ಸುಷ್ಮಾ ಸ್ವರಾಜ್ ಇನ್ನಿಲ್ಲ
ಮೈಸೂರು

ಸುಷ್ಮಾ ಸ್ವರಾಜ್ ಇನ್ನಿಲ್ಲ

August 7, 2019

ನವದೆಹಲಿ, ಆ.6- ಬಿಜೆಪಿ ಪಾಲಿನ ಫೈರ್ ಬ್ರಾಂಡ್ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಭಾರತದ ವಿದೇಶಾಂಗ ಸಚಿವೆಯಾಗಿ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯರಾಗಿದ್ದ ಸುಷ್ಮಾ ಸ್ವರಾಜ್ (67) ಹೃದಯಾ ಘಾತದಿಂದಾಗಿ ಮಂಗಳವಾರ ರಾತ್ರಿ 11.20ರ ವೇಳೆಗೆ ನಿಧನರಾದರು.

ಸದಾ ನಗುಮೊಗದ, ಅತ್ಯಂತ ಸ್ನೇಹಶೀಲ ಸ್ವಭಾವದ, ಅತ್ಯುತ್ತಮ ವಾಗ್ಮಿ, ಉತ್ತಮ ಸಂಸದೀಯ ಪಟು, ಅತ್ಯಂತ ಚಟುವಟಿಕೆಯ ವ್ಯಕ್ತಿ ಎನಿಸಿಕೊಂಡಿದ್ದ, ತಮ್ಮ ವಿಶೇಷ ಸ್ನೇಹತ್ವದಿಂದ ವಿರೋಧ ಪಕ್ಷಗಳ ನಾಯಕರ ಮೆಚ್ಚುಗೆಯನ್ನೂ ಗಳಿಸಿದ್ದ ಸುಷ್ಮಾ ಅವರ ನಿರ್ಗಮನ ಬಿಜೆಪಿ ಪಾಲಿಗಷ್ಟೇ ಅಲ್ಲ, ದೇಶದ ರಾಜಕಾರಣದ ಪಾಲಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಮೂತ್ರಪಿಂಡ ವೈಫಲ್ಯದಿಂದ ತೀವ್ರ ಅನಾರೋಗ್ಯ ಪರಿಸ್ಥಿತಿ ಎದುರಿಸುತ್ತಿದ್ದ ಸುಷ್ಮಾ ಅವರಿಗೆ ಇಂದು ರಾತ್ರಿ ಇದ್ದಕ್ಕಿದ್ದಂತೆ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಕೂಡಲೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದಾರೆ. ವಿಷಯ ತಿಳಿದು ತಕ್ಷಣ ಏಮ್ಸ್ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಭೂಸಾರಿಗೆ ಸಚಿವ ನಿತನ್ ಗಡ್ಕರಿ ಭೇಟಿ ನೀಡಿದ್ದರು.

ಬಿಜೆಪಿಯ ಪ್ರಮುಖ ನಾಯಕತ್ರಯರೆನಿಸಿದ್ದ ಅಟಲ್ ಬಿಹಾರಿ ವಾಜ ಪೇಯಿ, ಲಾಲ್‍ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರ ಹೆಚ್ಚಿನ ಒಡನಾಟ ಹೊಂದಿದ್ದ ಸುಷ್ಮಾ ಅವರು ಈ ಮೂವರಂತೆಯೇ ಉತ್ತಮ ವಾಕ್ಪಟುತ್ವವನ್ನೂ ಹೊಂದಿದ್ದರು. ಹಲವು ಭಾಷೆಗಳನ್ನು ಅರಿತಿದ್ದ ಅವರ ಭಾಷಣ ಕೇಳಲು ಜನರು ಅಪಾರ ಸಂಖ್ಯೆಯಲ್ಲಿ ನೆರೆಯುತ್ತಿದ್ದರು.

ವಿದೇಶಾಂಗ ಸಚಿವರಾಗಿ ವಿವಿಧ ದೇಶಗಳ ಸಂಚಾರ ವೇಳೆ ಭಾರತೀಯ ಸಂಸ್ಕøತಿಯ ರಾಯಭಾರಿಯೂ ಆಗಿರುವಂತೆಯೇ ಅವರ ವೇಷ ಭೂಷಣ, ನಡೆ-ನುಡಿ ಇರುತ್ತಿತ್ತು. ಸುಷ್ಮಾ ಅವರ ಎದುರಿಗೆ ನಿಂತ ವಿವಿಧ ದೇಶಗಳ ಗಣ್ಯರು, ನೇತಾರರು ಸುಷ್ಮಾ ಅವರ ಹಸನ್ಮುಖದಿಂದ ಪ್ರಭಾವಿತರಾಗಿಬಿಡುತ್ತಿದ್ದರು. ಅವರ ಈ ನಡೆನುಡಿಯೇ ವಿದೇಶಾಂಗ ಸಚಿವೆಯಾಗಿ ಅವರ ಖ್ಯಾತಿ ಇನ್ನಷ್ಟು ಹೆಚ್ಚುವಂತೆ ಮಾಡಿತ್ತು.

