ಕೊರೊನಾ ಎಫೆಕ್ಟ್ : ತವರೂರು ಸೇರಲು ಬಳ್ಳಾರಿಗೆ ಕಾಲ್ನಡಿಯಲ್ಲೇ ಹೊರಟ ಕೂಲಿಕಾರ್ಮಿಕರು
ಮೈಸೂರು

ಕೊರೊನಾ ಎಫೆಕ್ಟ್ : ತವರೂರು ಸೇರಲು ಬಳ್ಳಾರಿಗೆ ಕಾಲ್ನಡಿಯಲ್ಲೇ ಹೊರಟ ಕೂಲಿಕಾರ್ಮಿಕರು

March 28, 2020
  • ಲಾಕ್ ಡೌನ್ ನಿಂದಾಗಿ ಅತಂತ್ರಕ್ಕೀಡಾಗಿದ್ದ ಕಾರ್ಮಿಕರು
  • ನೆರವಿನ ನಿರೀಕ್ಷೆಯಲ್ಲಿ ದಿನದೂಡಿದ್ದರು
  • ಅನ್ಯ ಮಾರ್ಗವಿಲ್ಲದೆ ಕಾಲ್ನಡಿಗೆಯಲ್ಲಿ ಮರಳಿ ಊರಿನತ್ತ ಪಯಣ

ಮೈಸೂರು,ಮಾ.28(ಎಂಟಿವೈ)- ಕೋವಿಡ್ -19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಏ.14ರವರೆಗೆ ದೇಶವೇ ಲಾಕ್ ಡೌನ್ ಆಗಿರುವುದರಿಂದ ಕೂಲಿ ಮಾಡಲು ಮೈಸೂರಿಗೆ ಬಂದಿದ್ದ 50ಕ್ಕೂ ಹೆಚ್ಚು ಮಂದಿ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರು ಜೀವಭಯದಿಂದ ಕಾಲ್ನಡಿಗೆಯಲ್ಲೇ ಸ್ವಗ್ರಾಮ ಸೇರಲು ಮುಂದಾಗಿದ್ದಾರೆ.

ಮೈಸೂರಿನ ವಿವಿಧೆಡೆ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಗಾರೆ ಕೆಲಸ , ಕೂಲಿ ಕೆಲಸ ಹಾಗೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಲು ಮೂರ್ನಾಲ್ಕು ತಿಂಗಳ ಹಿಂದೆ ಬಂದಿದ್ದ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರು ಕೊರೊನಾ ವೈರಸ್ ನಿಂದ ಪಾರಾಗುವುದರೊಂದಿಗೆ ಸ್ವಗ್ರಾಮ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ. ನೊವೆಲ್ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾ.22ರಿಂದಲೇ ಜಾರಿಗೆ ಬರುವಂತೆ 21 ದಿನಗಳ ಕಾಲ ಲಾಕ್ ಡೌನ್ ಮಾಡಿ, ಸಿಆರ್ ಪಿಸಿ 144(3) ಸೆಕ್ಷನ್ ಜಾರಿಗೆ ತಂದಿರುವುದರಿಂದ ಈ ಕುಟುಂಬಗಳು ತತ್ತರಿಸಿವೆ. ಕಳೆದ ಆರು ದಿನಗಳಿಂದ ದುಡಿಮೆಯಿಲ್ಲದೆ ಕೈಕಟ್ಟಿ ಕುಳಿತಿದ್ದ ಇವರಿಗೆ ಇದೀಗ ದಿಕ್ಕೇ ತೋಚದಂತಾಗಿದ್ದು, ಮರಳಿ ಊರಿಗೆ ಹೋಗುವ ತವಕದಲ್ಲಿದ್ದಾರೆ.
446 ಕಿ.ಮಿ ದೂರ ಕಾಲ್ನಡಿಗೆಯಲ್ಲಿ ಪ್ರಯಾಣ: ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಟಿ.ಎಸ್.ಕುಡ್ಲೂರು ಗ್ರಾಮದವರಾಗಿರುವ ಈ ಕೂಲಿ ಕಾರ್ಮಿಕರು ಊಟಕ್ಕೂ ವ್ಯವಸ್ಥೆಯಿಲ್ಲದೆ ಊರು ಸೇರಲು ನಿರ್ಧರಿಸಿದ್ದಾರೆ. ಮೈಸೂರಿನ ವಿವಿದೆಡೆ ಕೆಲಸ ಮಾಡುತ್ತಿದ್ದ ಈ ಕೂಲಿ ಕಾರ್ಮಿಕರು ತಮ್ಮ ಬಳಿ ಇದ್ದ ಪುಡಿಗಾಸನ್ನು ವೆಚ್ಚ ಮಾಡಿ ಐದಾರು ದಿನದಿಂದ ಜೀವನ ಸಾಗಿಸಿದ್ದಾರೆ. ಲಾಕ್ ಡೌನ್ ಪರಿಣಾಮ ಅಂಗಡಿ ಮುಂಗಟ್ಟು, ಹೋಟೆಲ್ , ಫಾಸ್ಟ್‌ ಫುಡ್ ಬಾಗಿಲು ಹಾಕಿರುವುದರಿಂದ ಕಂಗಾಲಾಗಿದ್ದಾರೆ. ಅಲ್ಲದೆ ದಿನದ ಸಂಪಾಧನೆಯೂ ಇಲ್ಲವಾಗಿರುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ಮೈಸೂರಿಂದ 446 ಕಿಮಿ ದೂರದ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಟಿ.ಎಸ್.ಕುಡ್ಲೂರು ಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ಪಯಣ ಆರಂಭಿಸಿದ್ದಾರೆ. ಈ ತಂಡದಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಇರುವುದರಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಪಯಣ ಆರಂಭ: ಮೈಸೂರಿನ ದಡ್ಡದಹಳ್ಳಿಯಿಂದ ಇಂದು ಬೆಳಗ್ಗೆ 9ಗಂಟೆಯಿದಲೇ ಪ್ರಯಾಣ ಆರಂಭಿಸಿರುವ ಈ ಕಾರ್ಮಿಕರ ಒಂದು ತಂಡ ಉಪಾಹಾರ, ಮಧ್ಯಾಹ್ನ ಊಟವಿಲ್ಲದೆ ಬಾಳೆಹಣ್ಣು ತಿಂದು ಉರಿಬಿಸಿನಲ್ಲಿ ಹೆಜ್ಜೆ ಹಾಕುತ್ತಿದ್ದು ರಿಂಗ್‌ರೋಡ್ ಮೂಲಕ ದಟ್ಟಗಳ್ಳಿ ಮಾರ್ಗವಾಗಿ ವಿಜಯನಗರಕ್ಕೆ ತಲುಪಿ, ಅಲ್ಲಿಯಿಂದ ಇನ್ನಷ್ಟು ಸಂಗಾತಿಗಳನ್ನು ಸೇರಿಕೊಂಡು ಊರಿಗೆ ಹೋಗಲು ಮುಂದಾಗಿದ್ದಾರೆ.

