ಉದಯಗಿರಿ, ರಾಜೀವನಗರಗಳಲ್ಲಿ ಪೊಲೀಸರಿಂದ ಜನ, ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ
ಮೈಸೂರು

ಉದಯಗಿರಿ, ರಾಜೀವನಗರಗಳಲ್ಲಿ ಪೊಲೀಸರಿಂದ ಜನ, ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ

April 9, 2020

ಮೈಸೂರು,ಏ.8(ಆರ್‍ಕೆ)-ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಿರುವ ಲಾಕ್‍ಡೌನ್ ನಿರ್ಬಂಧ ನಿಯಮ ಪಾಲನೆಗಾಗಿ ಉದಯಗಿರಿ, ರಾಜೀವ ನಗರ, ಎನ್.ಆರ್.ಮೊಹಲ್ಲಾ ಹಾಗೂ ನಜರ್‍ಬಾದ್ ಭಾಗಗಳಲ್ಲಿ ಆಯಾ ಠಾಣಾ ಪೊಲೀಸರು ಇಂದು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.

ನಿಜಾಮುದ್ದೀನ್‍ನಿಂದ ಕೆಲವರು ಹಿಂದಿರುಗಿದ ನಂತರ ಮೈಸೂರಿನಲ್ಲಿ ಕೋವಿಡ್ ಸೋಂಕಿತರು ಮತ್ತು ಶಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ಇತರರಿಗೆ ಹರಡದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿ ರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಿರ್ದೇಶನದಂತೆ ಉದಯಗಿರಿ, ಎನ್.ಆರ್., ಮಂಡಿ, ಲಷ್ಕರ್, ನಜರ್‍ಬಾದ್ ಠಾಣೆ ಹಾಗೂ ಸಿದ್ದಾರ್ಥನಗರ ಸಂಚಾರ ಠಾಣೆಗಳ ಇನ್‍ಸ್ಪೆಕ್ಟರ್‍ಗಳು ಬೀದಿಗಿಳಿದು ಲಾಕ್ ಡೌನ್ ಜಾರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರಾಜೀವನಗರದ ಅಲ್‍ಬದರ್ ಮಸೀದಿ ರಸ್ತೆ, ಉದಯಗಿರಿ ಮುಖ್ಯ ರಸ್ತೆ, ಡಾ.ರಾಜಕುಮಾರ್ ರಸ್ತೆ, ಡೈರಿ ರಸ್ತೆ, ಟೆರೇಷಿಯನ್ ಕಾಲೇಜು ಬಳಿ ಯರಗನ ಹಳ್ಳಿ ಸರ್ಕಲ್, ನಜರ್‍ಬಾದ್ ಸರ್ಕಲ್, ಎಸ್ಪಿ ಆಫೀಸ್ ಸರ್ಕಲ್, ರಾಜೇಂದ್ರನಗರ ಸರ್ಕಲ್, ಅಶೋಕ ರಸ್ತೆ, ಮಿಷನ್ ಆಸ್ಪತ್ರೆ ಸರ್ಕಲ್, ಫೌಂಟನ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ ಜಂಕ್ಷನ್‍ಗಳಲ್ಲಿ ಬ್ಯಾರಿಕೇಡ್ ನಿಂದ ರಸ್ತೆ ಅಡ್ಡಗಟ್ಟಿ ಸಂಚಾರ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದ್ದಾರೆ.

ಲಾಕ್‍ಡೌನ್ ನಿರ್ಬಂಧ ಹಾಗೂ ನಿಷೇಧಾಜ್ಞೆ ವಿಧಿಸಿ ದ್ದರೂ ಕಾರು, ಆಟೋ ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿರುವುದನ್ನು ಸಿಸಿ ಕ್ಯಾಮರಾ ದೃಶ್ಯಾ ವಳಿ ವೀಕ್ಷಿಸಿದ ಪೊಲೀಸ್ ಆಯುಕ್ತರು ಕ್ಷಿಪ್ರ ಹಾಗೂ ಕಟ್ಟು ನಿಟ್ಟಾಗಿ ಸಂಚಾರ ನಿಯಂತ್ರಿಸುವಂತೆ ನಿರ್ದೇಶನ ನೀಡಿ ರುವ ಹಿನ್ನೆಲೆಯಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಶಿಧರ್, ಎನ್.ಆರ್. ಉಪವಿಭಾಗದ ಎಸಿಪಿ ಎಂ. ಶಿವಶಂಕರ್, ಸಂಚಾರ ವಿಭಾಗದ ಎಸಿಪಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ಆ ವ್ಯಾಪ್ತಿಯ ಠಾಣೆಗಳ ಪೊಲೀಸ್ ಇನ್ಸ್‍ಪೆಕ್ಟರ್‍ಗಳು ತಮ್ಮ ಸಿಬ್ಬಂದಿಗಳೊಂದಿಗೆ ಲಾಠಿ ಹಿಡಿದು ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಔಷಧಿ ಅಂಗಡಿ, ಆಸ್ಪತ್ರೆ, ದಿನಸಿ, ತರಕಾರಿ ಸೇರಿದಂತೆ ಅತ್ಯಾವಶ್ಯಕ ಹಾಗೂ ಜೀವ ರಕ್ಷಕ ವಸ್ತು ಗಳನ್ನು ಖರೀದಿಸಲು ಹೋಗುವವರು ಮತ್ತು ಸಂಬಂಧಿಸಿದ ಅಧಿಕಾರಿಗಳಿಂದ ಪಾಸ್ ಪಡೆದಿರು ವವರನ್ನು ಹೊರತುಪಡಿಸಿ ಉಳಿದವರನ್ನು ನಿರ್ದಾ ಕ್ಷಿಣ್ಯವಾಗಿ ವಾಪಸ್ ಕಳುಹಿಸಲಾಗುತ್ತಿದೆ.

ಈ ಕಾರ್ಯಾಚರಣೆ ವೇಳೆ ಕೆಲವರು ಸಬೂಬು ಗಳನ್ನು ಹೇಳದೆ ವಾಗ್ವಾದ ಮಾಡುತ್ತಿದ್ದರಾದರೂ, ಆ ವೇಳೆ ಫೋಟೋ ಮತ್ತು ವೀಡಿಯೋ ರೆಕಾ ರ್ಡಿಂಗ್ ಮಾಡಲಾಗುತ್ತಿದೆ. ಅನಗತ್ಯವಾಗಿ ಓಡಾಡಿ ಕೊರೊನಾ ವೈರಸ್ ಸೋಂಕಿತರಾಗಬೇಡಿ ಹಾಗೂ ಅಮಾಯಕರಿಗೆ ಹರಡಬೇಡಿ ಎಂದು ಸಲಹೆ ನೀಡಿ ಪೊಲೀಸರು ರಸ್ತೆಯಲ್ಲಿ ಓಡಾಡುವವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಅದೇ ರೀತಿ ಮೈಸೂರು ನಗರ ದಾದ್ಯಂತ ಪೊಲೀಸರು ಹೊರಗುಳಿದು ಜನರನ್ನು ಮನೆಯೊಳಗಿರುವಂತೆ ಹೇಳಿ ಬಿಸಿಲು, ಮಳೆ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಜೆ 6 ಗಂಟೆ ನಂತರವಂತೂ ಕಟ್ಟುನಿಟ್ಟಾಗಿ ಲಾಕ್‍ಡೌನ್ ಸಂಚಾರ ನಿರ್ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

Translate »