ಖಾಸಗಿ ವಾಹನ ಮಾಲೀಕರು, ಚಾಲಕರ ಪ್ರತಿಭಟನೆ
ಮೈಸೂರು

ಖಾಸಗಿ ವಾಹನ ಮಾಲೀಕರು, ಚಾಲಕರ ಪ್ರತಿಭಟನೆ

April 19, 2021

ಮೈಸೂರು, ಏ.18(ಎಂಟಿವೈ)-ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಚಾಲಕರು ಹಾಗೂ ನಿರ್ವಾಹಕರು ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 12 ದಿನದಿಂದ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಿಂದ ವಿವಿಧ ನಗರ ಹಾಗೂ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯು ತ್ತಿದ್ದ ಸುಮಾರು 156ಕ್ಕೂ ಹೆಚ್ಚು ಖಾಸಗಿ ಬಸ್, ಟಿಟಿ ಹಾಗೂ ಮಿನಿ ಬಸ್ಸುಗಳು ಸಾರಿಗೆ ಇಲಾಖೆಯ ಬಸ್ ಸಂಚಾರದಲ್ಲಿ ಹೆಚ್ಚಳವಾದುದನ್ನು ಖಂಡಿಸಿ ಗ್ರಾಮಾಂತರ ಬಸ್ ನಿಲ್ದಾಣ ದಿಂದ ದೊಡ್ಡಕೆರೆ ಮೈದಾನಕ್ಕೆ ತಮ್ಮ ವಾಹನಗಳನ್ನು ಕೊಂಡೊಯ್ದು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರವಾದ ಹಿನ್ನೆಲೆಯಲ್ಲಿ ಇಂದು ಪ್ರಯಾಣಿಕರ ಕೊರತೆ ಇತ್ತು. ಆದರೆ ಸಾಕಷ್ಟು ಖಾಸಗಿ ಬಸ್ಸುಗಳೊಂದಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರವೂ ಹೆಚ್ಚಾಗಿತ್ತು. ಈ ನಡುವೆ ಪ್ರಯಾಣಿಕರು ಖಾಸಗಿ ಬಸ್ಸುಗಳಿಗಿಂತ ಸಾರಿಗೆ ಬಸ್ಸಿನಲ್ಲಿಯೇ ಪ್ರಯಾಣಿಸಲು ಆಸಕ್ತಿ ತೋರುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರ ಅಸಮಾಧಾನಕ್ಕೆ ಕಾರಣವಾಯಿತು. ನಾಲ್ಕು ಖಾಸಗಿ ಬಸ್ಸುಗಳ ಸಂಚಾರದ ನಂತರ ಒಂದು ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಖಾಸಗಿ ವಾಹನಗಳ ನಿರ್ವಾಹಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸಾರಿಗೆ ಅಧಿಕಾರಿಗಳು ಖಾಸಗಿ ವಾಹನಗಳ ಚಾಲಕರು ಮತ್ತು ನಿರ್ವಾಹಕರ ಬೇಡಿಕೆಗೆ ಸ್ಪಂದಿಸಲಿಲ್ಲ. ಇದರಿಂದ ಅಸಮಾ ಧಾನಗೊಂಡ ಖಾಸಗಿ ಬಸ್ ಚಾಲಕ, ನಿರ್ವಾಹಕರು ಸಾರಿಗೆ ಅಧಿಕಾರಿಗಳ ವರ್ತನೆ ಖಂಡಿಸಿ ತಮ್ಮ ವಾಹನಗಳನ್ನು ಗ್ರಾಮಾಂತರ ಬಸ್ ಸಾರಿಗೆ ನಿಲ್ದಾಣದಿಂದ ದೊಡ್ಡಕೆರೆ ಮೈದಾನಕ್ಕೆ ಕೊಂಡೊಯ್ದು, ನಿಲ್ಲಿಸಿ ಪ್ರತಿಭಟಿಸಿದರು.

ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರ ಆರಂಭಿಸಿದ ದಿನದಿಂದ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು ಸಾರಿಗೆ ಇಲಾಖೆ ಖಾಸಗಿ ವಾಹನಗಳ ಸಹಕಾರ ಕೇಳಿತ್ತು. ಇದಕ್ಕೆ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಮಾಲೀಕರು ಹಾಗೂ ಇನ್ನಿತರ ಸಿಬ್ಬಂದಿಗಳು ಸಹಕರಿಸಿದ್ದರು. ಸಾರಿಗೆ ಸಂಸ್ಥೆಯ ಒಂದೇ ಒಂದು ಬಸ್ ಸಂಚಾರಕ್ಕೆ ಆಗಮಿಸದ ಸಂದರ್ಭದಲ್ಲಿ ಖಾಸಗಿ ವಾಹನಗಳೇ ಪ್ರಯಾಣಿಕರಿಗೆ ನೆರವಾಗಿದ್ದವು. ಆದರೆ ಇದೀಗ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ವಾಹನಗಳ ಮಾಲೀಕರು, ಚಾಲಕರು, ನಿರ್ವಾಹಕರನ್ನು ಕಡೆಗಣಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಖಾಸಗಿ ವಾಹನಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿ ನಷ್ಟ ಸಂಭವಿಸುತ್ತಿದೆ. ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಪ್ರಯಾಣಿಕರನ್ನು ಹತ್ತಿಸಲಾಗುತ್ತಿದೆ. ಖಾಸಗಿ ವಾಹನಗಳಿಗೆ ಪ್ರಯಾಣಿಕರು ಹತ್ತಲು ಬಿಡುತ್ತಿಲ್ಲ. ಇದರಿಂದ ಖಾಸಗಿ ವಾಹನಗಳು ಪ್ರಯಾಣಿಕರಿಗೆ ಸೇವೆ ನೀಡಿದರೂ, ಇಂಧನಕ್ಕೆ ವೆಚ್ಚ ಮಾಡುವಷ್ಟು ಪ್ರಯಾಣ ಶುಲ್ಕ ಸಂಗ್ರಹವಾಗುತ್ತಿಲ್ಲ. ಖಾಸಗಿ ವಾಹನಗಳನ್ನು ತಮ್ಮಿಷ್ಟ ಬಂದಂತೆ ಬಳಸಿಕೊಂಡು ಆನಂತರ ಕಾಲ ಕಸದಂತೆ ತಿರಸ್ಕರಿಸುತ್ತಿದ್ದಾರೆ ಖಾಸಗಿ ವಾಹನಗಳ ಚಾಲಕರು, ನಿರ್ವಾಹಕರು ಆರೋಪಿಸಿದರು.

Translate »