ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ
ಮೈಸೂರು

ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ

August 7, 2019

ಬೆಂಗಳೂರು, ಆ.6(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಂತ್ರಿಮಂಡಲವನ್ನು ಆಗಸ್ಟ್ 9ರ ಶುಕ್ರವಾರದಂದು ವಿಸ್ತರಣೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ 15 ಮಂದಿಯನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ.

ಈ ಹಿಂದೆ ಮುಖ್ಯಮಂತ್ರಿಯಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವವರು ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿ ಸಚಿವ ರಾಗಿ ಕಾರ್ಯನಿರ್ವಹಿಸಬೇಕಾಗಿದೆ. ದೆಹಲಿಯಲ್ಲಿ ವರಿಷ್ಠರು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದಂತೆ ರಾಜ್ಯದ ಮೇಲಿನ ಹಿಡಿತವನ್ನು ಪೂರ್ಣವಾಗಿ ತೆಗೆದುಕೊಂಡಿ ದ್ದಾರೆ. ಹೀಗಾಗಿ ಅಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ದಕ್ಷಿಣ ಭಾರತದಲ್ಲಿ ಬಿಜೆಪಿ ಮತ್ತೆ ತನ್ನ ಬಾಗಿಲು ತೆರೆಯಲು ಕಾರಣಕರ್ತರಾಗಿ ಅನರ್ಹಗೊಂಡಿ ರುವ ಕಾಂಗ್ರೆಸ್-ಜೆಡಿಎಸ್‍ನ ಶಾಸಕ ಸ್ಥಾನದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಎರಡನೇ ಹಂತದ ವಿಸ್ತರಣೆ ಮಾಡಲಿದ್ದಾರೆ.

ಸರ್ಕಾರ ರಚನೆಗೆ ಕಾರಣಕರ್ತರಾಗಿರುವ ಈ 17 ಮಂದಿಯನ್ನು ಕೈಬಿಡದಿರಲು ವರಿಷ್ಠರು ಮತ್ತು ಯಡಿ ಯೂರಪ್ಪ ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಇದರಲ್ಲಿ 10 ರಿಂದ 12 ಮಂದಿಗೆ ಮಾತ್ರ ಮಂತ್ರಿ ಸ್ಥಾನ ದೊರೆಯ ಲಿದೆ. ಉಳಿದವರಿಗೆ ಪರ್ಯಾಯ ಅಧಿಕಾರ ಕಲ್ಪಿಸ ಬಹುದು ಎಂದು ಹೇಳಲಾಗಿದೆ. ಮಂತ್ರಿಮಂಡಲ ರಚನೆ ಕುರಿತಂತೆ ಪಕ್ಷದ ವರಿಷ್ಠರೊಟ್ಟಿಗೆ ಚರ್ಚೆ ನಡೆಸಲು ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಯವರು ಇಂದು ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಇತರ ಪ್ರಮುಖ ನಾಯಕರೊಟ್ಟಿಗೆ ಸಮಾಲೋಚನೆ ನಡೆಸಿದರು. ಮಾತುಕತೆ ಸಂದರ್ಭದಲ್ಲಿ ನಡ್ಡಾ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದಾರೆ. ಆದರೆ ಯಾರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಮುಖ್ಯಮಂತ್ರಿಯವರಿಂದ ಮಾಹಿತಿ ಪಡೆದಿದ್ದು, ಆದರೆ ಪಟ್ಟಿ ಅಂತಿಮಗೊಳಿಸಿಲ್ಲ. ನಡ್ಡಾ ಜೊತೆ ಮಾತು ಕತೆ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಕೇವಲ ಔಪಚಾರಿಕ ಮಾತುಕತೆಯಷ್ಟೆ. ಬಹುತೇಕ ನಡ್ಡಾ ಅವರೇ ಮಂತ್ರಿ ಮಂಡಲ ವಿಸ್ತರಣೆಗೆ ಸಂಬಂಧಿಸಿದಂತೆ ಒಂದು ನೀಲಿನಕ್ಷೆ ಸಿದ್ಧಪಡಿಸಿದ್ದು, ಅಧ್ಯಕ್ಷರ ಅನುಮತಿ ಪಡೆದ ನಂತರ ಯಡಿಯೂರಪ್ಪ ನವರಿಗೆ ಮಾಹಿತಿ ನೀಡಲಿದ್ದಾರೆ. ವರಿಷ್ಠರು ರವಾನಿಸಿದ ಪಟ್ಟಿಯಲ್ಲಿ ಯಾರಿರುತ್ತಾರೋ ಅಂತಹವರಿಗೆ ಮಂತ್ರಿ ಭಾಗ್ಯ ದೊರೆಯಲಿದೆ. ಬಹುದಿನಗಳ ನಂತರ ಪಕ್ಷ ಅಧಿಕಾರಕ್ಕೆ ಬಂದಿದ್ದು, ಸಚಿವರಾಗಲು 50 ರಿಂದ 60 ಶಾಸಕರು ಆಕಾಂಕ್ಷಿಗಳಾಗಿದ್ದಾರೆ.

