ಕೊಡಗಿನಲ್ಲಿ ಮತ್ತೆ ಜಲ ಪ್ರಳಯ
ಮೈಸೂರು

ಕೊಡಗಿನಲ್ಲಿ ಮತ್ತೆ ಜಲ ಪ್ರಳಯ

August 9, 2019

ಮಡಿಕೇರಿ,ಆ.8-ಕೊಡಗಿನಲ್ಲಿ ರಣ ಭೀಕರ ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ರೌದ್ರ ರೂಪ ತಾಳಿವೆ. ಜಿಲ್ಲೆಯ ಹತ್ತು ಹಲವು ಗ್ರಾಮಗಳು ಜಲ ಪ್ರಳಯಕ್ಕೆ ತುತ್ತಾ ಗಿವೆ. ನೂರಾರು ಮಂದಿ ಇಂದಿಗೂ ನದಿ ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಕ್ಕಾಗಿ ಭಾರತೀಯ ಸೈನ್ಯದ ಯೋಧರ ಒಂದು ತಂಡ ಜಿಲ್ಲೆಗೆ ಆಗ ಮಿಸಿದ್ದು, ವಿವಿಧೆಡೆ ಸಿಲುಕಿರುವ ನಾಗರಿ ಕರ ಜೀವ ರಕ್ಷಣೆಯಲ್ಲಿ ತೊಡಗಿವೆ. ಜಿಲ್ಲೆಯಾದ್ಯಂತ ಆ.9ರ ಮಧ್ಯರಾತ್ರಿಯವ ರೆಗೂ “ರೆಡ್ ಅಲರ್ಟ್” ಘೋಷಿಸಲಾ ಗಿದ್ದು, ಕೊಡಗು ಮತ್ತೊಮ್ಮೆ ಜಲ ಪ್ರಳಯದ ಸಂಕಷ್ಟಕ್ಕೆ ಸಿಲುಕಿದೆ. ಭಾರೀ ಗಾಳಿ ಮಳೆಗೆ ಮಡಿಕೇರಿ-ಮಾದಾಪುರ, ಚೆಟ್ಟಳ್ಳಿ-ಸಿದ್ದಾ ಪುರ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು ಅವುಗಳನ್ನು ರಕ್ಷಣಾ ಸಿಬ್ಬಂದಿ ಗಳು ತೆರವು ಮಾಡಿದ್ದಾರೆ. ಮಡಿಕೇರಿ ಮಾದಾಪುರ ರಸ್ತೆಯಲ್ಲಿ ಬಸ್ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕರೆಂಟ್ ಇಲ್ಲದ ಹಿನ್ನೆಲೆಯಲ್ಲಿ ಭಾರೀ ಅಪಾಯ ತಪ್ಪಿದಂತಾಗಿದೆ. ಮಡಿಕೇರಿ-ಕಾಲೂರು, ಮಡಿಕೇರಿ-ಮಾದಾಪುರ, ರಸ್ತೆಗಳು ಭೂ ಕುಸಿತಕ್ಕೆ ಸಿಲುಕಿ ಸಂಪರ್ಕ ಸ್ಥಗಿತ ವಾಗಿವೆ. ಮುಕ್ಕೋಡ್ಲು-ನಾಗರಬಾಣೆ ಸಂಪರ್ಕ ರಸ್ತೆಯ ಮೇಲೆ 2 ಅಡಿ ನೀರು ಹರಿಯುತ್ತಿದ್ದು ಸಂಚಾರ ಬಂದ್ ಆಗಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಕಾವೇರಿ ನದಿ ಉಗ್ರ ಪ್ರವಾಹವನ್ನೇ ಸೃಷ್ಟಿಸಿದ್ದು, ಬೊಳಿಬಾಣೆ, ಕೊಂಡಂಗೇರಿ, ಹೊದವಾಡ ಮತ್ತಿತ್ತರ ಕಡೆಗಳಲ್ಲಿ ಗ್ರಾಮಗಳು ದ್ವೀಪವಾಗಿ ಪರಿಣಮಿಸಿವೆ. ಮೂರ್ನಾಡು ಹೊದವಾಡದಲ್ಲಿ ನದಿ ನೀರಿನಲ್ಲಿ ಸಿಲುಕಿದ್ದ 25 ಮಂದಿಯನ್ನು ದುಬಾರೆ ರ್ಯಾಫ್ಟಿಂಗ್ ಬೋಟ್‍ನ ರಕ್ಷಣಾ ತಂಡ ರಕ್ಷಿಸಿದೆ.

