ಕೊರೊನಾ ಸೋಂಕಿನ ಬೀತಿ: ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಸೂಪರ್ ಮಾರ್ಕೆಟ್
ಮೈಸೂರು

ಕೊರೊನಾ ಸೋಂಕಿನ ಬೀತಿ: ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಸೂಪರ್ ಮಾರ್ಕೆಟ್

March 29, 2020
  • ವಿದ್ಯಾರ್ಥಿಗಳೊಂದಿಗೆ ಸಿಬ್ಬಂದಿ ಮಾತಿನ ಚಕಮಕಿ ವಿಡಿಯೋ ವೈರಲ್
  • ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರ ಸೂಚನೆ*

ಮೈಸೂರು,ಮಾ.29(MTY )- ಮಹಾಮಾರಿ ಸ್ವರೂಪ ತಾಳುತ್ತಿರುವ ನೊವೆಲ್ ಕೊರೊನಾ ವೈರಸ್ ಎಲ್ಲರನ್ನೂ ಭಯಬೀತಗೊಳಿಸಿದ್ದು, ಚೀನಾ ವಿದ್ಯಾರ್ಥಿಗಳೆಂದು ಭಾವಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಮೈಸೂರಿನ ಸೂಪರ್‌ ಮಾರ್ಕೆಟ್ ಸಿಬ್ಬಂದಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.

ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿಯಿರುವ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಬಂದಿದ್ದ ಮೂರ್ನಾಲ್ಕು ಮಂದಿ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಬಾಗಿಲ ಬಳಿ ಇದ್ದ ಸಿಬ್ಬಂದಿಗಳು ಹೊರಗಿನಿಂದ ಬಂದ ವಿದ್ಯಾರ್ಥಿಗಳಿಂದ ಕೊರೊನಾ ವೈರಸ್ ಹರಡಬಹುದೆಂಬ ಭಯದಿಂದ ಒಳಗೆ ಬರದಂತೆ ಅಡ್ಡಿಪಡಿಸಿದ್ದಾರೆ.

ಈ ವೇಳೆ ಆ ವಿದ್ಯಾರ್ಥಿಗಳು ಮಾರ್ಕೆಟ್ ಒಳಗೆ ಬಿಡದಿರುವ ಕಾರಣ ಕೇಳುದ್ದಾರೆ. ನಮಗೂ ದಿನಸಿ, ಆಹಾರ ಪದಾರ್ಥ ಬೇಕು. ನಾವು ನಿಮ್ಮಂತೆಯೇ ಮನುಷ್ಯರು. ನಾವು ಭಾರತೀಯರೇ. ನಮ್ಮ ಬಳಿಯೂ ಆಧಾರ್ ಕಾರ್ಡ್ ಇದೆ. ನಮ್ಮನ್ನ ಯಾಕೇ ಬೇರೆಯವರಂತೆ ನೋಡ್ತಿರಾ.? ನಾವು ನಿಮ್ಮ ರೀತಿಯಲ್ಲೆ ಬದುಕುತ್ತಿದ್ದೇವೆ. ನಮಗೂ ಬದುಕಲು ಆಹಾರ ಪದಾರ್ಥ ನೀಡಿ ಎಂದು ಒತ್ತಾಯಿಸಿದ್ದಾರೆ.

ಆದರೂ ಸಿಬ್ಬಂದಿ ಆ ವಿದ್ಯಾರ್ಥಿಗಳನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ಘಟನೆಯನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಾರತಮ್ಯ ನೀತಿ ಅನುಸರಿಸಿದ ಆರೋಪದ ಮೇರೆಗೆ ಆ ಸೂಪರ್ ಮಾರ್ಕೆಟ್ ವ್ಯವಸ್ಥಾಪಕ ಹಾಗೂ ಅಡ್ಡಿಪಡಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ.ಆರ್.ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಟ್ವಿಟರ್ ನಲ್ಲೂ ಸ್ಪಷ್ಟನೆ ನೀಡಿದ ಆಯುಕ್ತರು :

ನಾಗಾ ವಲಸಿಗರ ವಿರುದ್ಧ ತಾರತಮ್ಯವನ್ನು ತೋರಿಸುವ ವೀಡಿಯೊ ಮೈಸೂರಿನಲ್ಲಿ ಕಂಡುಬಂದಿದೆ. ತಕ್ಷಣ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆ ಮಾರ್ಕೆಟ್ ನ ವ್ಯವಸ್ಥಾಪಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜನರು ಮತ್ತು ಅಂಗಡಿ ಮಾಲೀಕರು, ಸಿಬ್ಬಂದಿಗಳು ತಾರತಮ್ಯ ನೀತಿ ಅನುಸರಿಸಬಾರದು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾವು ಕೋರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Translate »