ಮುಖ್ಯವಾಹಿನಿಗೆ ಬರಲು ಸಮ್ಮತಿಸಿತು ಚಂಗಡಿ, ಪಡುಸಾಲನತ್ತ
ಮೈಸೂರು

ಮುಖ್ಯವಾಹಿನಿಗೆ ಬರಲು ಸಮ್ಮತಿಸಿತು ಚಂಗಡಿ, ಪಡುಸಾಲನತ್ತ

November 21, 2018

ಮೈಸೂರು:  ಆ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತ ವಾಗಿವೆ. ದುರ್ಗಮ ಹಾದಿಯಲ್ಲಿ ಹತ್ತಾರು ಕಿ.ಮೀ. ಕ್ರಮಿಸಬೇಕಾಗಿದ್ದ ಪರಿಣಾಮ ಅಲ್ಲಿನ ಮಕ್ಕಳು ಶಿಕ್ಷಣಕ್ಕೆ ಗುಡ್‍ಬೈ ಹೇಳುತ್ತಿದ್ದಾರೆ. ಹೆರಿಗೆ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಕರೆತರುವುದಕ್ಕೆ ಅರ್ಧ ದಿನವೇ ಬೇಕಾಗುತ್ತದೆ. ಇಂತಹ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ 2 ಗ್ರಾಮಗಳ ಜನತೆ ಸ್ವಯಂಪ್ರೇರಣೆಯಿಂದ ಮುಖ್ಯ ವಾಹಿನಿಗೆ ಬರಲು ಮುಂದಾಗುವ ಮೂಲಕ ಮಾದರಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿವೆ.

ಹೌದು, ಮಲೆ ಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡಂತೆ ಹಾಗೂ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿರುವ ಗ್ರಾಮಗಳ ದುಃಸ್ಥಿತಿ ಹೇಳತೀರದಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಕಾಡಂಚಿನ ಗ್ರಾಮಗಳ ಸ್ಥಿತಿಗತಿಗಳು ಇಂದಿಗೂ ಸುಧಾರಣೆ ಕಂಡಿಲ್ಲ. ಈ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸುವುದಕ್ಕೂ ಅರಣ್ಯ ಕಾಯ್ದೆ ಅಡ್ಡಗಾಲಾಗಿ ಪರಿಣಮಿಸಿರುವುದರಿಂದ ಹಾಗೂ ಈ ಗ್ರಾಮಗಳು ಮುಖ್ಯವಾಹಿನಿಯಿಂದ 15ರಿಂದ 30 ಕಿ.ಮೀ. ದೂರದಲ್ಲಿರುವುದರಿಂದ ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಸವಾಲಾಗಿತ್ತು. ಈ ನಡುವೆ ಮಲೆ ಮಹದೇ ಶ್ವರ ಬೆಟ್ಟ ಒಳಗೊಂಡಂತೆ ಸುತ್ತಮುತ್ತಲಿನ ಪ್ರದೇಶವನ್ನು 2017ರಲ್ಲಿ ರಾಜ್ಯ ಸರ್ಕಾರ ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿ ರುವುದರಿಂದ ಕಾಡಿನ ಒಳಭಾಗದಲ್ಲಿರುವ ಕೆಲ ಗ್ರಾಮಗಳನ್ನು ಸ್ಥಳಾಂತರ ಮಾಡುವ ಅನಿವಾರ್ಯತೆ ಇದ್ದು, ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.

