ಕೊಡಗಲ್ಲಿ ‘ಮಳೆರಾಯ’ನ ಅಬ್ಬರ
ಮೈಸೂರು

ಕೊಡಗಲ್ಲಿ ‘ಮಳೆರಾಯ’ನ ಅಬ್ಬರ

August 7, 2019

ಮಡಿಕೇರಿ, ಆ.6- ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಗಾಳಿ, ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ ಆ.7ರವರೆಗೆ ‘ಆರೆಂಜ್ ಅಲರ್ಟ್’ ಹಾಗೂ ಬುಧವಾರದಿಂದ ಆ.9ರವರೆಗೆ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ 204.4ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಶ್ಲೇಷ ಮಳೆಯ ಆರ್ಭಟ ನೋಡಿದರೆ ಮತ್ತೆ ಪ್ರಾಕೃತಿಕ ವಿಕೋಪಗಳು ಘಟಿ ಸಲಿದೆಯೇ ಎಂಬ ಆತಂಕ ಕಾವೇರಿ ತವರಿನ ಜನರನ್ನು ಕಾಡುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ರಜೆ ಘೋಷಿ ಸಲಾಗಿತ್ತು. ಬುಧವಾರ ಕೂಡ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.

ರಸ್ತೆ ಸಂಚಾರ ಅಸ್ತವ್ಯಸ್ತ: ಮಡಿಕೇರಿ ಹಟ್ಟಿಹೊಳೆ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದು ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ವಾಗಿತ್ತು. ಸ್ಥಳೀಯರು ಮರ ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲೂ ಮರ ಬಿದ್ದಿದ್ದು, ಸಾರ್ವಜನಿಕರು ಮತ್ತು ರಕ್ಷಣಾ ಸಿಬ್ಬಂದಿ ಮರ ತೆರವು ಮಾಡಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ.

ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗಗಳಾದ ಕಾಲೂರು, ದೇವಸ್ತೂರು, ಸೀತಾರಾಮ್ ಪಾಟಿ, ಮಾಂದಲ್ ಪಟ್ಟಿ ರಸ್ತೆ ಉದ್ದಕ್ಕೂ ಬರೆ ಕುಸಿದು ರಸ್ತೆಗೆ ಬಿದ್ದಿದ್ದು ಸ್ಥಳೀಯರು ಮತ್ತು ರಕ್ಷಣಾ ಕಾರ್ಯನಿರತ ಸಿಬ್ಬಂದಿ ಮಣ್ಣು ತೆರವು ಕಾರ್ಯ ನಡೆಸಿ ಲಘು ವಾಹನಗಳ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದ್ದಾರೆ.

ಮಡಿಕೇರಿಯ ಇಂದಿರಾನಗರದಲ್ಲಿ ಮತ್ತೆ ಭೂಮಿ ಕುಸಿದು ಕುಮಾರ್ ಎಂಬುವರ ಮನೆಯ ಗೋಡೆಗಳಿಗೆ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಭಾರೀ ಹಾನಿಯಾಗಿದ್ದು, ಚೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಲು ಮಳೆ ಅಡ್ಡಿ ಉಂಟು ಮಾಡಿದೆ.

ತ್ರಿವೇಣಿ ಸಂಗಮ ಜಲಾವೃತ: ಬ್ರಹ್ಮಗಿರಿ ಬೆಟ್ಟ ತಪ್ಪಲಿನ ಕಾವೇರಿ ಉಗಮ ತಾಣವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು, ಭಾಗಮಂಡಲ ದ್ವೀಪವಾಗಿ ಪರಿಣಮಿಸಿದೆ. ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ಉಕ್ಕಿ ಹರಿಯುತ್ತಿದ್ದು, ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದೆ.

