ಮೈಸೂರು ಅಗ್ನಿಶಾಮಕ ದಳದಿಂದ ಕೊಡಗಿಗೆ ರಕ್ಷಣಾ ಸಾಮಗ್ರಿ
ಮೈಸೂರು

ಮೈಸೂರು ಅಗ್ನಿಶಾಮಕ ದಳದಿಂದ ಕೊಡಗಿಗೆ ರಕ್ಷಣಾ ಸಾಮಗ್ರಿ

August 11, 2019

ಮೈಸೂರು,ಆ.10(ಆರ್‍ಕೆ)-ಭಾರೀ ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಸಂತ್ರಸ್ತರನ್ನು ರಕ್ಷಿಸಲು ಮೈಸೂರಿನ ಅಗ್ನಿಶಾಮಕ ಠಾಣೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಉಪಕರಣ ಗಳೊಂದಿಗೆ ಧಾವಿಸಿದ್ದಾರೆ.

ಕಾವೇರಿ, ಲಕ್ಷ್ಮಣತೀರ್ಥ, ಕೀರೆ ಪೋಲ್ ಮತ್ತು ಹಲವು ನದಿಗಳು ತುಂಬಿ ಹರಿ ಯುತ್ತಿರುವುದರಿಂದ ಉಂಟಾಗಿರುವ ಪ್ರವಾಹದಿಂದ ಸುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಅಪಾಯ ದಲ್ಲಿ ಸಿಲುಕಿದ್ದಾರೆ. ಅವರ ನೆರವಿಗಾಗಿ ಮೈಸೂರಿನ ಅಗ್ನಿಶಾಮಕ ದಳ, ಎರಡು ವಾಹನಗಳಲ್ಲಿ ದೋಣಿ, 100 ಮೀಟರ್ ದೂರದವರೆಗೆ ಪ್ರಖರ ಬೆಳಕು ನೀಡುವ ಲೈಟ್‍ಗಳು, ಮರ ಕತ್ತರಿಸುವ ಗರಗಸ, ಜೀವರಕ್ಷಕ ಸಾಮಗ್ರಿಗಳನ್ನು ಬುಧವಾರ ಮತ್ತು ಶುಕ್ರವಾರ ಕೊಡಗು ಜಿಲ್ಲೆಗೆ ರವಾನಿಸಲಾಯಿತು.

ಐವರು ಅಗ್ನಿಶಾಮಕ ಅಧಿಕಾರಿಗಳು, 18 ಮಂದಿ ಸಿಬ್ಬಂದಿ, ಈಜುಗಾರರೂ ಸಹ ನೆರೆ ಹಾವಳಿ ಪ್ರದೇಶಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳ ತೆರವು, ಕುಸಿದಿರುವ ಗುಡ್ಡದ ಮಣ್ಣನ್ನು ತೆಗೆಯು ವುದು, ಮನೆಗಳಡಿ ಸಿಲುಕಿರುವವರನ್ನು ರಕ್ಷಿಸುವುದು, ನೀರಿನಲ್ಲಿ ಸಿಲುಕಿರುವವ ರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವ ಕಾರ್ಯಾಚರಣೆಯಲ್ಲಿ ಪೊಲೀಸರು, ಎನ್‍ಡಿಆರ್‍ಎಫ್ ಸಿಬ್ಬಂದಿ, ಜಿಲ್ಲಾಡಳಿ ತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳೊಂದಿಗೆ ನೆರವಾಗುತ್ತಿದ್ದಾರೆ.

ಅಗತ್ಯ ಬಿದ್ದರೆ ಇನ್ನೂ ಹಲವು ರಕ್ಷಣಾ ಸಲಕರಣೆಗಳು ಹಾಗೂ ಸಿಬ್ಬಂದಿಗಳನ್ನು ಮಡಿಕೇರಿ ಹಾಗೂ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಿಗೆ ಕಳುಹಿಸಲು ಮೈಸೂರು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

 

Translate »