ಹುಣಸೂರಲ್ಲಿ ಮನೆ-ಮನೆ ಸಮೀಕ್ಷಾ ಕಾರ್ಯ
ಮೈಸೂರು ಗ್ರಾಮಾಂತರ

ಹುಣಸೂರಲ್ಲಿ ಮನೆ-ಮನೆ ಸಮೀಕ್ಷಾ ಕಾರ್ಯ

April 13, 2020

ಹುಣಸೂರು, ಏ.12(ಕೆಕೆ)-ಕೊರೊನಾ ವೈರಸ್ ತಡೆಗಟ್ಟಲು ಮನೆ ಮನೆ ಸಮೀಕ್ಷಾ ಕಾರ್ಯದ ಮೊದಲ ದಿನ ತಾಲೂಕಿನಲ್ಲಿ 9,523 ಮನೆಗಳನ್ನು ಆರೋಗ್ಯ ಸಿಬ್ಬಂದಿ ಪೂರ್ಣಗೊಳಿಸಿದ್ದು, 29,187 ಜನರನ್ನು ಪ್ರಾಥಮಿಕ ಹಂತದ ಪರೀಕ್ಷೆಗೆ ಒಳಪಡಿಸ ಲಾಗಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು.

ತಾಲೂಕಿನಲ್ಲಿ ಇದೂವರೆಗೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಒಂದೂ ದಾಖಲಾಗಿಲ್ಲ. ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಕೆಮ್ಮು, ನೆಗಡಿ ಮತ್ತು ಜ್ವರ ಬಾಧಿತರನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿ 23 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 23 ವೈದ್ಯಾಧಿಕಾರಿಗಳು, 25 ಪುರುಷ ಆರೋಗ್ಯ ಸಹಾಯಕರು ಮತ್ತು 70 ಮಹಿಳಾ ಆರೋಗ್ಯ ಸಹಾಯಕರು, 218 ಆಶಾ ಕಾರ್ಯಕರ್ತರನ್ನೊಳ ಗೊಂಡ ಒಟ್ಟು 127 ಜನರ ತಂಡ, ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರÀನ್ನು ರಚಿಸಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಮೊದಲ ದಿನ 9,523 ಮನೆಗಳಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಪೈಕಿ 6 ಜನರಿಗೆ ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡು ಬಂದಿವೆ ಎಂದು ತಿಳಿಸಿದರು.

ಹೋಂ ಕ್ವಾರಂಟೈನ್ ಮುಂದುವರಿಕೆ: ತಾಲೂಕಿನಲ್ಲಿ ಒಟ್ಟು 603 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಈ ಪೈಕಿ 300ಕ್ಕೂ ಹೆಚ್ಚು ಶಂಕಿತರ ಮೊದಲ ಹಂತದ ಹೋಂ ಕ್ವಾರಂಟೈನ್ ಅವಧಿ ಎರಡು ದಿನಗಳ ಹಿಂದೆ ಪೂರ್ಣಗೊಂಡಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಮತ್ತೆ 14 ದಿನಗಳಿಗೆ ಹೋಂ ಕ್ವಾರಂಟೈನ್ ಮುಂದು ವರಿಸಲಾಗಿದೆ. ನಂಜನಗೂಡಿನ ಜುಬಿ ಲಂಟ್ ಕಾರ್ಖಾನೆಯ 3 ನೌಕರರು ಹುಣಸೂರಿಗೆ ಬಂದಿದ್ದು, ಇವರ ಹೋಂ ಕ್ವಾರಂಟೈನ್ ಕೂಡ ಮುಂದುವರಿಸಲಾಗಿದೆ. ನಂಜನಗೂಡಿನಿಂದ ಬಂದಿರುವ 11 ನಿವಾಸಿ ಗಳನ್ನೂ ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ಟಿಎಚ್‍ಓ ತಿಳಿಸಿದರು.

Translate »