ಇಂದು ರಾಜ್ಯ ಬಜೆಟ್
ಮೈಸೂರು

ಇಂದು ರಾಜ್ಯ ಬಜೆಟ್

March 5, 2020

ಬೆಂಗಳೂರು, ಮಾ.4(ಕೆಎಂಶಿ)-ಕೇಂದ್ರದಿಂದ ತೆರಿಗೆ ಪಾಲು ಕಡಿತದ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಬಿಜೆಪಿ ಸರ್ಕಾರದ ಈ ಅವಧಿಯ ಚೊಚ್ಚಲ ಬಜೆಟ್‍ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆಗೆ ಹಣಕಾಸು ಸಚಿವರೂ ಆದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸಜ್ಜಾಗಿದ್ದಾರೆ.

ವಿಧಾನಸಭೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಇದರ ಗಾತ್ರ 2.50 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ. ಇದರ ಜತೆಗೆ 55 ಸಾವಿರ ಕೋಟಿ ರೂ.ವರೆಗೆ ಸಾಲಕ್ಕೆ ಮೊರೆ ಹೋಗುವುದು ಅನಿವಾರ್ಯ. ಹಣಕಾಸು ಇಲಾಖೆ ಅಧಿಕಾರಿ ಗಳು ಆರ್ಥಿಕ ಸಂಕಷ್ಟದಿಂದ ಹೊಸ ಯೋಜನೆಗಳು ಬೇಡ, ಇರುವ ಯೋಜನೆಗಳಲ್ಲೇ ಕಡಿತಕ್ಕೆ ಸಲಹೆ ಮಾಡಿದ್ದರಾ ದರೂ ಸಿಎಂ ಯಡಿಯೂರಪ್ಪ ಅವರು, ಬಜೆಟ್ ಮೂಲಕ ಕೆಲವು ಯೋಜನೆ ಘೋಷಿಸಲು ನಿರ್ಧರಿಸಿದ್ದಾರೆ.

ನೀರಾವರಿ ಮತ್ತು ಕೃಷಿಗೆ ಹೆಚ್ಚು ಒತ್ತು ನೀಡಿ ಮೂರು ಬೃಹತ್ ಯೋಜನೆಗಳನ್ನು ಪ್ರಕಟಿಸಲು ತೀರ್ಮಾನಿಸಿ ದ್ದಾರೆ. ಕೃಷಿ, ನೀರಾವರಿ, ಸಮಾಜ ಕಲ್ಯಾಣ ಇಲಾಖೆಯಡಿ ಹೊಸ ಯೋಜನೆಗಳು ಜಾರಿಗೊಳ್ಳಲಿವೆ. ಕೇಂದ್ರ ಸರ್ಕಾರವು ಬಜೆಟ್‍ನಲ್ಲಿ ಕೃಷಿಗೆ ಹೆಚ್ಚು ಅನುದಾನ ಮೀಸಲಿಟ್ಟಿರುವುದು, ಸೌರ ಪಂಪ್‍ಸೆಟ್ ವಿತರಣೆ, 100 ಬರ ತಾಲೂಕುಗಳಲ್ಲಿ ವಿಶೇಷ ಯೋಜನೆ ರೂಪಿಸಿರುವುದರಿಂದ ಕೃಷಿ, ನೀರಾವರಿ, ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಕೇಂದ್ರದ ಜತೆ ಸಹಭಾಗಿತ್ವದಡಿ ರಾಜ್ಯದಲ್ಲೂ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ರಾಜ್ಯ ಸರ್ಕಾರದ ಮೇಲೆ ಸುಮಾರು 5ರಿಂದ 10 ಸಾವಿರ ಕೋಟಿ ರೂ. ಹೊರೆ ತಗ್ಗಲಿದೆ ಎಂದು ಹೇಳಲಾಗಿದೆ.

