ಮೈಸೂರು ಪುರಭವನದಲ್ಲಿ `ನೆರವು ಕೇಂದ್ರ’ ಆರಂಭ
ಮೈಸೂರು

ಮೈಸೂರು ಪುರಭವನದಲ್ಲಿ `ನೆರವು ಕೇಂದ್ರ’ ಆರಂಭ

August 11, 2019

ಮೈಸೂರು,ಆ.10(ವೈಡಿಎಸ್)-ವರು ಣನ ಆರ್ಭಟದಿಂದ ನಲುಗಿರುವ ಉತ್ತರ ಕರ್ನಾಟಕ, ಹಾಸನ, ಕೊಡಗು ಜಿಲ್ಲೆಗಳಿಗೆ ನೆರವು ನೀಡಲು ಜಿಲ್ಲಾಡಳಿತದಿಂದ ಪುರ ಭವನದಲ್ಲಿ `ನೆರವು ಕೇಂದ್ರ’ ಆರಂಭಿಸಿದ್ದು, 24 ಬಗೆಯ ತುರ್ತು ಅಗತ್ಯ ವಸ್ತುಗಳನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

ಪ್ರವಾಹದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳೊಂದಿಗಿನ ಸಭೆ ಯಲ್ಲಿ ಮಾತನಾಡಿದ ಅವರು, ವರುಣನ ಆರ್ಭಟಕ್ಕೆ ರಾಜ್ಯದ 16 ಜಿಲ್ಲೆಗಳಲ್ಲಿ ನೆರೆ ಹಾವಳಿ ಹೆಚ್ಚಾಗಿ ಸಂತ್ರಸ್ತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮೈಸೂರಿನ ನೆರೆ ಜಿಲ್ಲೆಯಾದ ಕೊಡಗು-ಹಾಸನ ಜಿಲ್ಲೆಗಳಲ್ಲೂ ಬಾರಿ ಹಾನಿಯಾಗಿದೆ. ಕೊಡಗು ಜಿಲ್ಲಾಧಿ ಕಾರಿಗಳು ತುರ್ತು ಅಗತ್ಯವಿರುವ 24 ಬಗೆಯ ಅಗತ್ಯ ವಸ್ತುಗಳ ಪಟ್ಟಿಯನ್ನು ಕಳುಹಿಸಿದ್ದು, ಅವುಗಳನ್ನು ಸಾರ್ವಜನಿಕರು, ಸಂಘ-ಸಂಸ್ಥೆ ಗಳು ನೀಡಬೇಕು. ಪುರಭವನದಲ್ಲಿ ಈಗಾ ಗಲೇ ವಸ್ತುಗಳನ್ನು ಸ್ವೀಕರಿಸಲಾಗುತ್ತಿದ್ದು, ಸ್ವೀಕರಿಸುವ ವಸ್ತುಗಳಿಗೆ ರಶೀದಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಸಂತ್ರಸ್ತರಿಗೆ ನೆರವಾಗಲು ಹಣ ನೀಡು ವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಖಾತೆಗೆ ನೇರವಾಗಿ ಜಮಾ ಮಾಡಬಹುದು. ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ನೇರವಾಗಿ ಹಣ ಸಂಗ್ರ ಹಿಸುವಂತಿಲ್ಲ ಎಂದು ಹೇಳಿದರು.

ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಸಂಘ-ಸಂಸ್ಥೆಗಳ ಮುಖ್ಯಸ್ಥರು ಜಿಲ್ಲಾ ಡಳಿತದ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ದರೆ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸ ಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಪಾರಂಪರಿಕ ಕಟ್ಟಡಗಳ ಪರಿಶೀಲನೆ: ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಈಗಾಗಲೇ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯ ಪಾರಂಪರಿಕ ಕಟ್ಟಡ ಕುಸಿದಿದೆ. ಮೈಸೂರಿನಲ್ಲಿ ನೂರಾರು ಹಳೆಯ ಪಾರಂ ಪರಿಕ ಕಟ್ಟಡಗಳಿದ್ದು, ಅಪಘಾತ ಸಂಭವಿ ಸುವ ಮುನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಂಘಟನೆಗಳ ಮುಖಂಡರು ಕೋರಿದರು.

