ಹುಣಸೂರು, ಮೇ 8(ಕೆಕೆ)-ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಖಾತರಿಯೊಂದೇ ಆರ್ಥಿಕ ಸಂಕಷ್ಟ ದೂರ ಮಾಡುವ ಏಕೈಕ ಮಾರ್ಗವಾಗಿದ್ದು, ಎಲ್ಲಾ ಗ್ರಾಪಂ ಪಿಡಿಓಗಳು ವಾರಿಯರ್ಸ್ ರೀತಿ ಉದ್ಯೋಗ ಖಾತರಿ ಯಶಸ್ವಿಗೆ ಶ್ರಮಿಸಬೇಕೆಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂ ಪಿಡಿಓಗಳ ಸಭೆ ಯಲ್ಲಿ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬರುವುದಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ರೈತರ ಕೃಷಿ ಅಭಿವೃದ್ಧಿಗಾಗಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿ, ರೈತರಿಗೆ ಸೂಕ್ತ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗ ಖಾತರಿ ಜಿಲ್ಲೆಗೆ ಪ್ರಥಮ: ಉದ್ಯೋಗ ಖಾತರಿ ಯೋಜನೆಯಲ್ಲಿ ಹುಣಸೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರು ವುದಕ್ಕೆ ಅಭಿನಂದಿಸಿ, ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ 37,397 ಮಾನವ ದಿನಗಳ ಕಾಮಗಾರಿ ನಡೆದಿದೆ. ಬರುವ ಸೆಪ್ಟೆಂಬರ್ ನೊಳಗೆ ಎಲ್ಲಾ ದಾಖಲೆಗಳನ್ನು ಮೀರಿ ರಾಜ್ಯಕ್ಕೆ ಪ್ರಥಮ ಬರುವಂತೆ ಕಾಮಗಾರಿ ನಡೆಸಿ, ತಾಲೂಕಿನ ಎಲ್ಲಾ ಕುಟುಂಬ ಗಳಿಗೂ ಉದ್ಯೋಗ ಕಲ್ಪಿಸುವ ಹಾಗೂ ಮಳೆ ನೀರು ಸಂಗ್ರಹಣೆ, ಆಂತರ್ಜಲ ಅಭಿವೃದ್ಧಿಗೂ ಆದ್ಯತೆ ನೀಡುವ ಮೂಲಕ ಬದ್ಧತೆ ತೋರಬೇಕು ಎಂದರು.
ನರೇಗಾ ಸಾಧನೆಗೆ ಬಹುಮಾನ: ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆಯುವ ಪಂಚಾಯ್ತಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಪ್ರಥಮ ಬಹು ಮಾನ, 7.5 ಲಕ್ಷ ರೂ. ದ್ವಿತೀಯ ಬಹುಮಾನ, 5 ಲಕ್ಷ ರೂ. ತೃತೀಯ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.
ತಾಪಂ ಇಓ ಗಿರೀಶ್ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಹಾಗೂ ನಾನಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಸಹಾಯಕ ನಿರ್ದೇಶಕ ಲೋಕೇಶ್ ಹಾಗೂ ಎಲ್ಲಾ 41 ಗ್ರಾಪಂಗಳ ಪಿಡಿಓಗಳು ಹಾಜರಿದ್ದರು.