ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ  ಮುಂಡಂಡ ಅನುಪಮ ಇನ್ನಿಲ್ಲ
ಮೈಸೂರು

ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಮುಂಡಂಡ ಅನುಪಮ ಇನ್ನಿಲ್ಲ

April 19, 2021

ಮಡಿಕೇರಿ, ಏ.18- ಕೊಡಗಿನ ಹೆಸರಾಂತ ಹಾಕಿ ತಾರೆ ಭಾರತದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ 41 ವರ್ಷದ ಮುಂಡಂಡ (ಪುಚ್ಚಿಮಂಡ) ಅನುಪಮ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

88ಕ್ಕೂ ಅಧಿಕ ಅಂತರರಾಷ್ಟ್ರೀಯ ಹಾಕಿ ಪಂದ್ಯಾ ವಳಿಗಳಲ್ಲಿ ಭಾಗವಹಿಸಿದ್ದ ಅನುಪಮ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ “ಫೆಡರೇಷನ್ ಆಫ್ ಇಂಟರ್‍ನ್ಯಾಷನಲ್ ಹಾಕಿ” ಪಂದ್ಯಾವಳಿಗಳ ತೀರ್ಪುಗಾರರಾಗಿ ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ 1980 ಜುಲೈ 8ರಂದು ಜನಿಸಿದ ಅನುಪಮ, ಪತಿ ಮುಂಡಂಡ ಎಸ್.ಮಂದಣ್ಣ ಅವರೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದರು. ಅತ್ಯಂತ ಕಿರಿಯ ವಯಸ್ಸಿ ನಲ್ಲಿಯೇ ಹಾಕಿ ಕ್ರೀಡೆಯ ಬಗ್ಗೆ ಒಲವು ಹೊಂದಿದ್ದ ಅನುಪಮ, ರಾಜ್ಯದ ಕಿರಿಯ ಹಾಕಿ ತಂಡ ಹಾಗೂ ರಾಷ್ಟ್ರೀಯ ಹಿರಿಯ ಮಹಿಳಾ ಹಾಕಿ ತಂಡದಲ್ಲಿ ದೇಶ ವನ್ನು ಪ್ರತಿನಿಧಿಸಿದ್ದರು. 2005ರಲ್ಲಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರರಾಗಿ ಹೊರಹೊಮ್ಮಿದ ಅವರು, ತಮ್ಮ ಪ್ರತಿಭೆ ಮತ್ತು ಸಾಧನೆಯ ಮೂಲಕ ವಿದೇಶ ಗಳಲ್ಲಿ ನಡೆದ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿ ಗಳ ತೀರ್ಪುಗಾರಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿದೇಶದಲ್ಲಿ ರಾರಾಜಿಸುವಂತೆ ಮಾಡಿದ್ದರು.