ದೇಣಿಗೆ ಸಂಗ್ರಹ: ನೆರೆ ಸಂತ್ರಸ್ತರಿಗೆ ಪರಿ ಹಾರ ನೀಡಲು ಕೆಲವರು ಸಂಘ-ಸಂಸ್ಥೆ ಗಳ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದಿದ್ದಕ್ಕೆ ಕೆಲವು ಸಂಘಟನೆಗಳ ನಡುವೆಯೇ ಪರ-ವಿರೋಧ ವ್ಯಕ್ತವಾಯಿತು.

ಈ ವೇಳೆ ಸಂಘಟನೆಯೊಂದು ಕೊಡ ಗಿನ ಸಂತ್ರಸ್ತರಿಗೆ ಪರಿಹಾರ ನೀಡಲು ಈಗಾ ಗಲೇ ದೇಣಿಗೆ ಸಂಗ್ರಹಿಸಿದ್ದು, ಇನ್ನೂ ಸಂಗ್ರಹ ಮಾಡಬೇಕೆಂದಿದ್ದೇವೆ. ಆದರೆ, ಈಗ ದೇಣಿಗೆ ಸಂಗ್ರಹಿಸಬಾರದೆಂದರೆ ಹೇಗೆ? ಎಂದು ಪ್ರಶ್ನಿಸಿದರು. ಈ ವೇಳೆ ಕೆಲವು ಸಂಘಟನೆಯವರು ಜಿಲ್ಲಾಡಳಿತದಿಂದ ಅಧಿಕೃತ ಹೇಳಿಕೆ ನೀಡಿದರೆ ಅಗತ್ಯ ವಸ್ತು ಗಳನ್ನು ಸಂಗ್ರಹಿಸಲು ಅನುಕೂಲವಾಗು ತ್ತದೆ ಎಂದಾಗ, ಈ ಕುರಿತು ಜಿಲ್ಲಾಧಿ ಕಾರಿಗಳೊಂದಿಗೆ ಚರ್ಚಿಸುವುದಾಗಿ ಅಪರಜಿಲ್ಲಾಧಿಕಾರಿಗಳು ತಿಳಿಸಿದರು.

ಕೆಲವು ಸಂಸ್ಥೆಗಳು ಮಾನವ ಸಂಪ ನ್ಮೂಲ ಸೇವೆಯ ಅವಶ್ಯಕತೆ ಇದ್ದಲ್ಲಿ ತಮ್ಮ ಸಂಸ್ಥೆಗಳಿಂದ ಒದಗಿಸಲಾಗುವುದು ಎಂದಾಗ, ಅಪರ ಜಿಲ್ಲಾಧಿಕಾರಿಗಳು ಈ ಬಗ್ಗೆ ಚರ್ಚಿಸಿ ಅವಶ್ಯಕತೆ ಇದ್ದಲ್ಲಿ ತಮ್ಮ ಸಂಸ್ಥೆಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಸಭೆಯಲ್ಲಿ ಮುಡಾ ಆಯುಕ್ತ ಪಿ.ಎಸ್. ಕಾಂತರಾಜು, ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್, ತಹಸೀಲ್ದಾರ್ ರಮೇಶ್ ಬಾಬು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸಂಘ -ಸಂಸ್ಥೆ ಗಳ ಮುಖ್ಯಸ್ಥರಾದ ಬಿ.ಎಸ್.ದಿನೇಶ್, ಆರ್.ರಘುನಾಥ್, ಡಾ.ಎಂ.ಪ್ರದೀಪ್, ಕೆ.ಬಿ. ಗುರುಮೂರ್ತಿ, ಎಂ.ಮಹದೇವಪ್ಪ, ಹೆಚ್. ರಾಮಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

 

Translate »