ಕೊರೊನಾ:  ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ
ಮೈಸೂರು

ಕೊರೊನಾ: ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ

March 28, 2020

ಮೈಸೂರು,ಮಾ.28(ಎಂಟಿವೈ)- ನೊವೆಲ್ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಸ್ಥಳ ಸೇರಿದಂತೆ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲೂ ವೈರಾಣು ನಾಶಪಡಿಸುವ ರಾಸಾಯನಿಕ ದ್ರಾವಣ ಸಿಂಪಡಿಸುವ ಕಾರ್ಯಾಚರಣೆಯನ್ನು ಶನಿವಾರ ಆರಂಭವಾಗಿದೆ.

ಮೈಸೂರು ನಗರ ಪಾಲಿಕೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯಾಚರಣೆ ಆರಂಭಿಸಿದ್ದು, ಪಾಲಿಕೆಯ 9 ವಲಯಗಳಲ್ಲಿರುವ 65 ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿತು. ರಾಜ್ಯದಲ್ಲಿ ನೊವೆಲ್ ಕೊರೊನಾ ಮೂರನೇ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವೈರಾಣು ಹರಡುವ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿರುವುದರಿಂದ ರಾಸಾಯನಿಕ ದ್ರಾವಣ ಸಿಂಪಡಣೆಗೆ ಆದ್ಯತೆ ನೀಡಲಾಗಿದೆ.

ಇದುವರೆಗೂ ರಸ್ತೆ, ವೃತ್ತಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿತ್ತು. ಆದರೆ ಮೈಸೂರಿನಲ್ಲಿ ಸಾರ್ವಜನಿಕ ಸ್ಥಳ ಮಾತ್ರವಲ್ಲದೆ ಮನೆ ಮನೆಗೂ ರಾಸಾಯನಿಕ ದ್ರಾವಣ ಸಿಂಪಡಣೆಗೆ ಕ್ರಮ ಕೈಗೊಳ್ಳಲಾಗಿದೆ.

ಆ್ಯಂಟಿ ವೈರಲ್ ಕೆಮಿಕಲ್ ಸಿಂಪಡಣೆ : ಮೈಸೂರು ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ‘ ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪಾಲಿಕೆಯ 9 ವಲಯಗಳಲ್ಲೂ ತಲಾ ಒಂದೊಂದು ಜೆಟ್ಟಿಂಗ್ ಯಂತ್ರದ ಮೂಲಕ ಹಾಗೂ ನಾಲ್ಕೈದು ಅಗ್ನಿಶಾಮಕ ವಾಹನಗಲನ್ನು ಬಳಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಆ್ಯಂಟಿ ವೈರಸ್ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ. ಅದರಲ್ಲೂ 65 ವಾರ್ಡ್ ಗಳಲ್ಲಿರುವ ಪ್ರತಿಯೊಂದು ಮನೆಗಳಿಗೂ ಈ ದ್ರಾವಣ ಸಿಂಪಡಿಸಲಾಗುತ್ತದೆ. 10 ಲೀಟರ್ ಸಾಮರ್ಥ್ಯದ ಸ್ರ್ಪೇಯರ್ ಗಳನ್ನು ಬಳಸಲಾಗುತ್ತಿದೆ.

ಒಂದು ಕ್ಯಾನ್ ನಲ್ಲಿ ಸುಮಾರು 100ರಿಂದ 150 ಮನೆಗಳಿಗೆ ದ್ರಾವಣ ಸಿಂಪಡಿಸಬಹುದು. ಇದರಿಂದ ಕೊರೊನಾ ವೈರಾಣು ಇದ್ದಲ್ಲಿ ಅವು ನಾಶವಾಗುತ್ತದೆ ಎಂದರು.

ಅಗ್ನಿಶಾಮಕ ವಾಹನಗಳಲ್ಲಿ ರಸ್ತೆ, ಮಾರುಕಟ್ಟೆ , ರಸ್ತೆ ವಿಭಜಕ, ಬಸ್ ತಂಗುದಾಣ,ಉದ್ಯಾನವನಗಳು, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ದ್ರಾವಣ ಸಿಂಪಡಿಸುತ್ತಿದ್ದಾರೆ ಎಂದು ವಿವರಿಸಿದರು.

Translate »