ಕೆಲವು ಇಲಾಖೆಗಳಲ್ಲಿ ಹಿಂದಿನ 3 ವರ್ಷಗಳಲ್ಲಿ ಬಜೆಟ್ ನಲ್ಲಿ ಬಿಡುಗಡೆ ಮಾಡಿದ್ದ ಹಣ ವೆಚ್ಚವಾಗದ ಮಾಹಿತಿ ಪಡೆದಿರುವ ಯಡಿಯೂರಪ್ಪ ಅಂತಹ ಇಲಾಖೆಗಳ ಶೇ.34ರಷ್ಟು ಅನುದಾನ ಕಡಿತ ಮಾಡಿ ವೆಚ್ಚದ ಯೋಜನೆ ಹಾಗೂ ಇಲಾಖೆಗಳಿಗೆ ಮರು ಹೊಂದಾಣಿಕೆ ಮಾಡಲು ಬಜೆಟ್ ನಲ್ಲಿ ಅವಕಾಶ ಕಲ್ಪಿಸಿಕೊಂಡಿದ್ದಾರೆ. 2019-20 ಸಾಲಿನಲ್ಲಿ 2.37 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರೂ ಶೇ.62ರಷ್ಟು ಮಾತ್ರ ಸಾಧನೆಯಾಗಿದ್ದು 1.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. ಈ ಬಾರಿ 2.50 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಿ 1.30 ಲಕ್ಷ ಕೋಟಿ ರೂ. ಸಂಪ ನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿದ್ದಾರೆ. ಆರ್ಥಿಕ ಸಂಪ ನ್ಮೂಲ ಕ್ರೂಢೀಕರಿಸಲು ಬೆಂಗಳೂರಿನಲ್ಲಿ ಸರ್ಕಾರಿ ಒತ್ತುವರಿ ಜಮೀನು ತೆರವುಗೊಳಿಸಿ ಮಾರಾಟ ಮಾಡಿ 10 ಸಾವಿರ ಕೋಟಿ ರೂ.ವರೆಗೆ ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ. ಈ ಬಾರಿ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಸಾಧ್ಯತೆ ಇದೆ. ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ 4ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಈಗಾಗಲೇ ಕೇರಳ, ಅಸ್ಸಾಂ ಮತ್ತು ಬಿಹಾರ ಪ್ರತ್ಯೇಕ ಮಕ್ಕಳ ಬಜೆಟ್ ಮಂಡಿಸಿ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅದೇ ರೀತಿ ಮುಖ್ಯಮಂತ್ರಿಯವರು ಮಕ್ಕಳ ಬಜೆಟ್ ಮಂಡಿಸಿ, ರಾಜ್ಯದಲ್ಲಿ ಮತ್ತೊಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅವರ ಅಭಿವೃದ್ಧಿ, ಯೋಜನೆ ಮತ್ತು ಕಾರ್ಯಕ್ರಮ, ಹಂಚಿಕೆ ಮಾಡುವ ಅನುದಾನ, ವೆಚ್ಚ ವಿಶ್ಲೇಷಿಸು ವುದು ಸರ್ಕಾರದ ಉದ್ದೇಶವಾಗಿದೆ. ಜಿಲ್ಲಾ ಮತ್ತು ಗ್ರಾಪಂಗಳ ಹಂತದ ಸಂಸ್ಥೆಯಲ್ಲಿಯೇ ಮಕ್ಕಳ ಕುರಿತಾದ ಸರ್ಕಾರದ ಯೋಜನೆಗಳ ಮೇಲ್ವಿಚಾರಣೆ ಮತ್ತು ಅನುದಾನ ಹಂಚಿಕೆ ಹಾಗೂ ವೆಚ್ಚಗಳ ನಿರ್ವಹಣೆ ಕುರಿತಂತೆ ನಿಗಾವಹಿಸಲು ಬಜೆಟ್‍ನಲ್ಲಿ ಯೋಜನೆ ರೂಪಿಸಲಿದ್ದಾರಂತೆ. ಅಲ್ಲದೇ, ರೈತರಿಗೆ, ವೃದ್ಧರಿಗೆ, ಮಹಿಳೆಯರಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಆರೋಗ್ಯ ಭಾಗ್ಯ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ.

ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ವಿವಾದ  ಬಿ-ಖರಾಬಿನಿಂದ ಸಿಐಟಿಬಿ, ಮುಡಾ ಬಡಾವಣೆಗಳ ಕೈಬಿಡುವ
ಸಂಬಂಧ ಸದ್ಯದಲ್ಲಿ ಮುಖ್ಯಮಂತ್ರಿ ನಿರ್ಧಾರ
ಮೈಸೂರು,ಮಾ.4-ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿ ಸಿಐಟಿಬಿ ಮತ್ತು ಮುಡಾ ಅಭಿವೃದ್ಧಿಪಡಿಸಿದ್ದ ಸಿದ್ಧಾರ್ಥನಗರ, ಕೆ.ಸಿ.ನಗರ, ಆಲನಹಳ್ಳಿ, ವಿದ್ಯಾನಗರ, ಜೆ.ಸಿ.ನಗರ ಹಾಗೂ ಆದಾಯ ತೆರಿಗೆ ನಗರ ಬಡಾವಣೆಗಳ ನಿವಾಸಿಗಳ ಬಹು ದಿನಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮುಂದಾಗಿದ್ದಾರೆ.

ಚಾಮುಂಡಿಬೆಟ್ಟದ ತಪ್ಪಲಿನ ಭೂಮಿ ಬಿ-ಖರಾಬು (ಸರ್ಕಾರಿ ಭೂಮಿ) ಎಂದು ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಘೋಷಿಸಿದ ನಂತರ ಈ ಪ್ರದೇಶದಲ್ಲಿ ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳೇ ಆದ ಸಿಐಟಿಬಿ ಮತ್ತು ಮುಡಾ ಅಭಿವೃದ್ಧಿಪಡಿಸಿ ಮಾರಾಟ ಮಾಡಿದ್ದ ಕೆ.ಸಿ.ನಗರ, ಜೆ.ಸಿ.ನಗರ, ಸಿದ್ಧಾರ್ಥನಗರ, ಆಲನಹಳ್ಳಿ, ವಿದ್ಯಾನಗರ, ಆದಾಯ ತೆರಿಗೆ ನಗರ ಬಡಾವಣೆಗಳ ನಿವಾಸಿಗಳು ತಮ್ಮ ಆಸ್ತಿ ದಾಖಲೆ ವಿಲೇವಾರಿ ಸ್ಥಗಿತಗೊಂಡು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಈ ಬಡಾವಣೆಗಳಲ್ಲಿರುವ ನಿವೇಶನಗಳ ನಕ್ಷೆ ಅನುಮೋದನೆ, ಖಾತೆ ಬದಲಾವಣೆ, ಕಟ್ಟಡ ನಿರ್ಮಾಣ, ಆಸ್ತಿ ಮೇಲೆ ಸಾಲ ಪಡೆಯುವುದಾಗಲೀ, ಮಾರಾಟ ಮಾಡುವು ದಾಗಲೀ, ತಮ್ಮ ವಾರಸುದಾರರಿಗೆ ಆಸ್ತಿ ವರ್ಗಾವಣೆ ಮಾಡುವುದಾಗಲೀ ಸಾಧ್ಯವಾಗದೇ ತೀವ್ರ ಸಮಸ್ಯೆಗೀಡಾದರು. ಸರ್ಕಾರಿ ಅಂಗ ಸಂಸ್ಥೆಗಳೇ ಆದ ಸಿಐಟಿಬಿ, ಮುಡಾ ದಿಂದ ಹಣ ನೀಡಿ ಖರೀದಿಸಿದ ನಿವೇಶನಗಳ ವಿಚಾರವಾಗಿ ಉಂಟಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಿವಾಸಿಗಳು ದುಂಬಾಲು ಬಿದ್ದಿದ್ದರು. ಅಂತಿಮವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ `ಕುರುಬಾರಹಳ್ಳಿ ಸರ್ವೆ ನಂ.4ರ ಕ್ಷೇಮಾಭಿವೃದ್ಧಿ ಸಂಘ’ ರಚಿಸಿಕೊಂಡು ಬೀದಿಗಿಳಿದು ಹೋರಾಟ ನಡೆಸಿದರು.

ಇದರ ಫಲವಾಗಿ ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಯಲ್ಲಿ ಸಿಐಟಿಬಿ ಮತ್ತು ಮುಡಾ ಅಭಿವೃದ್ಧಿಪಡಿಸಿದ್ದ ಬಡಾವಣೆಗಳನ್ನು ಬಿ-ಖರಾಬಿನಿಂದ ವಿಹಿತಗೊಳಿಸಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದರು. ಆದರೆ ಅದಾಗಲೇ ಈ ಸರ್ವೆ ನಂಬರ್‍ಗಳ ವ್ಯಾಪ್ತಿಯ ಕೆಲ ಆಸ್ತಿಗಳ ವಿಚಾರ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದ ಹಿನ್ನೆಲೆಯಲ್ಲಿ ಸಂಪುಟ ಸಭೆಯ ನಿರ್ಧಾರವನ್ನು ನ್ಯಾಯಾಲಯದ ಗಮನಕ್ಕೆ ತಂದು, ನಂತರ ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸುವ ನಿರ್ಧಾರಕ್ಕೂ ಬರಲಾಗಿತ್ತು.

ಈ ಬಡಾವಣೆಗಳ ನಿವಾಸಿಗಳ ಸಮಸ್ಯೆ ಪರಿಹಾರವಾಗಲು ಸರ್ಕಾರಿ ಆದೇಶ ವೊಂದೇ ಬಾಕಿ ಉಳಿ ದಿದ್ದು, ಆ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆದು ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂತು. ಆದರೆ ಸಮ್ಮಿಶ್ರ ಸರ್ಕಾರದ ಆಳ್ವಿಕೆಯಲ್ಲಿ ಈ ಬಡಾ ವಣೆ ನಿವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಯಲೇ ಇಲ್ಲ. ಆದರೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿಗೆ ಭೇಟಿ ನೀಡಿದ್ದಾಗ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ
ಈ ಬಡಾವಣೆಗಳ ನಿವಾಸಿಗಳು ಸುತ್ತೂರು ಶಾಖಾ ಮಠದಲ್ಲಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಕುರಿತು ಸುದೀರ್ಘವಾಗಿ ವಿವರಿಸಿ ಮನವಿ ಸಲ್ಲಿಸಿದ್ದರು. ಅತೀ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಕುಮಾರಸ್ವಾಮಿ ನೀಡಿದ್ದರು. ಆದರೆ ಪರಿಹಾರ ದೊರೆಯಲೇ ಇಲ್ಲ.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಬಿ.ಪಿ.ಮಂಜುನಾಥ್, ಈ ಬಡಾವಣೆ ನಿವಾಸಿಗಳ ಸಂಕಷ್ಟ ಕುರಿತು ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರಲ್ಲಿ ಸಿಐಟಿಬಿ ಮತ್ತು ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳಿಗೆ ಸಂಬಂಧಿ ಸಿದ ಕಡತವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಂದ ತರಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅವುಗಳ ಪರಿಶೀಲನೆ ನಡೆಸಿದ್ದು, ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಅಧಿಕಾರಿ ಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »