು. ನಂತರ ಲೋಕಸಭೆ ಅನುಮತಿಯನ್ನೂ ಪಡೆಯಲಾಗಿತ್ತು. ಈ ವಿಚಾರ ರಾಷ್ಟ್ರದಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ, ಈ ಕುರಿತು ಕಳೆದ 3 ದಿನಗಳಿಂದ ಮೌನ ವಹಿಸಿದ್ದ ಪ್ರಧಾನಿ ಮೋದಿ ಕೊನೆಗೂ ಇಂದು ತಮ್ಮ ಮೌನ ಮುರಿದಿದ್ದಾರೆ. ಕಲಂ 370 ರದ್ದು ಮಾಡಲು ಕಾರಣ ಏನು? ಹಾಗೂ ಇದರಿಂದ ಕಣಿವೆ ರಾಜ್ಯಕ್ಕೆ ಆಗುವ ಲಾಭವೇನು? ಎಂಬ ಕುರಿತು ಸವಿಸ್ತಾರವಾಗಿ ತಮ್ಮ ಮನದಾಳದ ಮಾತನ್ನು ದೇಶದ ಜನರ ಜೊತೆಗೆ ಆಕಾಶವಾಣಿ ಮೂಲಕ ಹಂಚಿಕೊಂಡಿದ್ದಾರೆ.

ಕಾಶ್ಮೀರದ ಅಭಿವೃದ್ಧಿಗೆ ಕಲಂ 370 ರದ್ದತಿ ಅನಿವಾರ್ಯ: ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕಲ್ಪಿಸುವ ಕಲಂ 370 ರದ್ದು ಮಾಡಿದ ನಿರ್ಣಯದ ಬಗ್ಗೆ ಮಾತನಾಡಿದ ಅವರು, “ಈ ದೇಶದಲ್ಲಿ ಏನೂ ಬದಲಾವಣೆ ಆಗಲ್ಲ ಅನ್ನೋ ಭಾವನೆ ಇತ್ತು. 370ನೇ ವಿಧಿ ವಿಷಯದಲ್ಲೂ ಅದೇ ಆಗಿತ್ತು. ನಮ್ಮ ಮಕ್ಕಳಿಗೆ ಹಾನಿಯಾಗುತ್ತಿದ್ದ ಬಗ್ಗೆ ಚರ್ಚೆ ಆಗುತ್ತಿರಲಿಲ್ಲ. 370ನೇ ವಿಧಿಯಿಂದ ಕಣಿವೆ ರಾಜ್ಯಕ್ಕೆ ಏನು ಸಿಕ್ಕಿದೆ? ಜನರಿಗೆ ಏನು ಸಿಕ್ಕಿದೆ? ಎಂದು ಯಾರೂ ಹೇಳುತ್ತಿರಲಿಲ್ಲ, ಕೇಳುತ್ತಲೂ ಇರಲಿಲ್ಲ. ಆದರೆ, ಕಲಂ 370, 35ಎ ಯಿಂದ ಕಾಶ್ಮೀರಕ್ಕೆ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಮಾತ್ರ ಸಿಕ್ಕಿದೆ ಎಂಬುದು ಸತ್ಯ. ಕಳೆದ 3 ದಶಕಗಳಲ್ಲಿ 42 ಸಾವಿರ ನಿರ್ದೋಷಿಗಳು ಮೃತಪಟ್ಟಿದ್ದಾರೆ. ಈ ರಾಜ್ಯ ವೇಗವಾಗಿ ಅಭಿವೃದ್ಧಿ ಕೂಡ ಆಗಿಲ್ಲ. ಇದಕ್ಕೆ ಕಾರಣ ಯಾರು? ಎಂದು ಮೋದಿ ಪ್ರಶ್ನಿಸಿದರು.

ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಮುನ್ನ ನಾವು ನೂರಾರು ಬಾರಿ ಚಿಂತಿಸಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ. ಒಂದು ರಾಜ್ಯದ ಅಭಿವೃದ್ಧಿ ಮಾಡುವುದು ಮತ್ತು ಆಡಳಿತ ನಡೆಸುವುದು ಹೇಗೆ ಎಂದು ಇಲ್ಲಿನ ರಾಜಕಾರಣಿಗಳಿಗೆ ಮನದಟ್ಟು ಮಾಡುವ ಅಗತ್ಯವಿದೆ.