ಮಡಿಕೇರಿ-ಭಾಗಮಂಡಲ-ತಲಕಾವೇರಿ ರಸ್ತೆಯ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದ್ದು ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಭಾಗಮಂಡಲ-ಐಯ್ಯಂಗೇರಿ-ನಾಪೋಕ್ಲು ರಸ್ತೆಯ ಮೇಲೆ 5 ಅಡಿಗೂ ಅಧಿಕ ನೀರು ಹರಿಯುತ್ತಿದೆ. ಈ ರಸ್ತೆಯಲ್ಲೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಭಾಗಮಂಡಲಕ್ಕೆ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಈ ವ್ಯಾಪ್ತಿಗೆ ಇಂದಿಗೆ 130ಮಿಮೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಗ್ನಿಶಾಮಕ, ಗೃಹ ರಕ್ಷಕಾ ದಳದ ಸಿಬ್ಬಂದಿ, ನುರಿತ ಈಜು ತಜ್ಞರು ಮತ್ತ ಗ್ರಾಮಸ್ಥರ ಅನುಕೂಲಕ್ಕಾಗಿ ರ್ಯಾಫ್ಟರ್, ದೋಣಿಗಳನ್ನು ಜಿಲ್ಲಾಡಳಿತದ ವತಿಯಿಂದ ನಿಯೋಜಿಸಲಾಗಿದೆ.

ಶಾಸಕರ ಭೇಟಿ: ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ಮಂಗಳವಾರ ಭಾಗಮಂಡಲಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇರಳ ರಸ್ತೆ ಸಂಪರ್ಕ ಕಡಿತ: ದಕ್ಷಿಣ ಕೊಡಗಿನಲ್ಲಿಯೂ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ವಿರಾಜಪೇಟೆ-ಕೇರಳ ಸಂಪರ್ಕಿಸುವ ಅಂತರರಾಜ್ಯ ಹೆದ್ದಾರಿ ಮಾಕುಟ್ಟ ಬಳಿ ಭೂ ಕುಸಿತವಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ.

ಅಂತರರಾಜ್ಯ ಹೆದ್ದಾರಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ತಾತ್ಕಾಲಿಕ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಕುಸಿದಿರುವ ಹೆದ್ದಾರಿಯನ್ನು ದುರಸ್ತಿ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಹೆದ್ದಾರಿಯ ಒಂದು ಬದಿಯಲ್ಲಿ ವೆಟ್‍ಮಿಕ್ಸ್ ಬಳಸಿ ರಸ್ತೆಯನ್ನು ಸದೃಢಗೊಳಿಸಲಾಗುತ್ತಿದ್ದು, ರಸ್ತೆಗೆ ಮತ್ತಷ್ಟು ಹಾನಿಯಾಗದಂತೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಸಲಾಗಿದೆ. ಪ್ರಸ್ತುತ ಮೂರು ದಿನ ಈ ಹೆದ್ದಾರಿಯನ್ನು ಬಂದ್ ಮಾಡಿದ್ದು, ಮಳೆಯ ತೀವ್ರತೆಯನ್ನು ಆಧರಿಸಿ ಜಿಲ್ಲಾಡಳಿತ ಮುಂದಿನ ನಿರ್ಧಾರಗಳನ್ನು ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.

ನಾಪೆÇೀಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾವೇರಿ ತುಂಬಿ ಹರಿಯುತ್ತಿದೆ. ಭಾಗಮಂಡಲ-ನಾಪೆÇೀಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಬಿರುಸಿನ ಮಳೆ ಪರಿಣಾಮ ಅಲ್ಲಲ್ಲಿ ಜಲಮೂಲಗಳು ಉದ್ಭವಿಸಿವೆ. ರೈತರು ಬಿರುಸಿನಿಂದ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನದ ನಂತರ ಮಳೆ ಮತ್ತಷ್ಟು ಬಿರುಸುಗೊಂಡಿತು. ಇದರಿಂದ ಅಲ್ಲಲ್ಲಿ ಹಾನಿ ಆಗಿದೆ. ಕೊಳಕೇರಿ ಗ್ರಾಮದ ಟಿ.ಕೆ.ರಿತೇಶ್ ಎಂಬುವರ ಮನೆಯ ತಡೆಗೋಡೆ ಕುಸಿದಿದ್ದು, ಅಪಾಯ ಎದುರಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇತು ಗ್ರಾಮದ ಎಕ್ಸೆಲ್ ವಿದ್ಯಾಸಂಸ್ಥೆಯ ಬಳಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಕಂಬ ತುಂಡಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಬಾ ತಿಮ್ಮಯ್ಯ ಹಾಗೂ ಸೆಸ್ಕ್ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Translate »