ಅಭಿವೃದ್ಧಿ ಕಾಮಗಾರಿ ನಿಲ್ಲಿಸಿ, ಜನರ ಆರೋಗ್ಯಕ್ಕೆ ಒತ್ತು ನೀಡಿ
News

ಅಭಿವೃದ್ಧಿ ಕಾಮಗಾರಿ ನಿಲ್ಲಿಸಿ, ಜನರ ಆರೋಗ್ಯಕ್ಕೆ ಒತ್ತು ನೀಡಿ

April 19, 2021

ಬೆಂಗಳೂರು, ಏ.18-ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಜನರ ಆರೋಗ್ಯಕ್ಕೆ ಒತ್ತು ನೀಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಕ್ಷಣವೇ ಕೋವಿಡ್‍ಗೆ 300 ಕೋಟಿ ರೂ. ಮೀಸಲಿಡಿ ಎಂದು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ಇದ್ದರೆ ಜೀವನ, ಜನರಿದ್ದರೇನೆ ರಾಜ್ಯ, ಆರ್ಥಿಕತೆ, ಸರ್ಕಾರ ಇವೆಲ್ಲಾ ಉಳಿಯುತ್ತದೆ. ಅದರಿಂದಾಗಿ ಮೊದಲು ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
2020ರ ಮಾರ್ಚ್‍ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಸರ್ಕಾರ ಹೇಳಿದಂತೆಲ್ಲಾ ಜನರು ಮಾಡುತ್ತಿದ್ದಾರೆ. ಲಸಿಕೆಯನ್ನೂ ಹಾಕಿಸಿ ಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕೊರೊನಾ ನಿಯಂತ್ರಣ ವಾಗುತ್ತಿಲ್ಲ. ಜನರು ಬದುಕುತ್ತೇವೋ ಇಲ್ಲವೋ ಎಂಬ ಭಯದಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.

ಸರ್ಕಾರವು ಕೊರೊನಾ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಅತೀ ಹೆಚ್ಚು ಆಸ್ಪತ್ರೆ, ವೈದ್ಯಕೀಯ ಸಿಬ್ಬಂದಿ ಇದ್ದರೂ, ಅವರನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. 10 ಸಾವಿರ ಬೆಡ್‍ಗಳಿರುವ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿದ್ದರು. ಹೋಟೆಲ್‍ಗಳನ್ನು ವಶಕ್ಕೆ ಪಡೆದಿದ್ದರು. ಆದರೂ ಸೋಂಕಿತ ರಿಗೆ ಬೆಡ್ ಸಿಗುತ್ತಿಲ್ಲ. ರೆಮ್ಡೆಸಿವರ್ ಲಸಿಕೆ ಸಿಗುತ್ತಿಲ್ಲ ಎಂದ ಅವರು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಆರೋಗ್ಯ ಸಚಿವರು ಇದನ್ನೆಲ್ಲಾ ಗಮನಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಗಳು ಸರ್ವಪಕ್ಷ ಸಭೆ ಕರೆದಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿದ್ದಾರೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಹಾರೈಸುತ್ತಿದ್ದೇನೆ ಎಂದ ಡಿಕೆಶಿ, ಕೊರೊನಾ ತಡೆಯುವ ಕ್ರಮಗಳ ಬಗ್ಗೆ ಕೇಳಿದರೆ ಅಧಿಕಾರಿಗಳು ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಒಬ್ಬರೇ ಇಂತಹ ಸಂದರ್ಭದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಸಚಿವರುಗಳು ಕೂಡ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಜನರ ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಲಾಕ್‍ಡೌನ್‍ಗೆ ವಿರೋಧ: ಲಾಕ್‍ಡೌನ್‍ನಿಂದ ಏನು ಪ್ರಯೋಜನವಿದೆ? ರಾತ್ರಿ ಲಾಕ್‍ಡೌನ್ ಮಾಡಿದರೆ ಏನಾದರೂ ಉಪಯೋಗವಾಗುತ್ತದೆಯೇ? ಹಾಗಾದರೆ ಹಗಲಿನಲ್ಲಿ ಕೊರೊನಾ ಬರುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಲಾಕ್‍ಡೌನ್‍ಗೆ ನಮ್ಮ ವಿರೋಧವಿದೆ. ಜನರ ಜೀವದ ಜೊತೆ ಅವರ ಬದುಕು ಕೂಡ ಮುಖ್ಯವಾಗಿದೆ. ಹೀಗಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಜನರನ್ನು ಬದುಕಿಸಬೇಕು ಎಂದು ಅವರು ಒತ್ತಾಯಿಸಿದರು.

Translate »