ಸಿದ್ಧಾಂತಗಳಿಂದ ಮುಕ್ತವಾದರೆ ಮಾತ್ರ ಸೃಜನಾತ್ಮಕ ಕಲಾತ್ಮಕ ಸಾಹಿತ್ಯ ಸಾಧ್ಯ
ಮೈಸೂರು

ಸಿದ್ಧಾಂತಗಳಿಂದ ಮುಕ್ತವಾದರೆ ಮಾತ್ರ ಸೃಜನಾತ್ಮಕ ಕಲಾತ್ಮಕ ಸಾಹಿತ್ಯ ಸಾಧ್ಯ

November 21, 2018
  • ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಡಾ. ಎಸ್.ಎಲ್.ಭೈರಪ್ಪ ಅಭಿಮತ
  • ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿಯವರ ಸಮಸ್ತ ನಾಟಕ ಕೃತಿ ಬಿಡುಗಡೆ

ಮೈಸೂರು: ಸಾಹಿತ್ಯ ಹಾಗೂ ನಾಟಕ ಸೇರಿದಂತೆ ಯಾವುದೇ ಕಲೆಯಾದರೂ ಸಿದ್ಧಾಂತಗಳಿಂದ ಮುಕ್ತ ವಾದರೆ ಮಾತ್ರ ಅವುಗಳಲ್ಲಿ ಕಲಾತ್ಮಕತೆ ಹಾಗೂ ಸೃಜನಾತ್ಮಕತೆ ಮೂಡಿಬರಲು ಸಾಧ್ಯ ಎಂದು ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.

ಮೈಸೂರಿನ ಶಾರದಾವಿಲಾಸ ಶತಮಾ ನೋತ್ಸವ ಭವನದಲ್ಲಿ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕದಂಬ ರಂಗ ವೇದಿಕೆ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಸಾಹಿತಿ ಹೆಚ್.ಎಸ್.ವೆಂಕಟೇಶ ಮೂರ್ತಿ ಅವರ `ಸಮಸ್ತ ನಾಟಕ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಅಂತರಂಗದ ಭಾವಕ್ಕೆ ಮೌಲ್ಯ, ನೈತಿಕತೆಯಿಂದ ಕೂಡಿದ ರಸಾನುಭವ ವನ್ನು ತಂದು ಕೊಡುವುದು ಕಲೆ. ಅಲ್ಲಿ ಅನ್ವೇಷಣೆ ಹಾಗೂ ಸೃಜನಾತ್ಮಕತೆಯೂ ಇರಬೇಕು. ಆದರೆ ಇಂದು ಇವುಗಳನ್ನು ಬಿಟ್ಟು ಸಿದ್ಧಾಂತಗಳ ನೆಲೆಯಲ್ಲಿ ಕಲೆಯನ್ನು ನೋಡುವಂತಹ ಪ್ರವೃತ್ತಿ ಆರಂಭಗೊಂಡಿದೆ. ಆದರೆ ಈ ಸಿದ್ಧಾಂತಗಳು ಕಾಲದಿಂದ ಕಾಲಕ್ಕೆ ಅಪ್ರಸ್ತುತವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವುದೇ ಕಲೆಯಾದರೂ ಸಿದ್ಧಾಂತ ಗಳಿಗೆ ಅಂಟಿಕೊಳ್ಳಬಾರದು ಎಂದು ತಿಳಿಸಿದರು.

ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ನಾಟಕದ ಮೂಲಕ ಸಮಾಜವನ್ನು ಮುಖಾ ಮುಖಿ ಆಗಿಸುತ್ತೇವೆ ಎಂಬ ಪ್ರವೃತ್ತಿ ಆರಂಭ ಗೊಂಡಿದೆ. ಅನ್ಯಾಯಗಳನ್ನು ತೊಡೆದು ಕ್ರಾಂತಿಕಾರಕ ಬದಲಾವಣೆಯಿಂದ ಸಮಾಜ ಉದ್ಧಾರ ಮಾಡುತ್ತೇವೆ ಎಂಬುದು ವ್ಯಾಪಿಸು ತ್ತಿದೆ. ಹಾಗಾದರೆ ನಾಟಕದ ಮುಖ್ಯ ಉದ್ದೇಶ ಅದೆಯೇ? ಎಂದು ಪ್ರಶ್ನಿಸಿದ ಅವರು, ಕೇವಲ ನಾಟಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಾಹಿತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಇದೇ ದಾರಿಯಲ್ಲಿ ಸಾಗುತ್ತಿವೆ. ಒಂದು ವೇಳೆ ಇದೇ ದೃಷ್ಟಿಕೋನದಲ್ಲಿ ಸಾಹಿತ್ಯ ಸೃಷ್ಟಿಗೆ ಮುಂದಾದರೂಅಂತಿಮವಾಗಿ ಬರವಣಿಗೆಯಲ್ಲಿ ಸೃಜನಾತ್ಮಕತೆ ಮರೆಯಾಗುತ್ತದೆ ಎಂದು ಎಚ್ಚರಿಸಿದರು. ಕೆಲವರು ನಾಟಕಗಳನ್ನು ನೋಡಲು ನೀವೇಕೆ ಬರುವುದಿಲ್ಲ ಎಂದು ಕೇಳುತ್ತಾರೆ. ಅದೇ ಸಂಭಾಷಣೆ, ಅದೇ ಅನ್ಯಾಯ-ಹಿಂಸೆ ನಾಟಕದ ವಸ್ತುವಾಗಿರುತ್ತವೆ. ಅವುಗಳನ್ನು ದಿನ ಬೆಳಗಾದರೆ ಸುದ್ದಿ ಪತ್ರಿಕೆಯಲ್ಲೇ ನೋಡಿರುವಾಗ ಮತ್ತೆ ಅದನ್ನೇ ನೋಡಲು ಹೋಗಬೇಕಾ? ಎಂದು ಪ್ರಶ್ನಿಸಿದ ಅವರು, ಟಿ.ಪಿ.ಕೈಲಾಸಂ ಅವರು ವರದಕ್ಷಿಣೆ ಪೀಡುಗಿನ ವಿರುದ್ಧ ಬರೆದ ನಾಟಕವನ್ನು ಎಷ್ಟು ರಂಗ ತಂಡಗಳು ಪ್ರದರ್ಶನ ಮಾಡುತ್ತಿವೆ. ಈ ನಾಟಕದಿಂದ ವರದಕ್ಷಿಣೆ ಪಿಡುಗು ಸಮಾಜದಿಂದ ನಿರ್ಮೂಲನೆ ಆಗಿದೆಯೇ? ಎಂದು ಪ್ರಶ್ನಿಸಿದರು.

ಕಲಾವಿದರು ಮೊದಲು ಭ್ರಮೆ ಬಿಡಬೇಕು: ಕಲಾವಿದರು ಹಾಗೂ ಸಾಹಿತಿಗಳಲ್ಲಿ ಸಮಾಜ ಪರಿವರ್ತನೆ ಮಾಡಿಬಿಡುತ್ತೇವೆ ಎಂಬ ಭ್ರಮೆ ಇದೆ. ಇಂತಹ ಭ್ರಮೆಯಿಂದ ಮೊದಲು ಹೊರಬರಬೇಕು. ಕಲೆಯಿಂದ ಸಮಾಜ ಸುಧಾರಣೆ, ತಂತ್ರಜ್ಞಾನ ಬೆಳವಣಿಗೆ ಹಾಗೂ ಸಕಾಲಕ್ಕೆ ಮಳೆ-ಬೆಳೆ ತೆಗೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಸಮಾಜದಲ್ಲಿ ಏನೋ ಕ್ರಾಂತಿ ಮಾಡಿಬಿಡುತ್ತೇವೆ ಎಂಬ ಭ್ರಮೆಯನ್ನು ಕಲಾವಿದರು ಮೊದಲು ಬಿಡಬೇಕು ಎಂದು ಅಭಿಪ್ರಾಯಪಟ್ಟರು. ಶಾಸ್ತ್ರೀಯ ಸಂಗೀತದಲ್ಲಿ ನಿಜವಾದ ಕಲೆಯ ಹದವಿದೆ. ಅದರಲ್ಲೂ ಹಿಂದೂಸ್ತಾನಿ ಸಂಗೀತದಲ್ಲಿ ನೈಜ ಕಲೆಯ ಹದವಿದೆ. ಅಲ್ಲಿ ಯಾವುದೇ ಕಾವ್ಯವಿಲ್ಲ, ಸಂಗೀತವಿಲ್ಲ. ಶುದ್ಧ ಸಂಗೀತದೊಳಗೆ ಪದ್ಯ ಇರಬಾರದು. ಬದಲಾಗಿ ನಿಜವಾದ ಭಾವವನ್ನು ತೀವ್ರವಾಗಿ ಅನುಭವಕ್ಕೆ ತಂದುಕೊಡುವ ಅಂಶವಿರಬೇಕು. ಶುದ್ಧ ಸಂಗೀತದಲ್ಲಿ ಅರ್ಥ-ಸ್ವಾರ್ಥ ಎರಡೂ ಇರುವುದಿಲ್ಲ ಎಂದು ವಿಶ್ಲೇಷಿಸಿದರು.

