ನಂಜನಗೂಡು, ಮೇ8- ತಾಲೂಕಿನ ಸಿಂಧುವಳ್ಳಿಪುರ ಸಮೀಪ 465 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಕಾರದಿಂದ ಈ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಉದ್ದೇಶಿತ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಬಿ.ಹರ್ಷ ವರ್ಧನ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಸಿಂಧುವಳ್ಳಿಪುರದಲ್ಲಿ ಖಾಸಗೀ ಸಂಸ್ಥೆಯೊಂದಕ್ಕೆ ಕೈಗಾರಿಕೆ ಆರಂಭಿಸುವ ಸಲುವಾಗಿ ಕೆಲ ವರ್ಷಗಳ ಹಿಂದೆ ಭೂಮಿ ಹಂಚಿಕೆಗೆ ಅಧಿಸೂಚನೆ ಹೊರಡಿಸ ಲಾಗಿತ್ತಾದರೂ ಅನಂತರ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಇದೀಗ ಉದ್ದೇಶಿತ ಸ್ಥಳದಲ್ಲಿ ಕೈಗಾರಿಕಾ ವಸಾಹತು ಪ್ರಾರಂಭಿಸಿ ಕಾರ್ಖಾನೆ ಗಳ ಆರಂಭಕ್ಕೆ ಅನುವು ಮಾಡಿಕೊಟ್ಟಲ್ಲಿ ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವುದು. ಅಲ್ಲದೆ ನಂಜನಗೂಡಿನ ಆರ್ಥಿಕತೆಯೂ ಬಲಗೊಳ್ಳುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿ ಕೊಡಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಇನ್ನು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯೆಂಟ್ ಕಾರ್ಖಾನೆ ಆರಂಭದಿಂದಲೂ ಸ್ಥಳೀಯರು ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಲ್ಲಹಳ್ಳಿ ಗ್ರಾಮದಲ್ಲಿ ಈ ಹಿಂದೆ ಕಾರ್ಖಾನೆಯಿಂದ ಹೊರ ಬಿಡಲಾದ ಕಲುಷಿತ ನೀರು ಸೇವಿಸಿ ಜಾನುವಾರುಗಳು ಸಾವಿ ಗೀಡಾಗಿವೆ. ಪರಿಸರ ಮಾಲಿನ್ಯದಿಂದಾಗಿ ಕಲ್ಲಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಬರುತ್ತಿದೆ. ರೈತರ ಕೃಷಿ ಚಟುವಟಿಕೆಗೂ ತೊಡಕಾಗಿದೆ. ಕಲ್ಲಹಳ್ಳಿ ಗ್ರಾಮದಲ್ಲಿ ಜನರÀ ಅನಾರೋಗ್ಯಕ್ಕೆ ತುತ್ತಾಗಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್‍ನಂತಹ ಮಾರಕ ರೋಗಕ್ಕೆ ತುತ್ತಾಗುತ್ತಿರುವುದು ಆತಂಕದ ಸಂಗತಿ. ಇದರಿಂದಾಗಿ ಪರಿಸರ ಮಾಲಿನ್ಯ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಬೇಕು. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮಾದರಿಯ ಅವಘಡ ನಂಜನ ಗೂಡಿನಲ್ಲೂ ಮರುಕಳಿಸುವ ಆತಂಕವಿದೆ ಎಂದು ಕೈಗಾರಿಕಾ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದೂ ತಿಳಿಸಿದರು.