25 ಗ್ರಾಮ ಸೌಲಭ್ಯ ವಂಚಿತ: ಮಲೆ ಮಹದೇಶ್ವರ ಬೆಟ್ಟ 77 ಮಲೆಗಳಿಂದ ಕೂಡಿದೆ ಎಂಬ ಪ್ರತೀತಿ ಇದೆ. ಮಹದೇ ಶ್ವರರ ದೇವಾಲಯವಿರುವ ಬೆಟ್ಟದ ಸುತ್ತಲೂ ಕಡಿದಾದ, ದುರ್ಗಮವಾದ ಬೆಟ್ಟಗಳಿವೆ. ಈ ಬೆಟ್ಟಗಳ ನಡುವೆಯೇ ಶತಮಾನ ಗಳಷ್ಟು ಹಳೆಯದಾದ ಗ್ರಾಮಗಳಿವೆ. ಚಂಗಡಿ, ಮಂದರೆ, ದೊಡ್ಡಾಣೆ ಪಡುಸಾಲೆ, ತೋಕೆರೆ, ಇಂಡಿನತ್ತ, ಪಡುಸಾಲನತ್ತ, ಕೊಕ್ಕಬರೆ, ಮೆದಗಾಣೆ, ತುಳಸಿಕೆರೆ, ಗಂಟಳ್ಳಿ ಹಾಗೂ ನಾಗಮಲೆ ರಸ್ತೆಯಲ್ಲಿರುವ ಕೆಲವು ಗ್ರಾಮಗಳು ಸೇರಿದಂತೆ 25 ಗ್ರಾಮಗಳು ಸಮಾಜದ ಮುಖ್ಯವಾಹಿನಿಯೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ. ಇವುಗಳ ನಡುವೆ ಮೊನ್ನಾಚಿ, ಮರೂರು, ಅಸ್ತೂರು ಹಾಗೂ ಕೆಲವು ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಂತೆ ಇದ್ದರೂ ಮೂಲಭೂತ ಸೌಲಭ್ಯ ಕಲ್ಪಿಸಿರುವುದ ರಿಂದ ಅಲ್ಲಿನ ಗ್ರಾಮಸ್ಥರು ನಿರಾಳರಾಗಿ ದ್ದಾರೆ. ಆದರೆ ವನ್ಯಜೀವಿಗಳೊಂದಿಗೆ ಪ್ರತಿದಿನ ಸಂಘರ್ಷಕ್ಕೆ ಒಳಗಾಗುತ್ತಿದ್ದು, ಭಯದಿಂದ ದಿನದೂಡುವಂತಾಗಿದೆ.

2 ಗ್ರಾಮಗಳ ಸಮ್ಮತಿ: ದುರ್ಗಮವಾದ ಸ್ಥಳದಲ್ಲಿ ನೆಲೆ ಕಂಡುಕೊಂಡು ಹಲವು ವರ್ಷಗಳಿಂದ ಇದುವರೆಗೂ ಕಷ್ಟದಲ್ಲಿ ಜೀವನ ನಡೆಸಿರುವ ಗ್ರಾಮಗಳಲ್ಲಿ `ಚಂಗಡಿ’ ಎಂಬ ಗ್ರಾಮವೂ ಒಂದಾಗಿದೆ. ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆ ಯಿಂದ ಸುಮಾರು 20 ಕಿ.ಮೀ. ದೂರ ದಲ್ಲಿರುವ ಚಂಗಡಿ ಗ್ರಾಮ 85 ಎಕರೆ ವಿಸ್ತೀರ್ಣ ಹೊಂದಿದೆ. 1901ರಲ್ಲಿ ಈ ಗ್ರಾಮ ತಮಿಳುನಾಡು ಸರ್ಕಾರದ ಕೊಯಮ ತ್ತೂರು ವಲಯದ ಕಂದಾಯ ವಿಭಾಗಕ್ಕೆ ಸೇರಿದ ಗ್ರಾಮವಾಗಿತ್ತು. ಇದೀಗ 130ಕ್ಕೂ ಹೆಚ್ಚು ಕುಟುಂಬಗಳು ಚಕ್ಕಡಿ ಗ್ರಾಮದಲ್ಲಿದ್ದು, 720 ಜನಸಂಖ್ಯೆ ಹೊಂದಿದೆ. ಅವರಲ್ಲಿ 326 ಮತದಾರರಿದ್ದಾರೆ. ಎಲ್ಲಾ ಕುಟುಂಬಗಳು ಒಟ್ಟು 480 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿವೆ. ಆದರೆ ಹಲವು ತೊಂದರೆಯಿಂದ ತತ್ತರಿಸಿ ರುವ ಚಂಗಡಿ ಗ್ರಾಮಸ್ಥರು ಸರ್ವಾನು ಮತದಿಂದ ಅರಣ್ಯ ಇಲಾಖೆ ಕಲ್ಪಿಸುವ ಪುನರ್ವಸತಿಗೆ ಒಪ್ಪಿಗೆ ಸೂಚಿಸಿ ಗಮನ ಸೆಳೆದಿದ್ದಾರೆ. ಚಕ್ಕಡಿ ಗ್ರಾಮದೊಂದಿಗೆ ಪಡುಸಾಲೆ ಗ್ರಾಮದಲ್ಲಿರುವ 40 ಕುಟುಂಬಗಳು ಪುನರ್ವಸತಿಗೆ ಒಪ್ಪಿಗೆ ಸೂಚಿಸಿ ಅರಣ್ಯ ಭಾಗದಿಂದ ಹೊರ ಬರಲು ಸ್ವ-ಇಚ್ಛೆಯಿಂದ ನಿರ್ಧರಿಸಿವೆ. ಇದರಿಂದ ಅರಣ್ಯ ಇಲಾಖೆ ಇಟ್ಟ ಮೊದಲ ಹೆಜ್ಜೆಯಲ್ಲೇ ಯಶಸ್ಸು ಕಾಣುತ್ತಿದೆ.