ಷೇಕ್ಸ್‍ಪಿಯರ್ ಶ್ರೇಷ್ಠ ನಾಟಕಕಾರ: ನಾನು ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ಪ್ರಾಧ್ಯಾಪಕ ಕೃಷ್ಣ ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 14 ನಾಟಕಗಳನ್ನು ಓದಿದ್ದೆ. ಷೇಕ್ಸ್‍ಪಿಯರ್‍ಗಿಂತ ಬರ್ನಾಡ್ ಷಾ ಉತ್ತಮ ನಾಟಕಕಾರ ಎಂಬುದು ಕೃಷ್ಣ ಅಯ್ಯಂಗಾರ್ ವಾದವಾಗಿತ್ತು. ಕಾಲೇಜು ದಿನಗಳ ನಂತರ ನಾನು ದೆಹಲಿಯಲ್ಲಿ ಸಂಶೋಧನಾ ಕರ್ತವ್ಯ ನಿರ್ವಹಿಸುವ ವೇಳೆ ಮತ್ತೆ ನಾಟಕಗಳನ್ನು ಓದಲು ಶುರು ಮಾಡಿದೆ. ಷೇಕ್ಸ್‍ಪಿಯರ್ ನಾಟಕಗಳ ಜೊತೆಗೆ ಅನೇಕ ಆಧುನಿಕ ನಾಟಕಗಳನ್ನು ಓದಿದ್ದೆ. ಈ ವೇಳೆ ಬರ್ನಾಡ್ ಷಾಗಿಂತ ಷೇಕ್ಸ್‍ಪಿಯರ್ ಉತ್ತಮ ನಾಟಕಕಾರ ಎಂಬ ಅಂಶವನ್ನು ನಾನು ಕಂಡುಕೊಂಡೆ ಎಂದರು. ಬರ್ನಾಡ್ ಷಾ ಕಾಲಕ್ಕೆ ರಂಗಭೂಮಿಯ ತಾಂತ್ರಿಕತೆ ಸಾಕಷ್ಟು ಮುಂದುವರೆದಿತ್ತು. ಆದರೆ ಷೇಕ್ಸ್‍ಪಿಯರ್ ಕಾಲಕ್ಕೆ ಅಂತಹ ತಾಂತ್ರಿಕ ಸೌಲಭ್ಯಗಳೇ ಇರಲಿಲ್ಲ. ಷೇಕ್ಸ್‍ಪಿಯರ್ ಮನುಷ್ಯನ ಸ್ವಭಾವದಲ್ಲಿನ ಸತ್ಯ, ಜೀವನದಲ್ಲಿ ಸತ್ಯ-ಅಸತ್ಯ, ಒಳಿತು-ಕೆಡುಕು ಸೇರಿದಂತೆ ನೋವು-ನಲಿವು ಹಾಗೂ ಹಿಂಸೆಯನ್ನು ಆಳವಾಗಿ ಅನಾವರಣಗೊಳಿಸಿದ್ದಾನೆ. ಇಲ್ಲಿ ಕೇವಲ ತಾಂತ್ರಿಕತೆಯೇ ರಂಗದ ಶ್ರೇಷ್ಠತೆಯನ್ನು ಎತ್ತಿಹಿಡಿಯುವುದಿಲ್ಲ ಎಂಬ ಅಂಶ ಮನದಟ್ಟಾಗುತ್ತದೆ. ಹೀಗಾಗಿ ಷೇಕ್ಸ್‍ಪಿಯರ್ ಶ್ರೇಷ್ಠ ನಾಟಕಕಾರ ಎಂದು ಪ್ರತಿಪಾದಿಸಿದರು.

ಸಮಸ್ತ ನಾಟಕ ಕೃತಿಯನ್ನು ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ಬಿಡುಗಡೆ ಮಾಡಿದರು. ಸಾಹಿತಿ ಬಿ.ಆರ್.ಲಕ್ಷ್ಮಣರಾವ್, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಹಿತಿ ಡುಂಡಿರಾಜ್ ಬಿಡುಗಡೆಗೊಂಡ ಕೃತಿಯ ಪ್ರತಿಗಳನ್ನು ಸ್ವೀಕರಿಸಿದರು. ಪ್ರಕಾಶಕ ಟಿ.ಎಸ್.ಛಾಯಾಪತಿ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕೃತಿ ಕರ್ತೃ ಹೆಚ್.ಎಸ್.ವೆಂಕಟೇಶಮೂರ್ತಿ ವೇದಿಕೆಯಲ್ಲಿದ್ದರು. `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ (ಕೆಬಿಜಿ) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Translate »