ಸಹಜ ಸ್ಥಿತಿಯತ್ತ ಜಮ್ಮು-ಕಾಶ್ಮೀರಶಾಲಾ, ಕಾಲೇಜು ಪ್ರಾರಂಭ, ನಿಷೇಧಾಜ್ಞೆ ತೆರವು
ಮೈಸೂರು

ಸಹಜ ಸ್ಥಿತಿಯತ್ತ ಜಮ್ಮು-ಕಾಶ್ಮೀರಶಾಲಾ, ಕಾಲೇಜು ಪ್ರಾರಂಭ, ನಿಷೇಧಾಜ್ಞೆ ತೆರವು

August 11, 2019

ಶ್ರೀನಗರ, ಆ.10- ಹಲವು ದಿನಗಳಿಂದ ಸ್ತಬ್ಧವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ. ಉಳಿದೆಡೆಯೂ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಹೇರಿದ್ದ ನಿಷೇಧಾಜ್ಞೆಯನ್ನು ತೆರವುಗೊಳಿ ಸಿದ್ದರಿಂದ ಸ್ಥಗಿತಗೊಂಡಿದ್ದ ಸಾಮಾನ್ಯ ಚಟುವಟಿಕೆಗಳು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ 5 ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದು, ಅಲ್ಲದೆ, ಸರ್ಕಾರಿ ಕಚೇರಿಗಳ ಹಾಜರಾತಿ ಯಲ್ಲಿಯೂ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು, ಕಥುವಾ, ಸಾಂಬಾ, ಉಧಂಪುರ್ ಮತ್ತು ರಿಯಾಸಿಯ ಜಿಲ್ಲೆಗಳಲ್ಲಿ ಎಲ್ಲ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತೆ ಪುನರಾರಂಭಗೊಂಡಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆಗಸ್ಟ್ 5ರಂದು ನಿರ್ಬಂಧ ಹೇರಿದ ನಂತರ ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹೀಗಾಗಿ ಈ ಜಿಲ್ಲೆಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಎಲ್ಲ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ತೆರೆದಿವೆ. ಸಂಚಾರವು ಈ ಜಿಲ್ಲೆಗಳಲ್ಲಿ ಸಹಜವಾಗಿದೆ. ಈ ಮೂಲಕ ಎಲ್ಲ ರೀತಿಯ ನಿರಾಳತೆಯನ್ನು ಜನರಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಶುಕ್ರವಾರ ಜಮ್ಮು ಮತ್ತು ಶ್ರೀನಗರದಲ್ಲಿ ಪ್ರಾರ್ಥನೆಯು ಸಹ ಶಾಂತಿಯುತವಾಗಿ ನಡೆಯಿತು. ಆದರೆ ಪೂಂಚ್, ರಾಜೌರಿ ಹಾಗೂ ರಾಂಬಾನ್ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಆದೇಶದ ಪ್ರಕಾರ, ಜಮ್ಮು ಭಾಗದ 10 ಜಿಲ್ಲೆಗಳ ಆಡಳಿತ ಮಂಡಳಿಗಳು ಆ.5ರಂದು ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿತ್ತು. ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಆಯುಕ್ತ ಅಂಗ್ರೆಜ್ ಸಿಂಗ್ ರಾಣಾ ಮಾತನಾಡಿ, ಸೋಮವಾರ ನಿಷೇಧಾಜ್ಞೆ ಹೇರಿದ ನಂತರ ಮೊದಲ ಬಾರಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಒಂದು ಗಂಟೆಗಳ ಕಾಲ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತ ಬೆಂಬಲಿಸಿದ ರಷ್ಯಾ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ಭಾರತದ ನಿರ್ಧಾರವನ್ನು ರಷ್ಯಾ ಬೆಂಬಲಿಸಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡ ನಿರ್ಧಾರದಿಂದ ಆ ಭಾಗದಲ್ಲಿ ಭಾರತ ಹಾಗೂ ಪಾಕಿಸ್ತಾನ ಆಕ್ರಮಣಕಾರಿ ನೀತಿ ಅನುಸರಿಸುವುದಿಲ್ಲ ಎಂಬ ನಿರೀಕ್ಷೆಯನ್ನು ಮಾಸ್ಕೊ ಹೊಂದಿರುವುದಾಗಿ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿ ಸಿದೆ. ಭಾರತ ಸಂವಿಧಾನದ ಚೌಕಟಿನೊಳಗೆ ಜಮ್ಮು- ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿದೆ. ಇದರಿಂದಾಗಿ ಉಭಯ ದೇಶಗಳ ನಡುವಣ ಯಾವುದೇ ರೀತಿಯ ಯುದ್ಧದಂತಹ ಮನೋಭಾವ ಉಂಟಾಗುವುದಿಲ್ಲ ಎಂದು ಭರವಸೆ ಹೊಂದಿರುವುದಾಗಿ ತಿಳಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ವನ್ನು ಸುಧಾರಿಸುವ ನಿಟ್ಟಿನಲ್ಲಿ ರಷ್ಯಾ ನಿರಂತರವಾಗಿ ಬೆಂಬಲಿಸುತ್ತಾ ಬಂದಿದೆ. 1972ರ ಶಿಮ್ಲಾ ಒಪ್ಪಂದ ಹಾಗೂ 1999ರ ಲಾಹೋರ್ ಘೋಷಣೆಯಂತೆ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ.

 

 

Translate »