ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಗೂಡ್ಸ್ ವಾಹನ
ಕೊಡಗು

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಗೂಡ್ಸ್ ವಾಹನ

April 18, 2020

ಮಡಿಕೇರಿ, ಏ.17- ಹುಣಸೂರಿನಿಂದ ಮಡಿಕೇರಿಗೆ ತರಕಾರಿ ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬಸವನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಶುಕ್ರವಾರ ಬೆಳಗಿನ 4.45ರ ನಸುಕಿನ ಸಮಯದಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೊಬ್ಬ ಯುವಕ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕುರಿತು ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆ ವಿವರ: ಮಡಿಕೇರಿ ಮಹದೇವಪೇಟೆ ನಿವಾಸಿ ಕುಮಾರ್ ಎಂಬಾತ ತನ್ನ ಅಶೋಕ್ ಲೈಲ್ಯಾಂಡ್ ಮಿನಿ ಗೂಡ್ಸ್(ಕೆ.ಎ.12-ಬಿ.3298) ವಾಹನದಲ್ಲಿ ಅಧಿಕೃತ ಪಾಸ್ ಪಡೆದುಕೊಂಡು ಗೆಳೆಯನೊಂದಿಗೆ ಗುರುವಾರ ರಾತ್ರಿ ಹುಣಸೂರು ಮಾರುಕಟ್ಟೆಗೆ ತರಕಾರಿ ತರಲು ಹೋಗಿದ್ದ. ಬೆಳಗಿನ ಜಾವ ಮಡಿಕೇರಿ ಸಂತೆಗೆ ತರಕಾರಿ ತರುವ ವೇಳೆ ಪಿರಿಯಾಪಟ್ಟಣದ ಬಳಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಇಬ್ಬರು ಕೂಡ ಕೆಲಕಾಲ ನಿದ್ದೆ ಮಾಡಿದ್ದಾರೆ. ಬಳಿಕ ಬೆಳಗಿನ 4 ಗಂಟೆಯ ಸಮಯದಲ್ಲಿ ಮಡಿಕೇರಿ ಸಂತೆಗೆ ತಡವಾಯಿತೆಂದು ತರಾತುರಿಯಲ್ಲಿ ಬರುತ್ತಿದ್ದಾಗ ಬಸವನಹಳ್ಳಿ ಬಳಿ ಚಾಲಕ ಕುಮಾರ್‍ಗೆ ನಿದ್ರೆ ಮಂಪರು ಆವರಿಸಿದೆ. ವೇಗದಲ್ಲಿದ್ದ ವಾಹನ ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ಬಲ ಬದಿಗೆ ಸರಿದು ಸುಮಾರು 50 ಮೀ.ನಷ್ಟು ಚಲಿಸಿ ಪಕ್ಕದಲ್ಲಿದ್ದ ಮನೆಗೆ ನುಗ್ಗಿದ್ದಲ್ಲದೇ, ಅಲ್ಲಿದ್ದ ಕಾರಿಗೆ ಗುದ್ದಿ ಉರುಳಿ ಬಿದ್ದಿದೆ. ಈ ಅಪಘಾತದಿಂದ ನಿದ್ದೆಯಲ್ಲಿದ್ದ ಮನೆ ಮಂದಿ ಬೆಚ್ಚಿ ಬಿದ್ದಿದ್ದರೆ, ಗೂಡ್ಸ್ ವಾಹನದಲ್ಲಿದ್ದ ಚಾಲಕ ಕುಮಾರ್ ಮತ್ತು ಮತ್ತೊಬ್ಬ ಯುವಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತದ ರಭಸಕ್ಕೆ ಕಾರಿನ ಎಡ ಬದಿ ಮತ್ತು ಗೂಡ್ಸ್ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಮನೆಯ ಮುಂಬದಿಯ ರೂಫಿಂಗ್ ಶೀಟ್ ಗಳಿಗೆ ಹಾನಿಯಾಗಿದೆ. ಗೂಡ್ಸ್ ವಾಹನದಲ್ಲಿದ್ದ 30 ಸಾವಿರ ರೂ. ಮೌಲ್ಯದ ವಿವಿಧ ತರಕಾರಿಗಳು ಸಂಪೂರ್ಣ ಮಣ್ಣು ಪಾಲಾಗಿದೆ. ಮಾಹಿತಿ ಅರಿತ ಕುಶಾಲನಗರ ಸಂಚಾರಿ ಪೊಲೀಸರು ಸ್ಥಳ ಮಹಜರು ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »