ಇಂದಿನಿಂದ ಬೆಂಗಳೂರಲ್ಲಿ ಟಫ್ ರೂಲ್ಸ್?
News

ಇಂದಿನಿಂದ ಬೆಂಗಳೂರಲ್ಲಿ ಟಫ್ ರೂಲ್ಸ್?

April 19, 2021

ಬೆಂಗಳೂರು, ಏ.18-ರಾಜ್ಯದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಭಾನುವಾರ ಒಂದೇ ದಿನ 19,067 ಮಂದಿಗೆ ಸೋಂಕು ತಗುಲಿದ್ದು, 81 ಮಂದಿ ಮೃತಪಟ್ಟಿ ದ್ದಾರೆ. ಬೆಂಗಳೂರಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದು, 12,793 ಮಂದಿಗೆ ಇಂದು ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಬೆಂಗ ಳೂರಿನಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿ ರುವ ಕೊರೊನಾಗೆ ಕಡಿವಾಣ ಹಾಕಲು ನಾಳೆಯಿಂದ (ಏ.19) ಕಠಿಣ ನಿಯಮ ಗಳನ್ನು ಜಾರಿಗೆ ತರಲು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪೂರ್ವಭಾವಿ ಸಭೆ ನಡೆಸಿದರು.

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಸಮುದಾಯಕ್ಕೆ ಹರಡಿದೆ. ಪ್ರತೀ ದಿನ ಶೇ.10ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗುತ್ತಿದ್ದು, ಬೆಂಗಳೂರಿಗೆ ವಿಶೇಷವಾಗಿ ಕಠಿಣ ನಿಯಮ ಜಾರಿ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳ ಜೊತೆ ಚರ್ಚೆ ನಡೆಸಿದ್ದು, ನಾಳೆ ಬೆಂಗಳೂರಿನ ಎಲ್ಲಾ ಶಾಸಕರ ಸಭೆ ನಡೆಯುತ್ತದೆ. ಅಲ್ಲಿ ಬರುವ ಸಲಹೆಗಳನ್ನಾಧರಿಸಿ ಬೆಂಗ ಳೂರಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ. ಈಗಾಗಲೇ ಕೇಂದ್ರ ಸರ್ಕಾರವೂ ಕೂಡ ಅದನ್ನೇ ಹೇಳಿದೆ. ತಾಂತ್ರಿಕ ಸಲಹಾ ಸಮಿತಿಯೂ ಕೂಡ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಸಲಹೆ ನೀಡಿದೆ ಎಂದರು.

ಈ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚೆ ನಡೆದಿದೆ. ವಿಪತ್ತು ನಿರ್ವಹಣಾ ಸಮಿತಿ ಯಿಂದ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲು ಕಂದಾಯ ಇಲಾಖೆ ಒಪ್ಪಿದೆ. ಬೆಂಗಳೂರಿನಲ್ಲಿ ಕೊರೊನಾಗೆ ಸಂಬಂಧ ಪಟ್ಟಂತೆ ನಾನಾ ರೀತಿಯ ಸಮಸ್ಯೆಗಳಿವೆ. ಎರಡನೇ ಅಲೆ ತೀವ್ರವಾಗಿದೆ. ನಿತ್ಯ ದಾಖ ಲಾಗುತ್ತಿರುವ ಪ್ರಕರಣಗಳ ಸಂಖ್ಯೆ 5 ಅಂಕಿ ದಾಟುತ್ತಿವೆ ಎಂದು ಅವರು ಹೇಳಿದರು.

ಆಕ್ಸಿಜನ್ ಕೊರತೆ ಇಲ್ಲ: ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದಲ್ಲಿ 800 ಮೆಟ್ರಿಕ್ ಟನ್ ವೈದ್ಯಕೀಯ ಆಕ್ಸಿಜನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ 200ರಿಂದ 300 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಕೇಂದ್ರ ದಿಂದ 300 ಮೆಟ್ರಿಕ್ ಟನ್ ವಿತರಣೆ ಯಾಗಿದೆ. ಇನ್ನೂ ಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ ಎಂದರು. ಅದೇ ವೇಳೆ ಬೆಂಗಳೂ ರಿನ ಕೆಲವು ಖಾಸಗಿ ಆಸ್ಪತ್ರೆಯವರು ಹಣ ಪಾವತಿಸದೇ ಇರುವುದರಿಂದ ಅಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರಬಹುದು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದರು.

ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ನ್ಯೂನ್ಯತೆಗಳು ಏನಿವೆ ಎಂಬುದರ ಬಗ್ಗೆ ಮಾತನಾಡಿದ್ದೇವೆ. ಕೊರೊನಾ ಸೋಂಕಿತರಿಗೆ ಶೇ.50ರಷ್ಟು ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಬೆಡ್ ನೀಡದ ಆಸ್ಪತ್ರೆಗಳನ್ನು ವಶಕ್ಕೆ ಪಡೆದುಕೊಂಡು ಸರ್ಕಾರವೇ ನಿರ್ವಹಿಸಲಿದೆ ಎಂದು ಡಾ. ಸುಧಾಕರ್ ಹೇಳಿದರು. ಬೆಂಗಳೂರಿಗೆ ಪ್ರತ್ಯೇಕವಾಗಿ ಕಠಿಣ ನಿಯಮಗಳನ್ನು ಜಾರಿ ಮಾಡಲು ವಿಶೇಷ ಮಾರ್ಗಸೂಚಿಯನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೊರಡಿಸುತ್ತೇವೆ ಎಂದು ತಿಳಿಸಿದರು.

Translate »