ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೆ.ಆರ್, ಚೆಲುವಾಂಬ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ
ಮೈಸೂರು

ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೆ.ಆರ್, ಚೆಲುವಾಂಬ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ

April 9, 2020

ಮೈಸೂರು,ಏ.8-ಚೀನಾ ದೇಶದಲ್ಲಿ ಜನ್ಮ ತಾಳಿದ ಕೋವಿಡ್-19 (ಕೊರೊನಾ ವೈರಸ್ ಡಿಸೀಸ್) ಮಾರ ಣಾಂತಿಕ ಸೋಂಕು ವಿಶ್ವದಾದ್ಯಂತ ಈಗ ಆತಂಕ ಉಂಟು ಮಾಡುತ್ತಿದ್ದು, ಈ ಮಹಾಮಾರಿ ನಿಯಂತ್ರಣಕ್ಕೆ ಇಡೀ ಭಾರತ ಸಂಪೂರ್ಣ ಲಾಕ್‍ಡೌನ್ ಆಗಿದೆ.

ಸೋಂಕು ಶರವೇಗದಲ್ಲಿ ಹರಡುವುದರಿಂದ ಹಾಗೂ ಕೋವಿಡ್ ಸೋಂಕಿತರಿಬ್ಬರನ್ನು ಇರಿಸಿ ಚಿಕಿತ್ಸೆ ನೀಡು ತ್ತಿದ್ದರಿಂದ ಮೈಸೂರಿನ ಕೆ.ಆರ್., ಚೆಲುವಾಂಬ ಆಸ್ಪತ್ರೆಗಳು ಸೇರಿದಂತೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಡಿಯ ಎಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಿಲಯ ಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಮಂದಿ ಹೊರ ಗುತ್ತಿಗೆ ಸಿಬ್ಬಂದಿ ಆತಂಕಗೊಂಡಿದ್ದಾರೆ.

ಮನೆಯವರೇ ಕಳಿಸುತ್ತಿಲ್ಲ: ಕೆ.ಆರ್., ಚೆಲುವಾಂಬ, ಪಿಕೆಟಿಬಿ ಎದೆರೋಗಗಳ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಾರ್ಡ್ ಬಾಯ್‍ಗಳು, ಭದ್ರತಾ ಸಿಬ್ಬಂದಿ, ಆಯಾಗಳು, ಸ್ವಚ್ಛತಾ ಕೆಲಸ ನಿರ್ವಹಿಸುತ್ತಿ ರುವ ಮೈಸೂರಿನ ಹೊರಭಾಗದಿಂದ ಬರುವವರನ್ನು ಮನೆಯ ವರು ಹಾಗೂ ಗ್ರಾಮಸ್ಥರೇ ಆಸ್ಪತ್ರೆ ಕೆಲಸಕ್ಕೆ ಕಳುಹಿಸುತ್ತಿಲ್ಲ.

ಶೇ.20ರಷ್ಟು ಸಿಬ್ಬಂದಿ ಗೈರು: ಮನೆಯವರು ಮತ್ತು ಗ್ರಾಮಸ್ಥರ ವಿರೋಧ ಹಾಗೂ ಲಾಕ್‍ಡೌನ್‍ನಿಂದಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವು ದರಿಂದ ಆಸ್ಪತ್ರೆಗಳ ಹೊರಗುತ್ತಿಗೆ ಸಿಬ್ಬಂದಿ ಪೈಕಿ ಶೇ.20ರಷ್ಟು ಮಂದಿ ಗೈರು ಹಾಜರಾಗುತ್ತಿದ್ದಾರೆ. ನೀವು ಆಸ್ಪತ್ರೆಯಿಂದ ಕೊರೊನಾ ವೈರಸ್ ತಂದು ಬಿಟ್ಟರೆ ಇಡೀ ಗ್ರಾಮದ ಜನರಿಗೇ ಹರಡಲಿದೆ ಎಂದು ಗ್ರಾಮಸ್ಥರು ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ.

ಆಂಬುಲೆನ್ಸ್‍ನಲ್ಲೇ ಪಿಕ್‍ಅಪ್-ಡ್ರಾಪ್: ವಾಹನ ಸಂಚಾರ ಬಂದ್ ಆಗಿರುವುದರಿಂದ ಮೈಸೂರು ಸಿಟಿ ಯಿಂದ ಬರುವವರು, ತಮ್ಮ ಸ್ವಂತ ವಾಹನದಲ್ಲಿ ಅಥವಾ ಮನೆಯವರಿಂದ ಡ್ರಾಪ್ ತೆಗೆದುಕೊಂಡು ಬರುತ್ತಿದ್ದಾರೆ. ಆ ಸೌಲಭ್ಯವೂ ಇಲ್ಲದವರನ್ನು ಆಸ್ಪತ್ರೆಯ ಆಂಬುಲೆನ್ಸ್ ಕಳುಹಿಸಿ ಕರೆದುಕೊಂಡು ಬಂದು ಅವರ ಮನೆಗೆ ಬಿಡುವ ಸೌಲಭ್ಯವನ್ನು ಆಸ್ಪತ್ರೆ ಅಧಿಕಾರಿಗಳು ಒದಗಿಸಿದ್ದಾರೆ.

