ಬಂಡೀಪುರ ಕಾಡಂಚಿನ ಗ್ರಾಮಸ್ಥರಿಂದ ಮಾನವ-ವನ್ಯಜೀವಿ  ಸಂಘರ್ಷದ ಬಗ್ಗೆ ಮಾಹಿತಿ ಪಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳು
ಮೈಸೂರು

ಬಂಡೀಪುರ ಕಾಡಂಚಿನ ಗ್ರಾಮಸ್ಥರಿಂದ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಮಾಹಿತಿ ಪಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳು

February 16, 2021

ಮೈಸೂರು,ಫೆ.15(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಬಂಡೀಪುರ ಕಾಡಂಚಿನ ಗ್ರಾಮಸ್ಥ ರೊಂದಿಗೆ ಸಮಾಲೋಚಿಸಿ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನುಸರಿಸುತ್ತಿರುವ ಕ್ರಮ ಕುರಿತು ಮಾಹಿತಿ ಪಡೆದರು.

ಕನ್ಸರ್ವೇಷನ್ ವೈಲ್ಡ್‍ಲೈಫ್ ಫೌಂಡೇಷನ್ ವತಿ ಯಿಂದ ಆಯೋಜಿಸಿದ್ದ `ಪರಿಸರ ಜಾಗೃತಿ’ ಶಿಬಿರ ದಲ್ಲಿ ಅಂತಿಮ ವರ್ಷದ 30 ಮಂದಿ ವಿದ್ಯಾರ್ಥಿಗಳು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಂಡರು. ಇದೇ ವೇಳೆ ಫೌಂಡೇಷನ್ ಮುಖ್ಯಸ್ಥ ರಾಜ್‍ಕುಮಾರ್ ಡಿ.ಅರಸ್ ಮಾತನಾಡಿ, ವನ್ಯಸಂಪ ತ್ತಿನ ಸಂರಕ್ಷಣೆಯ ಜವಾಬ್ದಾರಿ ಕೇವಲ ಅರಣ್ಯ ಇಲಾಖೆ ಯದ್ದು ಎಂದು ತಿಳಿಯಬಾರದು. ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಗೆ ಕೈಜೋಡಿಸಬೇಕು. ಪತ್ರಿಕೋ ದ್ಯಮ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ. ಬಾಲ್ಯಾವಸ್ಥೆಯಲ್ಲಿಯೇ ಪ್ರಾಣಿ-ಪಕ್ಷಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಕೈಜೋಡಿಸಲು ಸಾಧ್ಯವಾಗಲಿದೆ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಪಕ್ಷಿಗಳನ್ನು ವೀಕ್ಷಿಸುವ ಅಭ್ಯಾಸ ರೂಢಿಸಿ ಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಹಕಾರಿಯಾಗುತ್ತದೆ ಎಂದರು.

ಕಾಡಂಚಿನ ಗ್ರಾಮಗಳಲ್ಲಿ ಈ ಹಿಂದೆ ಮಾನವ ಮತ್ತು ವನ್ಯಜೀವಿಗಳ ಸಂಘರ್ಷವಿತ್ತು. ಇತ್ತೀಚಿನ ದಿನಗಳಲ್ಲಿ ಕ್ಷೀಣಿ ಸಿದೆ. ಸಾಮಾನ್ಯವಾಗಿ ಕಾಡಂಚಿನಲ್ಲಿರುವ ಹೊಲಗಳಲ್ಲಿ ರೈತರು ವ್ಯವಸಾಯ ಮಾಡದೆ ಪಾಳು ಬಿಟ್ಟಿರುತ್ತಾರೆ. ಕಾಡುಪ್ರಾಣಿಗಳು ಬೆಳೆ ನಾಶ ಮಾಡು ತ್ತವೆ ಎಂಬ ಆತಂಕದಿಂದ ಕೃಷಿಗೆ ಹಿಂದೇಟು ಹಾಕು ತ್ತಾರೆ. ಪಾಳುಬಿದ್ದ ಭೂಮಿಯಲ್ಲಿ ಹಸು, ಕುರಿ ಮೇಯಿಸಲು ಹೋದಾಗ ಪೊದೆಗಳಲ್ಲಿ ಯಾವುದಾ ದರೂ ಪ್ರಾಣಿಗಳಿದ್ದರೆ ದಾಳಿ ಮಾಡಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣ ವಾಗುತ್ತಿತ್ತು. ಈ ನಿಟ್ಟಿನಲ್ಲಿ ಬಂಡೀಪುರ ಅರಣ್ಯದಂಚಿನ ಗ್ರಾಮಗಳಾದ ಮಂಗಲ, ಕೆ.ಕಾಲೋನಿ, ಕಣಿಯನಪುರ ಸೇರಿದಂತೆ ಇನ್ನಿತರೆಡೆಗಳಲ್ಲಿ ಫೌಂಡೇಷನ್ ವತಿ ಯಿಂದ ನಾಲ್ಕೈದು ಮಂದಿ ರೈತರ ಗುಂಪು ಮಾಡಿ ಅಕ್ಕಪಕ್ಕದ ಜಮೀನುಗಳಿಗೆ ಸುತ್ತಲೂ ಸೋಲಾರ್ ತಂತಿಬೇಲಿ ನಿರ್ಮಿಸಲಾಗಿದೆ. ಇದರಿಂದ ಕಾಡುಪ್ರಾಣಿ ಗಳು ಹೊಲಕ್ಕೆ ಬರುವುದು ತಪ್ಪಿದಂತಾಗಿದ್ದು, ರೈತರು ಕೃಷಿ ಚಟುವಟಿಕೆಯನ್ನು ನಿರಾತಂಕವಾಗಿ ಮಾಡುತ್ತಿ ದ್ದಾರೆ. ಅಲ್ಲದೆ ಮುಂಜಾನೆ ವೇಳೆ ಬಯಲು ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುವುದನ್ನು ಮನಗಂಡು ಸಾರ್ವಜನಿಕ ಶೌಚಾ ಲಯವನ್ನು ಕಟ್ಟಿಸಿಕೊಡಲಾಗುತ್ತಿದೆ ಎಂದರು.

ಬೇಸಿಗೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸುತ್ತದೆ. ಸಿಡಿಲು ಬಡಿದು ಬೆಂಕಿ ಉಂಟಾಗು ತ್ತದೆ ಎಂಬ ಊಹೆ ಹಲವರಲ್ಲಿದೆ. ಆದರೆ ಶೇ.99 ರಷ್ಟು ಕಾಡ್ಗಿಚ್ಚು ಪ್ರಕರಣ ಮಾನವ ನಿರ್ಮಿತವೇ ಆಗಿರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಇತ್ತೀಚಿನ ದಿನಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹೆಚ್ಚಾಗಿ ಆಯೋಜಿಸುತ್ತಿದೆ. ಇದ ರಿಂದ ಕಾಡಂಚಿನ ಗ್ರಾಮಗಳಲ್ಲಿನ ಯುವಕರ ತಂಡ ಕಾಡ್ಗಿಚ್ಚು ಸಂಭವಿಸಿದ ವೇಳೆ ಸ್ವಯಂಪ್ರೇರಣೆಯಿಂದ ಅರಣ್ಯ ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಒಳ್ಳೆ ಬೆಳವಣಿಗೆ. ಪರಿಸರ ಜಾಗೃತಿ ಶಿಬಿರಗಳು ಹೆಚ್ಚಾದಷ್ಟು ವನ್ಯಜೀವಿ ಸಂರಕ್ಷಣೆಗೆ ಉಪಯೋಗವಾಗಲಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಫೌಂಡೇಷನ್ ಸ್ವಯಂ ಸೇವಕ ಪಿ.ಕೆ.ಅನಿಲ್‍ಕುಮಾರ್ ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ವಿವರಣೆ ನೀಡಿದರು. ಅಲ್ಲದೆ ಪಕ್ಷಿಗಳಿಗೆ ಅಪಾಯ ಎದುರಾದಾಗ, ಸಹಜ ಸ್ಥಿತಿ, ಹಸಿವು ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಕೂಗುವಿಕೆ ಬಗ್ಗೆ ತಿಳಿಹೇಳಿದರು. ಇದೇ ವೇಳೆ `ಮೈಸೂರು ಮಿತ್ರ’ ಪತ್ರಿಕೆ ಹಿರಿಯ ವರದಿಗಾರ ಎಂ.ಟಿ.ಯೋಗೇಶ್ ಕುಮಾರ್ `ವನ್ಯಜೀವಿ ಸಂರಕ್ಷಣೆಯಲ್ಲಿ ಪತ್ರಕರ್ತರ ಪಾತ್ರ’ ಕುರಿತಂತೆ ಮಾತನಾಡಿ, ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಗ್ರಾಮಸ್ಥರನ್ನು ತೊಡಗಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ವಿವರಿಸಿದರು. ಈ ವೇಳೆ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಉಪ ನ್ಯಾಸಕರಾದ ಕುಮಾರಸ್ವಾಮಿ, ಗೌತಮ್ ದೇವನೂರು, ನಿಶಿತಾ ಕೃಷ್ಣಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.

Translate »