ಮೈಸೂರು ಜಿಲ್ಲೆಯಲ್ಲೂ ಪ್ರವಾಹ
ಮೈಸೂರು

ಮೈಸೂರು ಜಿಲ್ಲೆಯಲ್ಲೂ ಪ್ರವಾಹ

August 9, 2019

ಮೈಸೂರು, ಆ.8- ಕೊಡಗು ಹಾಗೂ ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ, ತಾರಕ ಹಾಗೂ ಕೊಡಗಿನ ಹಾರಂಗಿ ಜಲಾ ಶಯಗಳು ಭರ್ತಿಯಾಗಿದ್ದು, ಈ ಮೂರೂ ಜಲಾಶಯಗಳಿಂದ ಒಟ್ಟು 1.32 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ರುವ ಪರಿಣಾಮ ಮೈಸೂರು ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.

ಕಬಿನಿಯಿಂದ 90 ಸಾವಿರ ಕ್ಯೂಸೆಕ್ ಹಾಗೂ ತಾರಕ ಜಲಾಶಯ ದಿಂದ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಪರಿ ಣಾಮ ಹೆಚ್.ಡಿ. ಕೋಟೆ ಮತ್ತು ನಂಜನ ಗೂಡು, ಪಿರಿಯಾಪಟ್ಟಣ ತಾಲೂಕು ಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಹಾರಂಗಿಯಿಂದ 30 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಹುಣಸೂರು ತಾಲೂಕಿನಲ್ಲಿ ಪ್ರವಾಹ ಉಂಟಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಸರಗೂರು-ತಿಂಡಸೋಗೆ ರಸ್ತೆ ಕುಸಿದಿದ್ದು, ಹ್ಯಾಂಡ್‍ಪೋಸ್ಟ್ ಮತ್ತು ಸರಗೂರು ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಹೆಚ್.ಡಿ. ಕೋಟೆಯಿಂದ ಸರಗೂರಿಗೆ ಶಿರಮಳ್ಳಿ, ಕೊಲ್ಲೇಗೌಡನಹಳ್ಳಿ, ಹ್ಯಾಂಡ್‍ಪೋಸ್ಟ್ ಮಾರ್ಗವಾಗಿ ಬದಲಿ ಸಂಚಾರ ವ್ಯವಸ್ಥೆ ಏರ್ಪಡಿಸಲಾಗಿದೆ. ಡಿ.ಬಿ.ಕುಪ್ಪೆ, ಮಚ್ಚೂರು, ಹೊಸೂರು ಹಾಡಿಗಳಿಗೆ ನೀರು ನುಗ್ಗುವ ಅಪಾಯವಿರುವ ಕಾರಣ ಡಿ.ಬಿ.ಕುಪ್ಪೆ ಮತ್ತು ಮಚ್ಚೂರು ಗ್ರಾಮಗಳಲ್ಲಿ

ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ 130 ಮಂದಿ ಆಶ್ರಯ ಪಡೆದಿದ್ದಾರೆ. ಹುಣಸೂರು ತಾಲೂಕಿನ ಹನಗೋಡು-ಕಿರಂಗೂರು ಸೇತುವೆ ಮುಳುಗಡೆ ಯಾಗಿದ್ದು, ಅಪಾಯದ ಅಂಚಿನ ಲ್ಲಿದೆ. ಈ ಕಾರಣದಿಂದಾಗಿ ಅಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಸೇತುವೆ ಮೇಲೆ ವಾಹನ ಹಾಗೂ ಜನಸಂಚಾರವನ್ನು ನಿಷೇಧಿಸಲಾಗಿದೆ. ಈ ರಸ್ತೆ ಬಂದ್ ಆಗಿರುವ ಕಾರಣ ಪಕ್ಕದಲ್ಲೇ ಇರುವ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಹುಣಸೂರು-ಹನಗೋಡು ರಸ್ತೆಯಲ್ಲಿ ನೀರು ನಿಂತಿರುವ ಕಾರಣ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಹೆಮ್ಮಿಗೆ ಮೂಲಕ ಹುಣಸೂರು ಮತ್ತು ಹನಗೋಡು ನಡುವೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಜನಗೂಡಿನ ಮಲ್ಲನಮೂಲೆ ತಿರುವಿನಲ್ಲಿ ಕಬಿನಿ ನದಿಯ ನೀರು ಹರಿಯುತ್ತಿರುವ ಪರಿಣಾಮ ಮೈಸೂರಿನಿಂದ ನಂಜನಗೂಡಿಗೆ ತಾಂಡವಪುರ, ಬಸವಾಪುರ ಹಾಗೂ ಹೆಜ್ಜಿಗೆ ಮಾರ್ಗವಾಗಿ ಮತ್ತು ನಂಜನಗೂಡಿ ನಿಂದ ಮೈಸೂರಿಗೆ ಹುಲ್ಲಹಳ್ಳಿ, ರಾಂಪುರ ಹಾಗೂ ಉದ್ಬೂರು ಮಾರ್ಗವಾಗಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ನಂಜನಗೂಡು ಪಟ್ಟಣದ ಹಳ್ಳದಕೇರಿ, ತೋಪಿನಬೀದಿ ಮುಂತಾದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವುದರಿಂದ ನಂಜನಗೂಡಿನ ಗಿರಿಜಾಕಲ್ಯಾಣ ಭವನದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ನಂಜನಗೂಡು ತಾಲೂಕಿನ ಬೊಕ್ಕನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿರುವ ಪರಿಣಾಮ ಅಲ್ಲಿನ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ನಂಜನಗೂಡು ಪಟ್ಟಣದಲ್ಲಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, 16 ಕಾಲು ಮಂಟಪ ಸಂಪೂರ್ಣ ಜಲಾವೃತ ವಾಗಿ, ಸ್ನಾನಘಟ್ಟದ ವರೆಗೆ ನೀರು ನಿಂತಿದೆ. ಅಲ್ಲಿನ ಮುಡಿಕಟ್ಟೆಯನ್ನು ಬಂದ್ ಮಾಡಲಾಗಿದೆ. ಹೆಚ್.ಡಿ.ಕೋಟೆ ತಾಲೂಕಿನಲ್ಲಿ 48, ನಂಜನಗೂಡು ತಾಲೂಕಿನಲ್ಲಿ 83, ಪಿರಿಯಾಪಟ್ಟಣ ತಾಲೂಕಿನಲ್ಲಿ 8, ಮೈಸೂರು ತಾಲೂಕಿನಲ್ಲಿ 6, ತಿ.ನರಸೀಪುರ ಮತ್ತು ಕೆ.ಆರ್.ನಗರ ತಾಲೂಕು ಗಳಲ್ಲಿ ತಲಾ 1, ಹುಣಸೂರು ತಾಲೂಕಿನಲ್ಲಿ 13 ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ 160 ಮನೆಗಳು ಕುಸಿದಿವೆ.

ಕಬಿನಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‍ಗಳಿಂದ ನೀರು ಹರಿಸಲು ಅಧಿಕಾರಿಗಳು ಪ್ರಯತ್ನಿಸಿದ ವೇಳೆ ಒಂದು ಕ್ರಸ್ಟ್ ಗೇಟ್‍ನ ವೈರೆಪ್ಟ್ ತುಂಡಾಗಿ ಮುಖ್ಯಗೇಟ್ ಕುಸಿದಿದೆ. ವೈರೆಪ್ಟ್ ಗೇಟ್ ತೆರೆಯಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದ ಕಾರಣ ಉಳಿದ ಮೂರು ಗೇಟ್‍ಗಳಿಂದ ಮಾತ್ರ ನೀರು ಬಿಡಲಾಗುತ್ತಿದೆ. ಪ್ರವಾಹದಿಂದಾಗಿ ಸಾವಿರಾರು ಎಕರೆ ಜಮೀನು ಜಲಾವೃತವಾಗಿದ್ದು, ಫಸಲು ನಾಶವಾಗಿದೆ. ಹೆಚ್.ಡಿ. ಕೋಟೆ ಸರ್ಕಾರಿ ಶಾಲೆ ಜಲಾವೃತವಾಗಿದೆ. ಸುತ್ತೂರು ಸೇತುವೆ ಮುಳುಗಡೆಯಾಗುವ ಹಂತಕ್ಕೆ ಬಂದಿದ್ದು, ಈ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೇತುವೆಯ ಎರಡೂ ಬದಿಯಲ್ಲೂ ಪೊಲೀಸರು ಬ್ಯಾರಿಕೇಟ್‍ಗಳನ್ನಿಟ್ಟು ವಾಹನ ಸಂಚಾರವನ್ನು ತಡೆದಿದ್ದಾರೆ. ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಗೇಟ್ ಬಂದ್ ಮಾಡಿ ಸಾರ್ವಜನಿಕರು ಪ್ರವೇಶಿಸದಂತೆ ತಡೆಯಲಾಗಿದೆ. ತಲಕಾಡು ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

ಮೈಸೂರು ಜಿಲ್ಲಾಡಳಿತದಿಂದ ನೆರವು ಕೇಂದ್ರ ಆರಂಭ
ಮೈಸೂರು,ಆ.8(ವೈಡಿಎಸ್)-ವರುಣನ ಆರ್ಭಟ ದಿಂದ ನಲುಗಿರುವ ಉತ್ತರ ಕರ್ನಾಟಕ ಹಾಗೂ ಮಡಿ ಕೇರಿ ಸಂತ್ರಸ್ತರಿಗೆ ನೆರವಾಗಲು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ `ನೆರವು ಕೇಂದ್ರ’ ಆರಂಭಿಸಿದೆ. ನಗರದ ಪುರಭವನದಲ್ಲಿ ಕೇಂದ್ರ ಆರಂಭಿ ಸಿದ್ದು, ದಾನಿಗಳು ಮತ್ತು ಸಂಘ-ಸಂಸ್ಥೆಗಳು ಪ್ರವಾಹ ಪೀಡಿತ ಪ್ರದೇಶ ಗಳಿಗೆ ತುರ್ತು ಅವಶ್ಯಕ ಸಾಮಗ್ರಿ ಗಳಾದ ಬ್ರೇಡ್, ಬನ್, ಬಿಸ್ಕತ್, ವಾಟರ್, ಜ್ಯೂಸ್ ಬಾಟಲ್ ಗಳು, ಹಾಲಿನಪುಡಿ, ದಿನ ಬಳಕೆ ವಸ್ತುಗಳಾದ ಟೂತ್‍ಪೇಸ್ಟ್, ಸೋಪ್, ಸೋಪುಗಳು, ಸೊಳ್ಳೆ ನಿಯಂತ್ರಕ ಗಳು, ಬಟ್ಟೆ, ಸ್ವೇಟರ್, ಜಾಕೇಟ್, ಬೇಡ್ ಸೀಟ್‍ಗಳು, ಸ್ಯಾನಿಟರಿ ನ್ಯಾಪಕಿನ್, ಛತ್ರಿ, ಅಗತ್ಯವಾಗಿ ಶಿಶು ಮತ್ತು ಮಕ್ಕಳ ಬಟ್ಟೆಗಳನ್ನು ನೀಡಬಹುದಾಗಿದೆ.

Translate »