ಮೈಸೂರು

ಶೀಘ್ರ ನೂತನ ಕಟ್ಟಡಕ್ಕೆ ಡಿಸಿ ಕಚೇರಿ ಸ್ಥಳಾಂತರ

February 14, 2021

ಮೈಸೂರು, ಫೆ.13(ಆರ್‍ಕೆಬಿ)- ಮೈಸೂರಿನ ಸಿದ್ದಾರ್ಥ ಲೇಔಟ್‍ನ ಬನ್ನೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಭವ್ಯವಾದ ಹೆರಿಟೇಜ್ ಶೈಲಿಯ ಬಹು ಕೋಟಿ ವೆಚ್ಚದ ನೂತನ ಜಿಲ್ಲಾಧಿಕಾರಿಗಳ ಕಚೇರಿಗಳ ಸಂಕೀರ್ಣಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಶೀಘ್ರದಲ್ಲೇ ಸ್ಥಳಾಂತರ ಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೋವಿಡ್-19 ಕಾರಣದಿಂದಾಗಿ ಜಿಲ್ಲಾಧಿಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂ ತರಿಸಲು ಸಾಧ್ಯವಾಗಿರಲಿಲ್ಲ. ಈಗ ಕೋವಿಡ್-19 ಗಣನೀಯ ವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಡಿಸಿ ಕಚೇರಿ ಸ್ಥಳಾಂತರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಂಬೇಡ್ಕರ್ ಭವನ: ಅಂಬೇಡ್ಕರ ಭವನ ಕಾಮಗಾರಿ ಸ್ಥಗಿತ ವಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾ ಗಲೇ ನಾನು ಮತ್ತು ಸಚಿವ ಶ್ರೀರಾಮುಲು ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿದ್ದೇವೆ. ಹಣದ ಕೊರತೆಯಿಂದಾಗಿ ಸ್ಥಗಿತವಾಗಿತ್ತು. ಈಗ ಹಣಕಾಸು ಸಚಿವಾಲಯಕ್ಕೆ ಅನುದಾನ ಕೇಳಿದ್ದೇವೆ. ಅದು ಬರುತ್ತಿದ್ದಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಪುರಭವನ ಪಾರ್ಕಿಂಗ್: ಪುರಭವನದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ವಾಹನಗಳ ಪಾರ್ಕಿಂಗ್ ಕೆಲವು ದಿನಗಳಲ್ಲೇ ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮಶೇಖರ್ ಹೇಳಿದರು.

 

Translate »