1952ರ ಫೆ.14ರಂದು ಹರಿಯಾಣದ ಅಂಬಾಲದಲ್ಲಿನ ದಂಡು ಪ್ರದೇಶದಲ್ಲಿ ಜನಿಸಿದ ಸುಷ್ಮಾ ಅವರ ಹುಟ್ಟು ಹೆಸರು ಸುಷ್ಮಾ ಶರ್ಮಾ. ತಂದೆ ಹರಿ ದೇವ್ ಶರ್ಮಾ, ತಾಯಿ ಲಕ್ಷ್ಮಿದೇವಿ. ಸ್ವರಾಜ್ ಕೌಶಲ್ ಅವರೊಡನೆ ವಿವಾಹವಾದ ಬಳಿಕ ಸುಷ್ಮಾ ಸ್ವರಾಜ್ ಎಂದೇ ಅವರು ಖ್ಯಾತರಾದರು. ಅಂಬಾಲಾ ಕಂಟೋನ್ಮೆಂಟ್ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕøತ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ ಗಳಿಸಿದರು.

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಬಳಿಕ 1973ರಿಂದ ಸುಪ್ರೀಂ ಕೋರ್ಟ್ ವಕೀಲೆಯಾಗಿ ವೃತ್ತಿ ಬದುಕು ಆರಂಭಿಸಿದರು.

1970ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರ್ಪಡೆಯೊಂದಿಗೆ ರಾಜಕೀಯ ಜೀವನದ ಮೊದಲ ಮೆಟ್ಟಿಲೇರಿದರು. ಪತಿ ಸ್ವರಾಜ್ ಕೌಶಲ್ ಅವರು ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಒಡನಾಟ ಹೊಂದಿದ್ದುದರಿಂದ ಸುಷ್ಮಾ ಅವರು ಜಾರ್ಜ್ ಅವರ ಕಾನೂನು ರಕ್ಷಣಾ ತಂಡದ ಭಾಗವಾದರು. ಬಳಿಕ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯಲ್ಲಿ ಭಾಗವಹಿಸುವ ಮೂಲಕ ರಾಜಕೀಯದ ಪೂರ್ಣಾವಧಿ ಬದುಕಿಗೆ ಕಾಲಿಟ್ಟರು. 1977ರಿಂದ 1982ರವರೆಗೆ ಹರಿಯಾಣ ವಿಧಾನಸಭೆ ಸದಸ್ಯರಾಗಿದ್ದರು. 1977ರ ಜುಲೈನಲ್ಲಿ ಅಂದಿನ ಮುಖ್ಯಮಂತ್ರಿ ದೇವಿಲಾಲ್ ಅವರ ಜನತಾ ಪಕ್ಷದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. 1976ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. 1997ರಿಂದ 90ರ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಲೋಕದಳ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. ತುರ್ತುಪರಿಸ್ಥಿತಿ ಬಳಿಕ ಬಿಜೆಪಿ ಸೇರಿದರು, ರಾಷ್ಟ್ರೀಯ ಮಟ್ಟದ ನಾಯಕಿಯೂ ಆದರು. 1977ರಲ್ಲಿ ಹರಿಯಾಣ ರಾಜ್ಯ ಸರ್ಕಾರದಲ್ಲಿ ಸಂಪುಟ ಸಚಿವೆಯಾದರು. 1998 ಅ.13ರಿಂದ ಡಿ.3ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು.