ಪುನರ್ವಸತಿ ಎಲ್ಲಿ: ಹನೂರು ತಾಲೂಕಿಗೆ ಸೇರಿರುವ ಕೊಚ್ಚನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚಿಕ್ಕಲೂರು ಗ್ರಾಮದ ಬಳಿ ಯಿರುವ ಅರಣ್ಯ ಇಲಾಖೆಗೆ ಸೇರಿರುವ 1600 ಎಕರೆ ಡೀಮ್ಡ್ ಫಾರೆಸ್ಟ್ ಭೂಮಿ ಇದೆ. ಈ ವಿಶಾಲವಾದ ಸ್ಥಳ ಅರಣ್ಯ ಪ್ರದೇಶದಿಂದ ದೂರವಿದ್ದು, ಯಾವುದೇ ವನ್ಯಜೀವಿಗಳು ಈ ಸ್ಥಳದಲ್ಲಿ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪುನರ್ವಸತಿಗೆ ಈ ಸ್ಥಳವನ್ನು ಗುರುತಿಸಲಾಗಿದ್ದು, ಚಂಗಡಿ ಮತ್ತು ಪಡುಸಾಲನತ್ತ ಗ್ರಾಮದ ಗ್ರಾಮಸ್ಥರು ಸ್ಥಳ ಪರಿಶೀಲಿಸಿ ಒಪ್ಪಿಗೆ ಸೂಚಿಸಿದ್ದಾರೆ.

ಪುನರ್ವಸತಿ ಹೇಗೆ: ಕಾಡಿನಿಂದ ನಾಡಿಗೆ ಬರುತ್ತಿರುವ ಎರಡು ಗ್ರಾಮಗಳ ಜನರಿಗೆ ಅರಣ್ಯ ಇಲಾಖೆ ಎರಡು ಬಗೆಯ ಪುನರ್ವಸತಿ ಯೋಜನೆ ಪ್ರಕಟಿಸಿದೆ. ನೇರವಾಗಿ ಹಣ ನೀಡುವುದು ಒಂದು ಬಗೆಯ ಯೋಜನೆಯಾದರೆ, ಮನೆ ನಿರ್ಮಿಸಿ ತಲಾ ಐದು ಎಕರೆ ಭೂಮಿ ನೀಡಿ, ಗ್ರಾಮದಲ್ಲಿ ಶಾಲೆ, ಸಮುದಾಯ ಭವನ, ರಸ್ತೆ, ನೀರು ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವುದು ಎರಡನೆ ಯೋಜನೆಯಾಗಿದೆ. ಕುಟುಂಬ ವೊಂದಕ್ಕೆ 15 ಲಕ್ಷ ರೂ ನಿಗದಿಪಡಿಸ ಲಾಗಿದೆ. 15 ಲಕ್ಷ ರೂ. ಪಡೆದ ಗ್ರಾಮಸ್ಥರು ಯಾವ ಊರಿಗೆ ಬೇಕಾದರೂ ವಲಸೆ ಹೋಗಬಹುದಾಗಿದೆ. ಹಣ ಪಡೆಯದೆ ಪುನರ್ವಸತಿ ಕಲ್ಪಿಸುವ ಯೋಜನೆಗೆ ಎಲ್ಲರೂ ಬಯಸಿದ್ದು, ಮನೆ ಮತ್ತು 5 ಎಕರೆ ಭೂಮಿ ಪಡೆದು ಗ್ರಾಮಸ್ಥ ರೆಲ್ಲರೂ ಒಂದೇ ಸ್ಥಳದಲ್ಲಿ ನೆಲೆಯೂರಲು ನಿರ್ಧರಿಸಿದ್ದಾರೆ.

– ಎಂ.ಟಿ.ಯೋಗೇಶ್ ಕುಮಾರ್

Translate »