ಭಾರತದ ಮೇಲೆ ದಾಳಿಗೆ ಸ್ಕೆಚ್ ಪಾಕ್ ಕುತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ!
ಮೈಸೂರು

ಭಾರತದ ಮೇಲೆ ದಾಳಿಗೆ ಸ್ಕೆಚ್ ಪಾಕ್ ಕುತಂತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ!

August 11, 2019

ನವದೆಹಲಿ, ಆ.10-ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಬಗ್ಗೆ ಎಚ್ಚರಿಸಿತ್ತು. ಈ ಬೆನ್ನಲ್ಲೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಹಪಹಪಿಸುತ್ತಿ ರುವ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ 12ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳನ್ನು ಸಕ್ರಿಯಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಬಳಿ ಇರುವ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಪಾಕಿಸ್ತಾನ ಉಗ್ರರ ನೆಲೆಗಳನ್ನು ಸಕ್ರಿಯಗೊಳಿಸಿದೆ. ಕಳೆದ ವಾರ ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಉಗ್ರರ ಚಲನವಲನಗಳು ದಾಖಲಾಗಿವೆ. ಆರ್ಟಿಕಲ್ 370 ರದ್ದತಿ ಬೆನ್ನಲ್ಲೇ ಪಾಕಿಸ್ತಾನ ಸಂಸತ್‍ನಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಭಾರತದಲ್ಲಿ ಪುಲ್ವಾಮ ಮಾದರಿಯ ಮತ್ತೊಂದು ದಾಳಿ ನಡೆದರೆ ಅದಕ್ಕೆ ಪಾಕಿಸ್ತಾನ ಹೊಣೆಯಾಗುವುದಿಲ್ಲ ಎಂದು ಹೇಳಿದ್ದರು.

ಇಮ್ರಾನ್ ಖಾನ್ ಅವರ ಈ ಹೇಳಿಕೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಲಷ್ಕರ್-ಎ-ತೊಯ್ಬಾ ರೀತಿಯ ಉಗ್ರ ಸಂಘಟನೆಗಳಿಗೆ ಉಗ್ರ ಕೃತ್ಯ ನಡೆಸಲು ಮತ್ತಷ್ಟು ಉತ್ತೇಜನ ನೀಡಿದಂತಾ ಗಿದ್ದು, ಉಗ್ರ ಸಂಘಟನೆಗಳು ಪಿಒಕೆ ಬಳಿಯ ಲಾಂಚ್ ಪ್ಯಾಡ್‍ಗಳನ್ನು ಸಕ್ರಿಯಗೊಳಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ. ತಾಲಿಬಾನ್, ಜೈಶ್, ಲಷ್ಕರ್ ಉಗ್ರ ಸಂಘಟನೆಗಳ ಒಟ್ಟು 150 ಜನ ಇರುವ 12 ಕ್ಕೂ ಹೆಚ್ಚು ತಂಡ ಭಾರತದ ಮೇಲೆ ದಾಳಿಗೆ ಸಜ್ಜಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಉಗ್ರರು ದಾಳಿ ನಡೆಸುವ ಸಾಧ್ಯತೆ ಹೆಚ್ಚಿರುವುದರಿಂದ ಎನ್‍ಎಸ್‍ಎ ಅಜಿತ್ ದೋವಲ್ ಸ್ವತಃ ಕಾಶ್ಮೀರಕ್ಕೆ ತೆರಳಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.

ಶಾಂತಿ ಕದಡಲು ಯತ್ನಿಸಿದರೆ ಗುಂಡೇಟು ಗ್ಯಾರಂಟಿ!

ನವದೆಹಲಿ: ಆರ್ಟಿಕಲ್ 370ರದ್ದು ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುವವರನ್ನು ಹೊಡೆದುರುಳಿಸಲಾಗುವುದು ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಸರ್ಕಾರ ಭಾರತದ ಮೇಲೆ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಣಿವೆ ಕಲ್ಲು ತೂರಾಟಗಾರರಿಗೆ ಈಗಲೇ ಎಚ್ಚರಿಕೆ ನೀಡುತ್ತಿದೆ. ಭಾರತೀಯ ಸೇನೆಯ ಚಿನಾರ್ ಕಾಪ್ರ್ಸ್ ಕಮಾಂಡಾರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್, ಪಾಕಿಸ್ತಾನ ಹಾಗೂ ಅಲ್ಲಿನ ಸೇನೆ ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುತ್ತಲೇ ಇವೆ. ಇದು ಈಗಲೂ ಮುಂದುವರೆಯುತ್ತದೆ ಎನಿಸುತ್ತಿದೆ ಎಂದರು.

Translate »