ಅಪ್ರತಿಮ ಸಾಧಕಿ, ಹಾಕಿ ಕ್ರೀಡಾ ತಾರೆ ಅನುಪಮ ಅವರ ಅಕಾಲಿಕ ಅಗಲಿಕೆಗೆ ಹಾಕಿ ತವರು ಕೊಡಗು ಜಿಲ್ಲೆ ಕಂಬನಿ ಮಿಡಿದಿದೆ. ಹಾಕಿ ಕ್ರೀಡಾಪಟುಗಳು, ಹಾಕಿ ಕ್ರೀಡಾ ಅಭಿಮಾನಿಗಳು ಸೇರಿದಂತೆ ನೂರಾರು ಮಂದಿ ಅನುಪಮ ಅವರ ನಿಧನಕ್ಕೆ ಅಶ್ರುತ ರ್ಪಣೆಯ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಾಧನೆಯ ಹಾದಿ: ಹಾಕಿ ಕ್ರೀಡಾಪಟುಗಳಾದ ಪುಚ್ಚಿಮಂಡ ಶಿವಪ್ಪ ಮತ್ತು ಶಾಂತಿ ದಂಪತಿ ಪುತ್ರಿ ಅನುಪಮ, ಕರ್ನಾಟಕ ಸಬ್ ಜ್ಯೂನಿಯರ್ ಮತ್ತು ಹಿರಿಯ ಮಹಿಳಾ ಹಾಕಿ ಆಟಗಾರರಾಗಿ ರಾಷ್ಟ್ರೀಯ ಹಾಕಿ ಚಾಂಪಿಯನ್‍ಶಿಪ್‍ನಲ್ಲಿ ಪಂದ್ಯವಾಡಿದ್ದು, 2002-2003ರಲ್ಲಿ ಅತ್ಯುತ್ತಮ ಆಲ್‍ರೌಂಡರ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. 2004ರಲ್ಲಿ ಹೈದರಾ ಬಾದ್‍ನಲ್ಲಿ ನಡೆದ ಜ್ಯೂನಿಯರ್ ಏಷ್ಯಾ ಕಪ್ ಚೈನಾ -ಕೊರಿಯ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. 2005ರಲ್ಲಿ ಫೆಡರೇಷನ್ ಆಫ್ ಇಂಟರ್‍ನ್ಯಾಷನಲ್ ಹಾಕಿಗೆ ಭಾರತದ ಅತ್ಯಂತ ಕಿರಿಯ ಮಹಿಳಾ ಹಾಕಿ ತೀರ್ಪುಗಾರರಾಗಿ ಅನುಪಮ ಪದಾ ರ್ಪಣೆ ಮಾಡಿದ್ದರು. 2005ರಲ್ಲಿ ಕೊರಿಯ ಅಂತ ರಾಷ್ಟ್ರೀಯ ಟೂರ್ನ್‍ಮೆಂಟ್, 2005ರ ಚಿಲಿ ಸ್ಯಾಂಟಿಗೋ ದಲ್ಲಿ ನಡೆದ ಜ್ಯೂನಿಯರ್ ವಿಶ್ವಕಪ್, 2006ರಲ್ಲಿ ಆಸ್ಟ್ರೇ ಲಿಯಾದ ಮೆಲ್ಬೋರ್ನ್‍ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟ, 2006ರ ಸಾಂಟೋ ಡೊಮೊನಿಗೋದಲ್ಲಿ ಜರುಗಿದ ಕೆರೆಬಿಯನ್ ಗೇಮ್,ಇಟಲಿ-ಸಿಂಗಾಪುರ ರಾಷ್ಟ್ರೀಯ ಕ್ರೀಡಾಕೂಟ, 2007ರಲ್ಲಿ ಮಲೇಶಿಯಾ, 2008ರಲ್ಲಿ ಹೋಲ್ಯಾಂಡ್ ಮತ್ತು ಜರ್ಮನಿಗಳಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟ, 2008ರಲ್ಲಿ ಮಲೇಶಿಯಾದಲ್ಲಿ ನಡೆದ ಜ್ಯೂನಿಯರ್ ಏಷ್ಯಾಕಪ್, 2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಯೂತ್ ಓಲಂಪಿಕ್, 2010ರಲ್ಲಿ ನಡೆದ ಜರ್ಮನಿಯಲ್ಲಿ ನಡೆದ 4 ನೇಷನ್ ಟೂರ್ನಮೆಂಟ್, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟ, ಚೀನಾ ದಲ್ಲಿ ನಡೆದ ಏಷ್ಯನ್ ಗೇಮ್ಸ್, 2013ರಲ್ಲಿ ಮಲೇಶಿಯಾದಲ್ಲಿ ನಡೆದ ಏಷ್ಯಾ ಕಪ್ ಸೇರಿದಂತೆ ಹಲವಾರು ಹಾಕಿ ಪಂದ್ಯಾವಳಿಗಳಲ್ಲಿ ಯಶಸ್ವಿ ತೀರ್ಪುಗಾರಿಕೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು. ಅನುಪಮ ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ 2005ರಲ್ಲಿ ಯಂಗ್ ಅಂಪೈರ್ ಗೌರವ, 2007ರಲ್ಲಿ ದೆಹಲಿಯ ಸರ್ದಾರ್ ಗ್ಯಾನ್ ಸಿಂಗ್ ಹಾಕಿ ಸಮುದಾಯದಿಂದ ಭಾರತದ ಶ್ರೇಷ್ಟ ಮಹಿಳಾ ಅಂಪೈರ್ ಗೌರವ, 2011ರಲ್ಲಿ ಬೆಂಗಳೂರಿನಲ್ಲಿ ವರ್ಷದ ಕ್ರೀಡಾ ವ್ಯಕ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.

Translate »