5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ ಮೈಸೂರು ವಿವಿ
ಮೈಸೂರು

5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ ಮೈಸೂರು ವಿವಿ

April 8, 2021

ಮೈಸೂರು, ಏ.7(ಆರ್‍ಕೆಬಿ/ಪಿಎಂ)- ಮೈಸೂರು ವಿಶ್ವವಿದ್ಯಾನಿಲಯ 2021-22ನೇ ಸಾಲಿಗೆ 5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದೆ. 310.29 ಕೋಟಿ ರೂ. ಆದಾಯ ಅಂದಾಜಿಸಿ ಹಾಗೂ 315.73 ಕೋಟಿ ರೂ. ವೆಚ್ಚಕ್ಕೆ ಬಜೆಟ್ ಸಿದ್ಧಪಡಿಸಿದ್ದು, ಇದರಲ್ಲಿ ಸದರಿ ಕೊರತೆ ಮೊತ್ತ ತೋರಿಸಲಾಗಿದೆ.

ಮೈಸೂರಿನ ಮಾನಸಗಂಗೋತ್ರಿ ವಿವಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ 3ನೇ ಸಾಮಾನ್ಯ ಸಭೆಯಲ್ಲಿ ಹಣಕಾಸು ಅಧಿಕಾರಿ ಡಾ.ಟಿ.ಎಸ್. ದೇವರಾಜ ಒಟ್ಟು 5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯವು 2021 -22ನೇ ಸಾಲಿನ ಯೋಜನೇತರ ಆಯ ವ್ಯಯ ವೆಚ್ಚವನ್ನು 340.82 ಕೋಟಿ ರೂ.ಗೆ ಅಂದಾಜು ಸಿದ್ಧಪಡಿಸಿ, 250.82 ಕೋಟಿ ರೂ. ಯೋಜನೇತರ ಬ್ಲಾಕ್ ಅನುದಾನದ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರವು 2021 -22ನೇ ಸಾಲಿನ ಆಯವ್ಯಯದಲ್ಲಿ 152. 75 ಕೋಟಿ ರೂ.ಗಳನ್ನು (ವೇತನಾನುದಾನ ರೂ.108.59 ಕೋಟಿ ರೂ. ಮತ್ತು ಪಿಂಚಣಿ ಅನುದಾನ 44.16 ಕೋಟಿ ರೂ. ಸೇರಿ ದಂತೆ) ಮಂಜೂರು ಮಾಡಿದೆ ಎಂದರು.

2020-21ನೇ ಸಾಲಿಗೆ ಸಂಬಂಧಿಸಿ ದಂತೆ ಕೊರತೆ ಮೊತ್ತ ರೂ.28.29 ಕೋಟಿ ರೂ. ಹಾಗೂ 2021-22ನೇ ಸಾಲಿನ ವಿಶ್ವ ವಿದ್ಯಾನಿಲಯದ ಆಂತರಿಕ ಸಂಪನ್ಮೂಲ ಗಳ ಆದಾಯ 140 ಕೋಟಿ ರೂ. ಆಗಿದ್ದು, ಒಟ್ಟಾರೆ 310.29 ಕೋಟಿ ರೂ. ಆದಾಯ ಅಂದಾಜಿಸಿ 315.73 ಕೋಟಿ ರೂ. ವೆಚ್ಚ ಗಳಿಗೆ ಆಯವ್ಯಯ ಸಿದ್ಧಪಡಿಸಿದೆ. ಈ ಆಯ ವ್ಯಯದಲ್ಲಿ 5.44 ಕೋಟಿ ರೂ. ಕೊರತೆ ಕಂಡು ಬಂದಿದೆ ಎಂದು ತಿಳಿಸಿದರು.

ಶತಮಾನೋತ್ಸವ ಆಚರಿಸಿಕೊಂಡ ಮೈಸೂರು ವಿವಿಯು 1,750 ಪಿಂಚಣಿದಾರ ರನ್ನು ಹೊಂದಿದೆ. 2021-22ನೇ ಸಾಲಿಗೆ ಆಯವ್ಯಯ ಅಂದಾಜಿನಲ್ಲಿ 90 ಕೋಟಿ ರೂ.ಗಳನ್ನು ಪಿಂಚಣಿ ಹಾಗೂ ಪಿಂಚಣಿ ಸೌಲಭ್ಯಕ್ಕಾಗಿ ಅಂದಾಜಿಸಿದೆ. ಸರ್ಕಾರದಿಂದ 44.16 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದಂತೆ ಕೊರತೆ ಮೊತ್ತ 45.84 ಕೋಟಿ ರೂ. ಅನ್ನು ಸರ್ಕಾರದಿಂದ ನಿರೀಕ್ಷಿಸ ಲಾಗಿದೆ ಎಂದರು.
ರಾಜ್ಯ ಬಜೆಟ್‍ನಲ್ಲಿ ಅನುದಾನ ನೀಡಿಲ್ಲ: ಪ್ರಸಕ್ತ ಸಾಲಿನಲ್ಲಿ ವಿವಿಗೆ ನ್ಯಾಕ್ ಕಮಿಟಿ ಭೇಟಿ ನೀಡುವ ಹಿನ್ನೆಲೆಯಲ್ಲಿ ವಿವಿ ಅಭಿವೃದ್ಧಿಗೆ 111.60 ಕೋಟಿ ರೂ. ಅನ್ನು ರಾಜ್ಯ ಬಜೆಟ್‍ನಲ್ಲಿ ನೀಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ತನ್ನ ಬಜೆಟ್‍ನಲ್ಲಿ ಈ ಸಂಬಂಧ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿದರು.

ಪ್ರಾಯೋಜಿತ ಕಾರ್ಯಕ್ರಮಗಳ ಸಂಬಂಧ 2021-22ನೇ ಸಾಲಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಯುಜಿಸಿ, ಡಿಬಿಟಿ, ಐಸಿ ಎಸ್‍ಎಸ್‍ಆರ್ ಹಾಗೂ ಮೊದಲಾದ ಸಂಸ್ಥೆಗಳಿಂದ 18 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಈ ಅನುದಾನವನ್ನು ಅನು ದಾನಿತ ಸಂಸ್ಥೆಗಳ ಸೂಚನೆಯ ಅನುಸಾರ ವಿನಿಯೋಗಿಸಲು ಕ್ರಮ ವಹಿಸಲಾಗುವುದು. ರಾಜ್ಯ ಸರ್ಕಾರವು ಬಿಡುಗಡೆ ಮಾಡುವ ಬ್ಲಾಕ್ ಗ್ರಾಂಟ್ ಅನುದಾನವೇ ವಿವಿಯ ಪ್ರಮುಖ ಆರ್ಥಿಕ ಮೂಲವಾಗಿದೆ. ವಿವಿಯ ಉದ್ಯೋಗಿ ಗಳ ವೇತನ ಮತ್ತು ಪಿಂಚಣಿ ಪಾವತಿಗೆ ಇದು ಉಪಯೋಗವಾಗುತ್ತಿದೆ ಎಂದರು. ಕುಲಸಚಿವ ಪ್ರೊ.ಆರ್.ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ಮತ್ತು ವಿವಿಧ ನಿಕಾಯಗಳ ಡೀನ್‍ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »