ಮೋದಿ, ಶಾ ಕಲ್ಲು ಹೃದಯದವರು; ಅಂಬಾನಿ,  ಅದಾನಿ ಬಂಡವಾಳಶಾಹಿ ಕಂಪನಿಯ ಪ್ರತಿನಿಧಿಗಳು…
ಮೈಸೂರು

ಮೋದಿ, ಶಾ ಕಲ್ಲು ಹೃದಯದವರು; ಅಂಬಾನಿ, ಅದಾನಿ ಬಂಡವಾಳಶಾಹಿ ಕಂಪನಿಯ ಪ್ರತಿನಿಧಿಗಳು…

February 14, 2021

ಚಾಮರಾಜನಗರ, ಫೆ.13(ಎಸ್‍ಎಸ್)- ಮೋದಿ-ಶಾ ಕಲ್ಲು ಹೃದಯದವರಾಗಿದ್ದಾರೆ. ಅವರ ನಡೆ-ನುಡಿಗಳಲ್ಲಿ ಜನರಿಂದ ಆಯ್ಕೆಯಾದ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅಂಬಾನಿ, ಅದಾನಿ, ಬಂಡವಾಳಶಾಹಿ ಕಂಪನಿ ಸರ್ಕಾರ ಗಳಿಂದ ನೇಮಕಗೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕಿಡಿಕಾರಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಆಯೋಜಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ನೆನಪು ಅಂಗವಾಗಿ ‘ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾ ಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಒಂದು ಕಂಪನಿ ಸರ್ಕಾರದ ಆಳ್ವಿಕೆ ಇತ್ತು. ಆದರೆ, ಇಂದು ಅಂಬಾನಿ, ಅದಾನಿ ಮತ್ತಿತರ ಹತ್ತಾರು ಕಂಪನಿ ಸರ್ಕಾರಗಳ ಆಳ್ವಿಕೆ ನಡೆಯುತ್ತಿದೆಯೇನೋ ಅನಿಸುತ್ತಿದೆ. ಜನರಿಂದ ಆಯ್ಕೆ ಯಾದ ಯಾವ ಲಕ್ಷಣವೂ ಮೋದಿ ಹಾಗೂ ಶಾ ಅವರ ಆಳ್ವಿಕೆಯಲ್ಲಿ ಕಾಣುತ್ತಿಲ್ಲ. ಯಾಕೆಂದರೆ, ಕಳೆದ ಎರಡೂ ವರೆ ತಿಂಗಳಿನಿಂದಲೂ ಲಕ್ಷಾಂತರ ಜನರು ರಾಜಧಾನಿ ದೆಹಲಿ ಗಡಿಯ ಸುತ್ತಲೂ ಕೃಷಿ ಕಾಯ್ದೆಗಳನ್ನು ಹಿಂತೆಗೆದು ಕೊಳ್ಳುವಂತೆ ಒತ್ತಾಯಿಸಿ ಪ್ರಾಣವನ್ನು ಪಣಕ್ಕಿಟ್ಟು ಕುಳಿತ್ತಿ ದ್ದರೂ, ಧರಣಿ ಸ್ಥಳದಲ್ಲೇ ಹಲವರು ಸತ್ತಿದ್ದರೂ, ಇಡೀ ದೇಶವೇ ಒಕ್ಕೊರಲಿನಿಂದ ಅವರ ಬೇಡಿಕೆಗಳನ್ನು ಈಡೇರಿ ಸುವಂತೆ ಒತ್ತಾಯಿಸುತ್ತಿದ್ದರೂ ಮೋದಿ-ಶಾ ಅವರ ಕಲ್ಲು ಹೃದಯ ಕರಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಮೋದಿ ಜೀ ಅವರು ರಾಜ್ಯಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತನಾಡುತ್ತಾ, ಎಂಎಸ್‍ಪಿ ಥಾ, ಹೈ, ರಹೇಗಾ ಅಂದರೆ ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತೆ ಎಂದು ಪ್ರವಾದಿಯಂತೆ ಭೂತ, ವರ್ತಮಾನದ ಭವಿಷ್ಯವನ್ನು ನುಡಿಯುವವರಂತೆ ಗಂಭೀರವಾದ ಧ್ವನಿಯಲ್ಲಿ ಹೇಳುತ್ತಾರೆ. ಹಾಗಾದರೆ, ಡೆಲ್ಲಿ ಸುತ್ತಲೂ ಲಕ್ಷಾಂತರ ಜನರು ಮನೆ, ಮಠ, ಕೆಲಸ ಕಾರ್ಯ ತೊರೆದು ಸರ್ಕಾರ, ಪೊಲೀಸರು ಹಾಗೂ ಬಿಜೆಪಿ ಸದಸ್ಯರು ಜೊತೆಗೂಡಿ ಕೊಡುತ್ತಿರುವ ಕಷ್ಟ ಕೋಟಲೆ ಗಳನ್ನು ಸಹಿಸಿಕೊಂಡು ಜೀವನ್ಮರಣದ ಪ್ರಶ್ನೆ ಎಂಬಂತೆ ಕೂತಿರುವುದಾದರೂ ಯಾಕೆ? ಅವರೇನೂ ಮೂಢಾ ತ್ಮರೆ? ಖಂಡಿತಾ ಅಲ್ಲ. ಅವರು ಹೇಳುತ್ತಿರುವುದು ಇಷ್ಟೇ. ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಶಾಸನ ಮಾಡಿ ಎಂದಷ್ಟೇ. ಇದನ್ನು ಮಾಡದಿದ್ದರೆ, ಅದು ಇದ್ದರೂ ಇಲ್ಲ ದಂತೆ ಅಂತ. ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ. ಬದಲಿಗೆ ಮೋದಿ-ಶಾ ವಂಚಕಾತ್ಮರು. ಅವರು ಕೇಳಿಸಿ ಕೊಳ್ಳುತ್ತಿಲ್ಲ ಎಂದು ದೇವನೂರು ಮಹದೇವ ಟೀಕಿಸಿದರು.

