ಮೈಸೂರು, ಆ.8(ಆರ್‍ಕೆಬಿ)- ಶುಕ್ರವಾರ (ಆ.9)ದ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮೈಸೂ ರಿನ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ಇನ್ನಿತರ ಕಡೆಗಳಲ್ಲಿ ಭಾರೀ ಜನಸಂದಣಿ. ಜಿಟಿ ಜಿಟಿ ಮಳೆಯ ನಡುವೆಯೂ ಹಬ್ಬಕ್ಕೆ ಹಣ್ಣು, ಹೂವು ತರಕಾರಿ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿಯೇ ನಡೆದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಗಗನ ಕ್ಕೇರಿತ್ತು. ಆದರೆ ತರಕಾರಿ ಬೆಲೆ ಸ್ವಲ್ಪ ಸ್ಥಿರವಾಗಿತ್ತು.
ಸೇವಂತಿಗೆ ಹೂವು ಪ್ರತಿ ಮಾರಿಗೆ ರೂ.100ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿತ್ತು. ಬಟನ್ ಗುಲಾಬಿ ಕಾಲು ಕೆಜಿಗೆ ರೂ.80, ಮಲ್ಲಿಗೆ ಮೊಗ್ಗು- ಕಾಲು ಕೆಜಿಗೆ ರೂ. 150ರಿಂದ ರೂ.200, ಕಟ್ಟಿದ ಮಲ್ಲಿಗೆ ಹೂವು- ಒಂದು ಮೀಟರ್‍ಗೆ ರೂ.80, ಕನಕಾಂಬರ ಬಿಡಿ ಹೂವು- ಕಾಲು ಕೆಜಿಗೆ ರೂ.200ರಿಂದ 250 ಹಾಗೂ ಚೆಂಡು ಹೂವು- ಕೆಜಿಗೆ 40 ರೂ.ಗಳಿಗೆ ಮಾರಾಟವಾಗುತ್ತಿತ್ತು.
ಹಣ್ಣುಗಳಲ್ಲಿ ಸೇಬು-ಪ್ರತಿ ಕೆಜಿಗೆ ರೂ.150ರಿಂದ 200, ಮೂಸಂಬಿ- ಕಾಲು ಕೆಜಿಗೆ ರೂ.70, ದ್ರಾಕ್ಷಿ- ಕಾಲು ಕೆಜಿಗೆ ರೂ.80, ಮರ ಸೇಬು-ಕೆಜಿಗೆ ರೂ.70, ಬಾಳೆಹಣ್ಣು- ಕೆಜಿಗೆ 100-120, ಬಾಳೆಕಂಬ-ಜೋಡಿಗೆ 20ರಿಂದ ರೂ.30, ಮಾವಿನ ತೋರಣದ ಎಲೆಗಳು- ಸಣ್ಣ ಕಟ್ಟಿಗೆ ರೂ.10, ಅನಾನಸು- ದೊಡ್ಡದು ಒಂದಕ್ಕೆ 25ರಿಂದ 30 ಚಿಕ್ಕದು ರೂ.20, ತೆಂಗಿನಕಾಯಿ- ರೂ.20ರಿಂದ 30.
ತರಕಾರಿಗಳಲ್ಲಿ ಕ್ಯಾರೆಟ್, ಬೀನ್ಸ್, ಅವರೆಕಾಯಿ, ಗೆಡ್ಡೆ ಕೋಸು- ಕೆಜಿಗೆ ರೂ.40, ಮೂಲಂಗಿ, ಬದನೆಕಾಯಿ, ಬೆಂಡೆಕಾಯಿ- ಕೆಜಿಗೆ ರೂ.20, ಟೊಮ್ಯಾಟೋ ಹಣ್ಣು- ಕೆಜಿಗೆ 15 ರೂ.ಗಳಿಗೆ ಮಾರಾಟವಾಗುತ್ತಿತ್ತು.
ಕಳೆದ ನಾಲ್ಕು ದಿನಗಳ ಹಿಂದೆ ಒಂದು ಮಾರಿಗೆ 150-180 ರೂ.ಗಳಿಗೆ ಮಾರಾಟವಾಗುತ್ತಿದ್ದ ಸೇವಂತಿಗೆ ಹೂವು ಹಬ್ಬದ ಹಿಂದಿನ ದಿನವಾದ ಗುರುವಾರ 100-120 ರೂ.ಗೆ ಮಾರಾಟವಾಗುತ್ತಿತ್ತು. ಬಣ್ಣದ ಸೇವಂತಿ 60ರಿಂದ 80 ರೂ ಮಾರಾಟವಾಯಿತು. ಇದೇ ಪರಿಸ್ಥಿತಿ ಮಂಡಿ ಮಾರುಕಟ್ಟೆ, ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆ, ನಂಜುಮಳಿಗೆ ಇನ್ನಿತರ ಕಡೆಗಳಲ್ಲಿಯೂ ಕಂಡು ಬಂದಿತು.
ತಾವರೆ ಹೂವಿಗೆ ವಿಶೇಷ ಬೇಡಿಕೆ: ಮಹಾಲಕ್ಷ್ಮೀಯನ್ನು ತಾವರೆ ಹೂವಿನಿಂದ ಅಲಂಕರಿಸುವುದು ಈ ಹಬ್ಬದ ವಿಶೇಷ. ಹೀಗಾಗಿ ಕಮಲದ ಹೂವಿಗೂ ಬೇಡಿಕೆ ಇತ್ತು. ಜೋಡಿ ತಾವರೆ ಹೂವಿಗೆ ಅದರ ಅಳತೆಗೆ ತಕ್ಕಂತೆ ರೂ.40, 60, 80 ರೂ.ಗಳಿದ್ದರೂ ಜನ ಖರೀದಿಸುವಲ್ಲಿ ಮುಗಿ ಬಿದ್ದರು.