ಇದೇ ಕಾರಣಕ್ಕೆ ಕಲಂ 370 ಅನ್ನು ರದ್ದು ಮಾಡಿ ಕೇಂದ್ರಾಡಳಿತ ಅಧಿ ಕಾರ ಹೇರಲಾಗಿದೆ. ಆದರೆ, ಇದು ಕೇವಲ ತಾತ್ಕಾಲಿಕ ನಿರ್ಣಯ ವಾಗಿದ್ದು, ಇಡೀ ರಾಜ್ಯವನ್ನು ಮಾದರಿ ರಾಜ್ಯವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶದ ಕಾನೂನು ಇಲ್ಲಿಗೆ ಅನ್ವಯವೇ ಆಗುತ್ತಿರಲಿಲ್ಲ: ಈ ದೇಶದ ಕಾನೂನು, ಸಂವಿಧಾನ ದೇಶದ ಒಂದು ಭಾಗದಲ್ಲಿ ಜಾರಿಯೇ ಆಗುತ್ತಿರಲಿಲ್ಲ. ಪರಿಣಾಮ ಇಲ್ಲಿನ 1.5 ಕೋಟಿ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳು ಲಭ್ಯ ಆಗುತ್ತಿರಲಿಲ್ಲ. ದೇಶದ ಬೇರೆಡೆ ಮಕ್ಕಳಿಗೆ ಶಿಕ್ಷಣದ ಹಕ್ಕು ಇದೆ, ಹೆಣ್ಣುಮಕ್ಕಳಿಗೆ ಹಕ್ಕಿದೆ. ಆದರೆ ಕಾಶ್ಮೀರಿ ಹೆಣ್ಣುಮಕ್ಕಳಿಗೆ ಈ ಹಕ್ಕು ಮರೀಚಿಕೆಯಾಗಿತ್ತು. ಆದರೆ, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಷ್ಟ್ರದ ಎಲ್ಲಾ ಕಾನೂನು ಗಳು ಹಾಗೂ ಹಕ್ಕುಗಳು ಇನ್ನು ಕಣಿವೆ ರಾಜ್ಯಕ್ಕೆ ಅನ್ವಯವಾಗಲಿದೆ. ಇದರ ಲಾಭ ಸ್ಥಳೀಯ ಜನರಿಗೆ ಲಭ್ಯವಾಗಲಿದೆ. ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ಹಾಗೂ ಮಹಿಳೆಯರಿಗೆ ಸ್ವಾತಂತ್ರ್ಯ ದಕ್ಕಲಿದೆ. ಇದು ಈ ಭಾಗದ ಜನರ ಸರ್ವತೋಮುಖ ಬೆಳವಣಿಗೆಗೆ ಕಾರಣ ವಾಗಲಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ: ಭಾರತದ ಇತರೆ ಭಾಗಗಳಿಗೆ ಹೋಲಿಸಿದರೆ ಜಮ್ಮು-ಕಾಶ್ಮೀರ ಸಾಕಷ್ಟು ಹಿಂದುಳಿದಿದೆ. ಇದಕ್ಕೆ ಕಾರಣ ಕಲಂ 370. ಆದರೆ, ಇದೀಗ ಈ ವಿಧಿಯನ್ನು ರದ್ದು ಮಾಡಲಾಗಿದೆ. ಇನ್ನೂ ಕಾಶ್ಮೀರದಲ್ಲಿ ರಸ್ತೆ, ರೈಲು ಮಾರ್ಗ ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕೆಲಸ ಮಾಡಲಾಗುವುದು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣ ಗೊಳಿಸಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ದೇಶದ ಎಲ್ಲಾ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಶಿಕ್ಷಣ ಹಕ್ಕು ಕಾಯ್ದೆಯಿಂದ ಕಾಶ್ಮೀರಿಗಳು ವಂಚಿತರಾಗಿದ್ದರು. ಭವಿಷ್ಯದಲ್ಲಿ ಕಣಿವೆ ರಾಜ್ಯದಲ್ಲಿ ಐಐಎಂ ಐಐಟಿ ಸ್ಥಾಪನೆ ಮಾಡಲಾಗುವುದು ಹಾಗೂ ಇಲ್ಲಿನ ಜನರನ್ನು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾಜದ ಮೇಲಸ್ತರಕ್ಕೆ ತರಲು ಶ್ರಮಿಸಲಾಗುವುದು. ಇನ್ನೂ ಕಾಶ್ಮೀರದಲ್ಲಿ ಉದ್ಯಮ ಆರಂಭಿ ಸುವ ಖಾಸಗಿ ಕ್ಷೇತ್ರದವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ಕೇಂದ್ರ ಸರ್ಕಾರ ಮಾಡಿಕೊಡಲಿದೆ. ಈ ಮೂಲಕ ಉದ್ಯೋಗ ಸೃಷ್ಟಿಸಿ ಇಲ್ಲಿನ ಬಡತನವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶ್ವಾಸನೆ ನೀಡಿದ್ಧಾರೆ.

ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು: ಭಾಷಣದ ವೇಳೆ ಪ್ರವಾ ಸೋದ್ಯಮದ ಕುರಿತು ಉಲ್ಲೇಖಿಸಿದ ಮೋದಿ, “ಕಾಶ್ಮೀರ ಪ್ರವಾಸಿಗರ ಸ್ವರ್ಗ. ಇಲ್ಲಿ ಪ್ರವಾಸೋದ್ಯ ಮವನ್ನು ಬೆಳೆಸಿದರೆ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಗೂ ಮಾದರಿ ಪ್ರವಾಸೋ ದ್ಯಮವಾಗಿ ಕಾಶ್ಮೀರ ಬೆಳೆಯುವ ಸಾಧ್ಯತೆ ಇದೆ. ಈ ಮೂಲಕ ಸ್ಥಳೀಯರು ಆರ್ಥಿಕ ವಾಗಿ ಮತ್ತಷ್ಟು ಲಾಭ ಪಡೆಯಬಹುದು. ಹಿಂದಿ, ತೆಲುಗು, ತಮಿಳು ಸಿನಿಮಾ ಉದ್ಯಮದವರು ಇಲ್ಲಿಗೆ ಆಗಮಿಸಿ ಚಿತ್ರೀಕರಣದಲ್ಲಿ ತೊಡಗುವಂತೆ ನಾನು ಮನವಿ ಮಾಡುತ್ತೇನೆ. ಇಲ್ಲಿ ಚಿತ್ರಮಂದಿರಗಳು ತಲೆ ಎತ್ತಲಿವೆ. ಸ್ಥಳೀಯ ಪದಾರ್ಥಗಳು, ಔಷಧೀಯ ವಸ್ತುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲಾಗುವುದು, ಈ ಮೂಲಕ ಅಪಾರ ಪ್ರಮಾಣದ ಹಣ ಹರಿದುಬರಲಿದೆ. ಈ ಮೂಲಕವೂ ರಾಜ್ಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು’’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಗ್ರಾಮ ಪಂಚಾಯಿತಿ ಯಿಂದ ಆಯ್ಕೆಯಾದ ಮಹಿಳೆಯರು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದ ಅವರು, ಈ ರಾಜ್ಯದಲ್ಲಿ ಶೀಘ್ರವಾಗಿ ಪಾರದರ್ಶಕ ಹಾಗೂ ನ್ಯಾಯ ಯುತವಾಗಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಭಯೋತ್ಪಾದನೆ ರಹಿತ ಸರ್ವತೋಮುಖ ಅಭಿವೃದ್ಧಿಯ ಕಡೆ ಕಾಶ್ಮೀರವನ್ನು ಚಲಿಸುವಂತೆ ಮಾಡಲು, ದೇಶದ ಜನ ಕೈಜೋಡಿಸಬೇಕು, ದೇಶದ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕರೆ ನೀಡಿದ್ದಾರೆ

Translate »