ಪ್ರಧಾನಿ ಮೋದಿ ಅವರಲ್ಲಿ ಒಂದು ಪ್ರಾರ್ಥನೆ ಮಾಡು ತ್ತೇನೆ ‘ನೀವು ಬೇರೆ ಯಾರ ಮಾತನ್ನು ಕೇಳಿಸಿಕೊಳ್ಳುವು ದಿಲ್ಲ. ಒಂದು ಮಾತು ಅದು ನಿಮ್ಮದೇ ಮಾತು. 2011ರಲ್ಲಿ ನೀವು(ಮೋದಿ) ಗುಜರಾತ್ ಮುಖ್ಯಮಂತ್ರಿ ಆಗಿದ್ದಿರಿ. ಯುಪಿಎ ಸರ್ಕಾರವು ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆಗ ನೀವು ನೀಡಿರುವ ವರದಿಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದಿದ್ದೀರಿ. ಈಗ ಎಲ್ಲರೂ ಕೇಳುತ್ತಿರುವುದು ಇದನ್ನೇ. ಆದರೆ, ನೀವು ಕೇಳಿಸಿಕೊಳ್ಳುತ್ತಿಲ್ಲ. ಇದಕ್ಕೆ ಏನನ್ನಬೇಕು ಎನ್ನುವುದೇ ನನಗೆ ಪದಗಳೇ ಸಾಲುತ್ತಿಲ್ಲ ಎಂದರು.

ಕೋವಿಡ್ ಹಾವಳಿಯಿಂದ ಜರ್ಝರಿತವಾದ ಕಾಲಮಾನದಲ್ಲೇ ಕೇವಲ ನೂರು ಜನ ಶತಕೋಟ್ಯಾ ಧೀಶ್ವರರು 12.5 ಲಕ್ಷ ಕೋಟಿ ಲಾಭ ಗಳಿಸಲು ಹೇಗೆ ಸಾಧ್ಯ ಎಂದು ದೇವನೂರ ಮಹದೇವ ಖಾರವಾಗಿ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಕೃಷಿ, ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ, ಚಿಂತಕ ಡಾ.ಮುಜಾಫರ್ ಅಸಾದಿ, ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ವಿಭಾಗೀಯ ಕಾರ್ಯದರ್ಶಿ ಎ.ಎಂ.ಮಹೇಶ್ ಪ್ರಭು, ಜಿಲ್ಲಾಧ್ಯಕ್ಷ ಹೆಬ್ಬ ಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೌಡನಪುರ ಸಿದ್ದರಾಜು, ಮುಖಂಡರಾದ ಅಬ್ರಾರ್, ನಿಜಧ್ವನಿ ಗೋವಿಂದರಾಜು, ಸಿ.ಎಂ.ಕೃಷ್ಣಮೂರ್ತಿ, ಆಲೂರು ನಾಗೇಂದ್ರ, ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ನೇತ್ರಾವತಿ, ಶಾಂತಮಲ್ಲಪ್ಪ, ಶ್ರೀಕಂಠಸ್ವಾಮಿ ಇತರರು ಉಪಸ್ಥಿತರಿದ್ದರು.

 

Translate »