ಕರ್ನಾಟಕ – ಕೇರಳ ಗಡಿಗೆ ಸಚಿವ ಸುರೇಶ್ ಕುಮಾರ್ ಬೇಟಿ
ಚಾಮರಾಜನಗರ, ಮೈಸೂರು

ಕರ್ನಾಟಕ – ಕೇರಳ ಗಡಿಗೆ ಸಚಿವ ಸುರೇಶ್ ಕುಮಾರ್ ಬೇಟಿ

March 28, 2020
  • ಬಂಡೀಪುರದ ಮೂಲೆಹೊಳೆ‌ ಚೆಕ್ ಪೋಸ್ಟ್ ಗೆ ಆಗಮಿಸಿ ಪರಿಶೀಲನೆ
  • ತರಕಾರಿ ವಾಹನಗಳಿಗೆ ರಾಸಾಯನಿಕ ಸಿಂಪಡಿಸುವಂತೆ ಸೂಚನೆ

ಗುಂಡ್ಲುಪೇಟೆ,ಮಾ.28(ಎಂಟಿವೈ)- ನೊವೆಲ್ ಕೊರೊನಾ ವೈರಾಣು ವ್ಯಾಪ್ತಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ – ಕೇರಳ ಗಡಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಚೆಕ್ ಪೋಸ್ಟ್ ಗೆ ಶನಿವಾರ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಬೇಟಿ ನೀಡಿ ಪರಿಶೀಲಿಸಿದರು.

ಕರ್ನಾಟಕ ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 212(766) ಹಾದು ಹೋಗುವ ಬಂಡೀಪುರ ಅರಣ್ಯದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ತರಕಾರಿ ಹಾಗೂ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನ ಸಂಚರಿಸಲಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ವೈರಾಣು ಹರಡದಂತೆ ತಡೆಗಟ್ಟಲು ಗಡಿಯಲ್ಲಿ ಕೈಗೊಂಡಿರುವ ಕ್ರಮ ಕುರಿತು ಮಾಹಿತಿ ಪಡೆದರು.
ಕಡ್ಡಾಯವಾಗಿ ಸ್ಯಾನಿಟೈಸರ್ ಸಿಂಪಡಿಸಿ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುವ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ ಸ್ಯಾನಿಟೈಸರ್ ಸಿಂಪಡಿಸಬೇಕು. ಯಾವುದೇ ಕಾರಣಕ್ಕೂ ಹಾಗೂ ಯಾರಿಂದ ಒತ್ತಡ ಬಂದರೂ ಲೆಕ್ಕಿಸದೆ ಸ್ಯಾನಿಟೈಸರ್ ಹಾಗೂ ವೈರಾಣು ನಾಶ ಮಾಡುವ ರಾಸಾಯನಿಕ ದ್ರಾವಣ ಸಿಂಪಡಿಸಿದ ನಂತರವಷ್ಟೇ ವಾಹನಗಳನ್ನು ರಾಜ್ಯದ ಗಡಿದಾಟಲು ಅವಕಾಶ ನೀಡಬೇಕು. ಮೈ ಮರೆತು ವೈರಸ್ ರಾಜ್ಯಕ್ಕೆ ವ್ಯಾಪಿಸದಂತೆ ಇರಬಾರದು ಎಂದು ಸೂಚಿಸಿದರು.

ವೀಕ್ಷಣೆ : ಕೇರಳದಿಂದ ಬರುವಂತಹ ವಾಹನಗಳಿಗೆ ಸ್ಯಾನಿಟೇಜರ್ ಸಿಂಪಡಣೆ ಮಾಡುವುದನ್ನು ವೀಕ್ಷಣೆ ಮಾಡಿ ಪ್ರತಿನಿತ್ಯ ರಾಜ್ಯಕ್ಕೆ ಎಷ್ಟು ವಾಹನಗಳ ಬರುತ್ತವೆ, ಎಷ್ಟು ವಾಹನ ಹೋಗುತ್ತವೆ ಎಂಬ ಅಂಕಿ ಅಂಶಗಳು ಪಡೆದರು.
ಕೇರಳ ಗಡಿಯಲ್ಲಿ ಯಾವ ರೀತಿಯಲ್ಲಿ ತಪಾಸಣೆ ಮಾಡಲಾಗುತ್ತದೆ. ಅಲ್ಲಿನ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಯಾವ ಸೌಲಭ್ಯ ನೀಡಲಾಗಿದೆ.

ಅಂತರ ಕಾಯ್ದುಕೊಂಡರು: ಚಾಮರಾಜನಗರದ ಬೇಟಿ ವೇಳೆಯೂ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪತ್ರಕರ್ತರಿಂದ ಅಂತರಕಾಯ್ದುಕೊಂಡಿದ್ದ ಸಚಿವರು ಗಡಿ ಪರಿಶೀಲನೆ ವೇಳೆಯೂ ಅಂತರ ಕಾಯ್ದುಕೊಂಡೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಜಿ.ಪಂ. ಪ್ರಭಾರ ಅಧಕ್ಷ ಕೆ.ಎಸ್.ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಎಸ್ ಪಿ ಹೆಚ್. ಡಿ.ಆನಂದ್ ಕುಮಾರ್, ಜಿ.ಪಂ ಸಿಇಓ ಹರ್ಷಲ್ ಬೋಯಿಲ್, ತಹಸೀಲ್ದಾರ್ ಎಮ್.ನಂಜುಂಡಯ್ಯ, ಡಿಡಿಪಿಐ ಜವರೇಗೌಡ, ನೋಡಲ್ ಅಧಿಕಾರಿ ರವಿಕುಮಾರ್, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತಿದಿನ 60 ವಾಹನಕ್ಕೆ ಅನುಮತಿ..

ನೊವೆಲ್ ಕೊರೊನಾ ವೈರಾಣು ಹರಡುವ ಚೈನ್ ಲಿಂಕ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎವ.21ರವರೆಗೂ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು ಯಾವುದೇ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಈಗಾಗಲೇ ಕರ್ನಾಟಕ-ಕೇರಳ ಹಾಗೂ ತಮಿಳುನಾಡು ಗಡಿ ಬಂದ್ ಮಾಡಲಾಗಿತ್ತು. ಆದರೆ ಹಣ್ಣು, ತರಕಾರಿ, ದಿನಸಿ, ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕು ಆಡಳಿತ ಕೇರಳದಿಂದ ಗುಂಡ್ಲುಪೇಟೆ ಗೆ ರಾಷ್ಟ್ರೀಯ ಹೆದ್ದಾರಿ 766 ಹಾಗೂ ಊಟಿಯಿಂದ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಪ್ರತಿದಿನ 60 ವಾಹನ ಹೋಗಲು ಹಾಗೂ 60 ವಾಹನ ಬರಲು ಪಾಸ್ ನೀಡಲಾಗಿದೆ. ಎರಡೂ ಗಡಿಯಲ್ಲೂ ವಾಹನಗಳಿಗೆ ವೈರಾಣು ನಾಶ ಮಾಡುವ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದೆ.

Translate »