ಕೆಆರ್ ಕ್ಷೇತ್ರದಲ್ಲಿ ಮಳೆ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಿ
ಮೈಸೂರು

ಕೆಆರ್ ಕ್ಷೇತ್ರದಲ್ಲಿ ಮಳೆ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಿ

August 11, 2019

ಮೈಸೂರು: ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಆಗಿರುವ ಸಮಸ್ಯೆ ಗಳನ್ನು ಬಗೆಹರಿಸಲು ತ್ವರಿತ ಕ್ರಮ ಕೈಗೊಳ್ಳು ವಂತೆ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಾರ ಕಾಲ ಎಡಬಿಡದೆ ಸುರಿದ ಮಳೆಯ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲೆ ದೋರಿರುವ ಸಮಸ್ಯೆಗಳ ಸಂಬಂಧ ಕ್ಷೇತ್ರದ ವಾರ್ಡ್‍ಗಳ ನಗರಪಾಲಿಕೆ ಸದಸ್ಯ ರೊಂದಿಗೆ ಶನಿವಾರ ತುರ್ತು ಸಭೆ ನಡೆಸಿ ಅವರು ಸಮಾ ಲೋಚಿಸಿದರು.

ಮೈಸೂರಿನ ಕಾಡಾ ಕಟ್ಟಡ ಸಂಕೀರ್ಣ ದಲ್ಲಿರುವ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಎಸ್.ಎ.ರಾಮದಾಸ್, ಪಾಲಿಕೆ ಸದಸ್ಯರಿಂದ ಅವರ ವಾರ್ಡ್‍ಗಳಲ್ಲಿ ಉಂಟಾಗಿರುವ ಮಳೆ ಹಾನಿ ಹಾಗೂ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ಬಳಿಕ ಪಾಲಿಕೆ ಆಯುಕ್ತರಿಗೆ ಕರೆ ಮಾಡಿದ ಅವರು, ಎಲ್ಲಾ ಮಳೆ ನೀರು ಚರಂಡಿ ಹಾಗೂ ಒಳ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಬೇಕು. ರಸ್ತೆಯಲ್ಲಿ ನಿಂತಿರುವ ನೀರು ತೆರವುಗೊಳಿಸಬೇಕು. ಅಗತ್ಯ ಸಿಬ್ಬಂದಿ ಹಾಗೂ ಸಾಧನ-ಸಲಕರಣೆ ಗಳೊಂದಿಗೆ ಇಡೀ ಕ್ಷೇತ್ರದಲ್ಲಿ ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನಿರ್ದೇಶನ ನೀಡಿದರು.

ಸಂತ್ರಸ್ತರಿಗೆ ನೆರವು: ಇದೇ ಸಂದರ್ಭ ದಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ನಗರ ಪಾಲಿಕೆ ಸದಸ್ಯರೆಲ್ಲರೂ ತಮ್ಮ ಎರಡು ತಿಂಗಳ ಗೌರವಧನವನ್ನು ಉತ್ತರ ಕರ್ನಾ ಟಕದ ನೆರೆ ಸಂತ್ರಸ್ತರ ನಿಧಿಗೆ ನೀಡಲು ತೀರ್ಮಾನ ಕೈಗೊಂಡರು. ಜೊತೆಗೆ ಮಳೆ ನಿಂತ ನಂತರದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಶ್ರಮದಾನ ಮಾಡಲು ನಿರ್ಣಯಿಸಿದರು. ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ. ಮಂಜುನಾಥ್, ಪಾಲಿಕೆ ಸದಸ್ಯ ಶಿವ ಕುಮಾರ್ ಮತ್ತಿತರರು ಹಾಜರಿದ್ದರು.

 

Translate »