ಹೊದವಾಡ ಮತ್ತು ಕೊಂಡಂಗೇರಿಯಲ್ಲಿ 75 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೆ ತೀವ್ರ ಹಾನಿಯಾಗಿದೆ. ಸ್ಥಳೀಯ ಯುವಕರು ನೀರಿನಿಂದ ಆವೃತ್ತವಾಗಿರುವ ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದ್ದಾರೆ. ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲೂ 25 ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ನಿವಾಸಿಗಳು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮಡಿಕೇರಿ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಅಲ್ಲಲ್ಲಿ ಭೂ ಕುಸಿದ ಘಟನೆಗಳು ನಡೆದಿದ್ದೂ, ಸ್ಥಳೀಯ ಪಂಚಾಯಿತಿ ಮತ್ತು ರಕ್ಷಣಾ ತಂಡಗಳು ಸುರಿಯುವ ಮಳೆಯ ನಡುವೆ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಮಡಿಕೇರಿ ಮಾದಾಪುರ ಸಂಪರ್ಕಿಸುವ ಹಾಲೇರಿ ಬಳಿ ರಸ್ತೆಯ ಬದಿಗೆ ನಿರ್ಮಿಸಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದು ಬಿದ್ದಿರುವ ಬಗ್ಗೆಯೂ ವರದಿಯಾಗಿದೆ. ಮಡಿಕೇರಿ-ತಲಕಾವೇರಿ ಹಾಗೂ ಭಾಗಮಂಡಲ-ನಾಪೋಕ್ಲು ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಕಳೆದ 4 ದಿನಗಳಿಂದ ರಸ್ತೆ ಸಂಚಾರ ಬಂದ್ ಆಗಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ರ್ಯಾಫ್ಟ್ ಬೋಟ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮಡಿಕೇರಿ ವಿರಾಜಪೇಟೆ ಸಂಪರ್ಕಿಸುವ ಬೇತ್ರಿ ನದಿ ಪ್ರವಾಹ ಮಟ್ಟವನ್ನೂ ಮೀರಿ ಹರಿಯುತ್ತಿದ್ದು, ಸೇತುವೆಯ ಮೇಲೆ 5 ಅಡಿ ನೀರು ಹರಿಯುತ್ತಿದೆ. ಬೃಹತ್ ಗಾತ್ರದ ಮರದ ದಿಮ್ಮಿಗಳು ಕೂಡ ಸೇತುವೆಗೆ ಸಿಲುಕಿಕೊಂಡಿದ್ದು, ಉಕ್ಕುತ್ತಿರುವ ಕಾವೇರಿ ನದಿಯನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದು, ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ. ಕದನೂರು ಬಳಿಯೂ ಪ್ರವಾಹ ಏರ್ಪಟ್ಟಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ವಿರಾಜಪೇಟೆ ಡೆಂಟಲ್ ಕಾಲೇಜಿನ ತಡೆಗೋಡೆ ಕುಸಿದು ಬಿದ್ದಿದ್ದು, ಮಲೆತಿರಿಕೆ ಬೆಟ್ಟ ರಸ್ತೆ ಸಂಪರ್ಕ ಕೆಲಕಾಲ ಕಡಿತವಾಗಿತ್ತು. ರಸ್ತೆಗೆ ಬಿದ್ದ ತಡೆಗೋಡೆಯ ಅವಶೇಷಗಳನ್ನು ತೆರವುಗೊಳಿಸಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಗೋಣಿಕೊಪ್ಪದ ನೇತಾಜಿ ಬಡಾವಣೆಯಲ್ಲಿ ಕೀರೆ ಹೊಳೆ ಪ್ರವಾಹ ಸ್ವರೂಪ ಪಡೆದಿದ್ದು, 15 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಈ ಕುಟುಂಬಗಳನ್ನು ಸ್ಥಳೀಯ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿ ಆಶ್ರಯ ಕಲ್ಪಿಸಲಾಗಿದೆ. ಬಿರುನಾಣಿ ಬಳಿಯ ಬೊಟ್ಟಲಬಾಣೆ ಬಳಿಯ ತೋಟದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಬೊಟ್ಟಲಬಾಣೆಯ ನಿವಾಸಿ ಸುಜನ್ ಎಂಬುವರ 3 ಎಕರೆ ಕಾಫಿ ತೋಟ ಭೂ ಸಮಾಧಿಯಾಗಿದೆ. ವಿರಾಜಪೇಟೆ ತಾಲೂಕಿನ ಕೇಟೋಳಿಯ ಕಾಫಿ ತೋಟದಲ್ಲಿ ಸಿಲುಕಿಕೊಂಡಿದ್ದ 5 ಮಂದಿ ಕಾರ್ಮಿಕರನ್ನು ಎನ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆ ಮೂಲಕ ರಕ್ಷಿಸಿದೆ.