1990ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ನಂತರ 1996ರಲ್ಲಿ 11ನೇ ಲೋಕಸಭೆ ಸದಸ್ಯರಾಗಿ ಆರಿಸಿ ಬಂದರು. ಈ ವೇಳೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವೆ (2003 ಜ.29-2004 ಮೇ 22), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. 2009ರ ಡಿ.21ರಿಂದ 2014ರ ಮೇ 26ರವರೆಗೆ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿಯೂ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಆಗಂತೂ ಅವರ ಅಧ್ಯಯನ ಪೂರ್ಣ ಹಾಗೂ ನಿಖರ ಮಾಹಿತಿಯನ್ನೊಳಗೊಂಡ ಪ್ರಶ್ನೆಗಳು ಆಡಳಿತ ಪಕ್ಷವನ್ನು ಬಹಳಷ್ಟು ಬಾರಿ ಇಕ್ಕಟ್ಟಿಗೆ ಸಿಲುಕಿಸಿದ್ದಿದೆ. ಹೀಗೆ ರಾಜಕೀಯ ಭೂಮಿಕೆಯಲ್ಲಿ ಕೆಲಸ ಮಾಡಿದ ಎಲ್ಲ ವಿಭಾಗಗಳಲ್ಲಿಯೂ ಅವರು ಉತ್ತಮ ಹೆಸರು ಗಳಿಸಿದ್ದರು. ಒಟ್ಟಾರೆ 7 ಬಾರಿ ಸಂಸತ್‍ಗೆ ಆಯ್ಕೆಯಾಗಿದ್ದರು.

ದಿವಂಗತ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಹೊರತುಪಡಿಸಿದರೆ, ವಿದೇಶಾಂಗ ಸಚಿವೆಯಾಗಿಯಂತೂ ಕೇವಲ ಟ್ವೀಟ್‍ಗಳ ಮೂಲಕವೇ ಬಹಳಷ್ಟು ಮಂದಿಗೆ ಸಹಾಯಹಸ್ತ ಚಾಚುತ್ತಿದ್ದರು. ಸಂಕಷ್ಟದಲ್ಲಿದ್ದವರು ಅರ್ಧರಾತ್ರಿಯಲ್ಲೂ ಟ್ವೀಟ್ ಮಾಡಿದಾಗಲೂ ಸುಷ್ಮಾ ಅವರು ತಕ್ಷಣ ಸ್ಪಂದಿಸಿದ್ದಿದೆ. ಅದರಲ್ಲೂ ಪಾಕಿಸ್ತಾನದ ಬಹಳಷ್ಟು ಮಂದಿ ಭಾರತದಲ್ಲಿ ಚಿಕಿತ್ಸೆ ಬಯಸಿದಾಗ, ವೀಸಾ ಸಮಸ್ಯೆ ಆದಾಗಲೆಲ್ಲಾ ವಿದೇಶಾಂಗ ಸಚಿವೆ ನೆರವಾಗುತ್ತಿದ್ದರು. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ 2ನೇ ಅವಧಿಗೂ ಸುಷ್ಮಾ ಸ್ವರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಯಕೆ ಹೊಂದಿದ್ದರು. ಆದರೆ ಈ ಆಹ್ವಾನವನ್ನು ವಿನಯಪೂರ್ವಕವಾಗಿ ಸುಷ್ಮ ತಿರಸ್ಕರಿಸಿದ್ದರು. ವಿದೇಶಾಂಗ ಸಚಿವರಾಗಿ ಸುಷ್ಮಾ ಅವರ ಯಶಸ್ವಿ ಕಾರ್ಯನಿರ್ವಹಣೆಯನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಪ್ರಶಂಸಿಸಿದ್ದರು.

ಹಾಲಿ ಎನ್‍ಡಿಎ-2 ಸರ್ಕಾರದಲ್ಲಿ ಪಾಲ್ಗೊಳ್ಳದ ಸುಷ್ಮಾ, 2ನೇ ಅವಧಿಗೆ ಮೋದಿಯ ಸರ್ಕಾರ ರಚನೆಯಾದ ಒಂದು ತಿಂಗಳಲ್ಲೇ ತಮಗೆ ಸರ್ಕಾರದಿಂದ ನೀಡಲಾಗಿದ್ದ ನಿವಾಸವನ್ನು ಖಾಲಿ ಮಾಡಿ, ಸಫ್ದಾರ್‍ಜಂಗ್ ರಸ್ತೆ, ಮನೆ ನಂಬರ್ 8 ನನ್ನ ಅಧಿಕೃತ ನಿವಾಸವಾಗಿತ್ತು. ಅದನ್ನು ಖಾಲಿ ಮಾಡಿದ್ದೇನೆ. ನನ್ನನ್ನು ಸಂಪರ್ಕಿಸಲು ಬಯಸುವವರು ಹಳೆಯ ವಿಳಾಸ ಹಾಗೂ ಸರಕಾರಿ ನಿವಾಸದ ಫೋನ್ ನಂಬರ್‍ಗಳಿಗೆ ಕರೆ ಮಾಡಬೇಡಿ ಎಂದು ಟ್ವಿಟ್ ಮಾಡಿದ್ದರು. ಇದಕ್ಕೆ ಸಾಮಾಜಿಕ ತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

Translate »