ಊರಿನವರು ಭಯ ಪಡುತ್ತಿದ್ದಾರೆ : ‘ನಮ್ಮೂರಿನಲ್ಲಿರುವ ಕುಟುಂಬಸ್ಥರು ಪದೇ ಪದೇ ಫೋನ್ ಮಾಡಿ ನಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಯಾವಾಗ ಬರುತ್ತೀರಾ ಎಂದು ಗೋಗರೆಯುತ್ತಿದ್ದಾರೆ. ನಮ್ಮ ಆಗಮನವನ್ನೇ ಎದುರು ನೋಡುತ್ತಿದ್ದಾರೆ. ಒಂದೊಂದು ಮನೆಯ ಸ್ಥಿತಿ ಒಂದೊಂದು ರೀತಿಯ ಕಣ್ಣೀರಿನ ಕಥೆಯಾಗಿದೆ. ಕುಟುಂಬಸ್ಥರು ಅಳುತ್ತಿದ್ದಾರೆ. ಹೀಗಾಗಿ, ಏನಾದರೂ ಆಗಲಿ, ಊರಿಗೆ ಹೋಗಬೇಕು ಎಂದು ನಿರ್ಧರಿಸಿದ್ದೇವೆ. ಊಟ-ತಿಂಡಿ ಸಿಗದಿದ್ದರೂ ಪರವಾಗಿಲ್ಲ. ಊರಿನ ಕಡೆ ಹೊರಟಿದ್ದೇವೆ’ ಎಂದು ಡ್ರೈವರ್ ವೃತ್ತಿಗಾಗಿ ಬಂದಿದ್ದ ರಮೇಶ್ ‘ ಮೈಸೂರು ಮಿತ್ರ’ನಿಗೆ ಅಳಲು ತೋಡಿಕೊಂಡರು.

ನೆರವು ನೀಡುವರೆ: ನಮ್ಮನ್ನು ನಮ್ಮೂರಿಗೆ ಸೇರಿಸಲು ಯಾರಿಂದಲಾದರೂ ಸಹಾಯ ಕೇಳುತ್ತೇವೆ. ಯಾವುದಾದರೂ ಖಾಸಗಿ ವಾಹನ ಸಿಕ್ಕರೂ ಡ್ರಾಪ್ ತೆಗೆದುಕೊಳ್ಳಬಹುದಾಗಿತ್ತು. ಆದರೆ ಯಾವೊಂದು ವಾಹನವೂ ಸಿಗುತ್ತಿಲ್ಲ. ಅಲ್ಲದೆ ನಮ್ಮ ಬಳಿ ಹಣವೂ ಇಲ್ಲ ಎಂದು ಅವರು ವಿಷಾದಿಸಿದರು.

Translate »