ದೊಡ್ಡ ಜಾತ್ರೆ ಅನುಮತಿಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು

ದೊಡ್ಡ ಜಾತ್ರೆ ಅನುಮತಿಗೆ ಒತ್ತಾಯಿಸಿ ಪ್ರತಿಭಟನೆ

March 18, 2021

ನಂಜನಗೂಡು, ಮಾ.17-ನಗರದ ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವ ಪೂರ್ವನಿಗದಿಯಂತೆ ಮಾ.26ರಂದು ನಡೆಸಲು ಜಿಲ್ಲಾಡಳಿತ ಅನುಮತಿಸುವಂತೆ ಒತ್ತಾಯಿಸಿ ಬುಧವಾರ ನಗರದ ಶ್ರೀಕಂಠೇಶ್ವರ ಭಕ್ತ ಮಂಡಳಿ ಸದಸ್ಯರು ದೇವಾಲಯ ಆವರಣದಲ್ಲಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಪುರಸಭೆ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಮಲೆಮಹದೇಶ್ವರಬೆಟ್ಟ, ಶಿರಸಿ ಮಾರಿಕಾಂಬೆ ದೇವಾಲಯಗಳಲ್ಲಿ ಸಂಪ್ರದಾಯದಂತೆ ಜಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ನಂಜನಗೂಡಿನಲ್ಲಿ ಮಾತ್ರ ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರೆ ಸತತ ಎರಡು ವರ್ಷದಿಂದ ರದ್ದಾಗುತ್ತಿದೆ. ಸರ್ಕಾರದ ಕೋವಿಡ್ ಮಾರ್ಗ ಸೂಚಿಯಂತೆಯೇ ನಿಯಮ ಪಾಲಿಸಿ ಜಾತ್ರೆ ನಡೆಸುತ್ತೇವೆ. ಹಾಗಾಗಿ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಕೃಷ್ಣ ಜೋಯಿಸ್ ಮಾತನಾಡಿ, ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಹಾಗೂ ಜಾತ್ರೆಗಳೊಂದಿಗೆ ತಾಲೂಕಿನ ಜನರಿಗೆ ಅವಿನಾಭಾವ ಸಂಬಂಧವಿದೆ. ಶ್ರೀಕಂಠೇಶ್ವರನನ್ನು ಭಕ್ತರು ಭವರೋಗ ವೈದ್ಯನೆಂದು ಕರೆಯುತ್ತಾರೆ. ಜಾತ್ರೆ ನಡೆದರೆ ಸಕಲ ರೋಗ ನಿವಾರಣೆಯಾಗಿ, ಮಂಗಳವುಂಟಾಗುತ್ತದೆ ಎಂಬುದು ಭಕ್ತರ ನಂಬಿಕೆ. ಮಲೆಮಹದೇಶ್ವರಬೆಟ್ಟದಲ್ಲಿ ನಡೆದ ಜಾತ್ರೆಯಂತೆ ಹೊರ ಊರಿನ ಭಕ್ತರು ಜಾತ್ರೆಗೆ ಬರದಂತೆ ನಾಕಬಂಧಿ ವಿಧಿಸಿ, ಚಿಕ್ಕ ತೇರಿನ ಬದಲು ಪ್ರತೀತಿಯಂತೆ ಗೌತಮ ರಥದಲ್ಲಿ ಸ್ವಾಮಿ ಯವರನ್ನು ಪ್ರತಿಷ್ಠಾಪಿಸಿ ಜಾತ್ರೆ ನಡೆಸಲು ಅನುಮತಿಸಬೇಕು ಎಂದು ಒತ್ತಾಯಿಸಿದರು. ನಂತರ ದೇವಾಲಯದ ಇಓ ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಂಡಳಿ ಸದಸ್ಯರಾದ ಚಂದ್ರಶೇಖರ್, ಸುನೀಲ್, ಉಮೇಶ್, ರಂಗಸ್ವಾಮಿ, ಮಹದೇವು, ರವಿ, ಬಸವರಾಜು, ಜಯಕುಮಾರ್, ಶ್ರೀಕಾಂತ್ ಜೋಯಿಸ್, ಸಂಜಯ್‍ಶರ್ಮಾ, ನಗರಸಭೆ ಸದಸ್ಯ ಕಪಿಲೇಶ್, ದೀಪಕ್ ಪ್ರಸಾದ್, ಶ್ರೀಕಾಂತ್, ನಿತಿನ್ ವರ್ಧನ್ ಇದ್ದರು.

Translate »