ಇದರಲ್ಲಿ ಶೇ.50ರಷ್ಟು ಮಂದಿ ನಾಲ್ಕರಿಂದ ಆರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಪಕ್ಷ ಮತ್ತು ವಿವಿಧ ಸಂಘಟನೆಗಳಲ್ಲಿ ದುಡಿದವರಾಗಿದ್ದಾರೆ.

ಹಿರಿಯರಿರುವ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಗೋವಿಂದ್ ಕಾರಜೋಳ, ಆರ್. ಅಶೋಕ್, ಉಮೇಶ್ ಕತ್ತಿ, ಬಿ.ಶ್ರೀರಾಮುಲು, ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ, ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಸುರೇಶ್‍ಕುಮಾರ್, ಕೆ.ಜಿ ಬೋಪಯ್ಯ, ಶಶಿಕಲಾ ಜೊಲ್ಲೆ ಹಾಗೂ ಪಕ್ಷೇತರ ಸದಸ್ಯ ನಾಗೇಶ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರ ಹೆಸರುಗಳನ್ನು ನಡ್ಡಾ ಬಳಿ ಪ್ರಸ್ತಾಪಿಸಿರುವ ಮುಖ್ಯಮಂತ್ರಿಯವರು ಇವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅಗತ್ಯದ ಬಗ್ಗೆ ವಿವರಣೆ ನೀಡಿದ್ದಾರೆ. ಒಂದು ವೇಳೆ ಶಾಸಕತ್ವದಿಂದ ಅನರ್ಹಗೊಂಡವರ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗದೆ ಇದ್ದರೆ ಬಿಜೆಪಿಯ ಶಾಸಕರು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಜುಲೈ 26 ರಂದು ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಜುಲೈ 29 ರಂದು ಸಾಬೀತುಪಡಿಸಿದ್ದರು. ಇದಾದ ನಂತರ ಅವರು ಅಧಿಕಾರಿಗಳೊಂದಿಗೆ ಸಚಿವ ಸಂಪುಟ ಸಭೆ ನಡೆಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು ಸಹಜವಾಗಿಯೇ ಸಂಪುಟ ವಿಸ್ತರಣೆಯಿಲ್ಲದೆ ಹೆಜ್ಜೆ ಇಡುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಮಧ್ಯೆ ಮಂತ್ರಿಗಿರಿಗಾಗಿ ದೊಡ್ಡ ಮಟ್ಟದ ಲಾಬಿ ನಡೆಯು ತ್ತಿದೆಯಾದರೂ ಬಿಜೆಪಿ ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿರುವುದರಿಂದ ಯಾರೂ ಬಹಿರಂಗವಾಗಿ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ.

Translate »