ಔಟ್‍ಸೋರ್ಸ್ ಸಿಬ್ಬಂದಿ: ಕೆ.ಆರ್. ಆಸ್ಪತ್ರೆಯಲ್ಲಿ 70 ಮಂದಿ ಸೆಕ್ಯೂರಿಟಿ ಗಾರ್ಡ್, 80 ಹೌಸ್ ಕೀಪಿಂಗ್ (ಪುರುಷರು ಮತ್ತು ಮಹಿಳೆಯರು), 50 ಮಂದಿ ಆಯಾ ಗಳು ಮತ್ತು 60 ಮಂದಿ ವಾರ್ಡ್ ಬಾಯ್‍ಗಳು ದಿನದ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೆಲು ವಾಂಬ ಆಸ್ಪತ್ರೆಯಲ್ಲಿ 80 ಹೌಸ್ ಕೀಪಿಂಗ್ ಮತ್ತು 30 ಭದ್ರತಾ ಸಿಬ್ಬಂದಿ, ಪಿಕೆಟಿಬಿ ಆಸ್ಪತ್ರೆಯಲ್ಲಿ 15 ಸೆಕ್ಯೂ ರಿಟಿ, 60 ಸ್ವಚ್ಛತಾ ಸಿಬ್ಬಂದಿ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ವೈದ್ಯ ಕೀಯ ಕಾಲೇಜಿನ ವಿದ್ಯಾರ್ಥಿನಿಲಯಗಳಲ್ಲಿ ಒಟ್ಟು 80 ಮಂದಿ ಹೌಸ್ ಕೀಪಿಂಗ್ ಹಾಗೂ 70 ಮಂದಿ ಭದ್ರತಾ ಸಿಬ್ಬಂದಿಗಳಿದ್ದಾರೆ. ಆದರೆ ಆ ಪೈಕಿ ಶೇ.80ರಷ್ಟು ಮಾತ್ರ ಹಾಜರಾತಿ ಇದೆ. ಶ್ರೀರಾಮ ಎಂಟರ್‍ಪ್ರೈಸಸ್, ರಂಗ ನಾಥ, ಸುರಭಿ, ಕಾಂತಿ ಹಾಗೂ ಸ್ವಿಸ್ ಎಂಟರ್‍ಪ್ರೈಸಸ್ ಸಂಸ್ಥೆಗಳು ಈ ಆಸ್ಪತ್ರೆಗಳಿಗೆ ಹೊರಗುತ್ತಿಗೆ ಆಧಾರ ದಲ್ಲಿ ಸಿಬ್ಬಂದಿಯನ್ನು ಒದಗಿಸಿದ್ದಾರೆ. ಆದರೆ ಗೈರು ಹಾಜ ರಾಗುತ್ತಿರುವವರ ವೇತನ ಕಡಿತಗೊಳಿಸಬಾರದೆಂದು ಆಸ್ಪತ್ರೆ ಆಡಳಿತವು ಸ್ಪಷ್ಟ ಸೂಚನೆ ನೀಡಿದೆ.

ರೋಗಿಗಳ ಸಂಖ್ಯೆ ಇಳಿಕೆ: ಕೆ.ಆರ್. ಮತ್ತು ಪಿಕೆಟಿಬಿ ಆಸ್ಪತ್ರೆಗಳಲ್ಲಿ ಹೊರ ಹಾಗೂ ಒಳರೋಗಿಗಳ ಸಂಖ್ಯೆ ಯಲ್ಲಿ ಭಾರೀ ಇಳಿಕೆಯಾಗಿದ್ದು, ಚೆಲುವಾಂಬ ಆಸ್ಪತ್ರೆ ಯಲ್ಲಿ ಮಾತ್ರ ರೋಗಿಗಳು ಎಂದಿನಂತಿದ್ದು, ಹೆರಿಗೆ, ಮಕ್ಕಳ ಚಿಕಿತ್ಸಾ ಸೇವೆ ಮುಂದುವರಿದಿದೆ.

ಎಸ್.ಟಿ. ರವಿಕುಮಾರ್

Translate »