ಮೈಸೂರಿನಲ್ಲಿ 5 ಕೊರೊನಾ ವೈರಸ್ ಹೊಸ ಪ್ರಕರಣ ಪತ್ತೆ
ಮೈಸೂರು

ಮೈಸೂರಿನಲ್ಲಿ 5 ಕೊರೊನಾ ವೈರಸ್ ಹೊಸ ಪ್ರಕರಣ ಪತ್ತೆ

March 28, 2020
  • ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ
  • ನಂಜನಗೂಡಿಂದ ಎಲ್ಲ‍ಾ ವಾಹನಗಳ ಸಂಚಾರ ನಿಷೇಧ

ಮೈಸೂರು,ಮಾ.28(ಎಂಟಿವೈ)- ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮಾರಕ ನೊವೆಲ್ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಶನಿವಾರ ಐವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು ಆ ಮೂಲಕ ಸೋಂಕು ಪೀಡಿತರ ಸಂಖ್ಯೆ 8ಕ್ಕೆ ಏರಿದಂತಾಗಿದೆ.

ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆಯ 5 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಎರಡು ದಿನದ ಹಿಂದೆಯಷ್ಟೆ ಜ್ಯುಬಿಲೆಂಟ್ ಕಾರ್ಖಾನೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿತ್ತು. ಇದರಿಂದ ಆ ಕಾರ್ಖಾನೆಯಲ್ಲಿ ಕೆಲಸ ಮಾಡುವ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ತಪಾಸಣೆ ಒಳಪಡಿಸಲಾಗಿತ್ತು. ಅದರಲ್ಲಿ 53 ಸಿಬ್ಬಂದಿಗಳನ್ನು ಸೂಕ್ಷ್ಮ ನಿಗಾದಲ್ಲಿಡಲಾಗಿತ್ತು. ಉಳಿದ ಸಿಬ್ಬಂದಿಗಳನ್ನು 14 ದಿನ ದಿಗ್ಬಂಧನದಲ್ಲಿರುವಂತೆ ಸೂಚಿಸಲಾಗಿತ್ತು.
ಇಂದು ಶಂಕಿತರ ಪರೀಕ್ಷಾ ವರದಿ ಬಂದಿದ್ದು ಐವರಲ್ಲಿ ಸೋಂಕು ಇರುವುದು ಸಾಬೀತಾಗಿದೆ. ನಂಜನಗೂಡು ಪಟ್ಟಣ, ಚಾಮುಂಡಿಪುರ ಬಡಾವಣೆ, ರಾಮಸ್ವಾಮಿ ಲೇಔಟ್ , ಗೋವಿಂದರಾಜ ಲೇಔಟ್ ತಲಾ ಒಬ್ಬೊಬ್ಬರು ಹಾಗೂ ಮೈಸೂರಿನ ಯರಗನಹಳ್ಳಿ ಹೊಸ ಬಡಾವಣೆಯ ಓರ್ವ ನೌಕರರಿಗೆ ಕೊರೊನಾ ಇರುವುದು ಕಂಡು ಬಂದಿದೆ.

ಈ ಹಿಂದೆ ಮೈಸೂರಿನಲ್ಲಿ ಮೂರು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ದೃಡಪಟ್ಟ 5 ಪ್ರಕರಣಗಳಿಂದ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿದಂತಾಗಿದೆ.

ನಂಜನಗೂಡಿಗೆ ವಾಹನ ಸಂಚಾರ ನಿರ್ಬಂಧ: ಜ್ಯುಬಿಲಿಯಂಟ್ ಕಾರ್ಖಾನೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಸಾಬೀತಾದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ನಂಜನಗೂಡು ಪಟ್ಟಣವನ್ನು ರೆಡ್ ‍ಅಲರ್ಟ್ ಪಟ್ಟಣವಾಗಿ ಘೋಷಿಸಲಾಗಿತ್ತು. ಅಲ್ಲಿನ ನಿವಾಸಿಗಳಿಗೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಇಂದು ಐದು ಜನರಿಗೆ ಸೋಂಕು ಇರುವುದು ದೃಡಪಟ್ಟ ಹಿನ್ನೆಲೆಯಲ್ಲಿ ನಂಜನಗೂಡಿಂದ ಮೈಸೂರಿಗೆ ಬರುವ ಹಾಗೂ ಹೋಗಲು ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.

Translate »