ಕೊಡಗಿನಲ್ಲಿ ಮುಂದುವರಿದ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೂ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ಇದರಿಂದಾಗಿ ನೆರೆಯ ಪರಿಸ್ಥಿತಿ ಎದುರಾಗಿ ಕುಶಾಲನಗರದ 2 ಬಡಾವಣೆಗಳು ಜಲಾವೃತಗೊಂಡವು. ಕುಶಾಲನಗರದ ಕುವೆಂಪು, ಸಾಯಿ ಬಡಾವಣೆಗೆ ನೀರು ನುಗಿದ್ದು ಜಲಾವೃತಗೊಂಡ ಬಡಾವಣೆಗಳ ಜನರನ್ನು ರಾಫ್ಟಿಂಗ್ ಬೋಟ್ ಮೂಲಕ ರಕ್ಷಿಸಲಾಗಿದೆ. ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗದ್ದೆಗಳು ಕೂಡ ನದಿ ನೀರಿನಿಂದ ಜಲಾವೃತವಾಗಿದೆ. ಕೂಡಿಗೆಯ ತೂಗು ಸೇತುವೆಯನ್ನು ಸವರಿಕೊಂಡು ಕಾವೇರಿ ನದಿ ನೀರು ಹರಿಯುತ್ತಿದ್ದು ಹಾರಂಗಿ ಜಲಾಶಯದಿಂದ ಮತ್ತಷ್ಟು ನೀರನ್ನು ನದಿ ಪಾತ್ರಕ್ಕೆ ಹರಿಸಿದರೆ ಕೂಡಿಗೆ ಸುತ್ತ ಮುತ್ತಲು ಪ್ರದೇಶ ಸಂಪೂರ್ಣ ಜಲ ಪ್ರವಾಹಕ್ಕೆ ತುತ್ತಾಗಲಿವೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್, ಉಪ ವಿಭಾಗಾಧಿಕಾರಿ ಜವರೇಗೌಡ ಮತ್ತು ಪಂಚಾಯಿತಿ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಡಗಿನಲ್ಲಿ ಭಾರೀ ವಾಹನ ಸಂಚಾರ ನಿಷೇಧ
ಮಡಿಕೇರಿ, ಆ.8-ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆಗಳ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಭಾರೀ ಸರಕು ಸಾಗಾಣಿಕೆ ವಾಹನಗಳು ಸಂಚರಿಸುವುದರಿಂದ ರಸ್ತೆ ಕುಸಿತ ಉಂಟಾ ಗುವ ಕಾರಣ ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆ ಹಿತದೃಷ್ಟಿಯಿಂದ 16200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾ ಣಿಕೆ ವಾಹನ, ಮಲ್ಟಿ ಆಕ್ಸಿಲ್ ಟ್ರಕ್‍ಗಳು, ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್ ಲಾಂಗ್ ಚಾಸೀಸ್ ವಾಹನ, ಮರಳು ಹಾಗೂ ಮರಗಳ ದಿಮ್ಮಿ ಸಾಗಿ ಸುವ ಎಲ್ಲಾ ವಾಹನಗಳ ಸಂಚಾರವನ್ನು ಸೆ.6ರವರೆಗೆ ಅಥವಾ ಮಳೆಗಾಲ ಮುಗಿ ಯುವವರೆಗೆ ನಿಷೇಧಿಸಿ ಆದೇಶ ಹೊರಡಿ ಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಡುಗೆ ಅನಿಲ, ಇಂಧನ ಪೂರೈಕೆ ವಾಹನ ಗಳು, ಸರ್ಕಾರಿ ಕೆಲಸದ ನಿಮಿತ್ತ ಉಪ ಯೋಗಿಸುವ ವಾಹನಗಳು, ಶಾಲಾ-ಕಾಲೇಜು ವಾಹನಗಳು, ಸಾರ್ವಜನಿಕ ಪ್ರಯಾಣಿಕರ ಮಲ್ಟಿ ಆಕ್ಸೆಲ್ ಬಸ್‍ಗಳಿಗೆ ವಿನಾಯಿತಿ ನೀಡಲಾಗಿದೆ.

Translate »