ಇನ್ನು ಲಾಕ್‍ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿಯೊಣ
ಮೈಸೂರು

ಇನ್ನು ಲಾಕ್‍ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿಯೊಣ

July 28, 2020

ಮೈಸೂರು, ಜು.27(ಪಿಎಂ)- ಇನ್ನು ಲಾಕ್‍ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿತು ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರ ವರ್ಷ ಪೂರೈಸಿರುವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ `ಸವಾಲುಗಳ 1 ವರ್ಷ ಪರಿ ಹಾರದ ಸ್ಪರ್ಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಜನತೆಯ ಋಣ ತೀರಿಸಬೇಕಿದ್ದು, ಹೀಗಾಗಿ ಮಾಡಬೇಕಿರುವ ಕೆಲಸ ಸರ್ಕಾರದ ಮುಂದೆ ಬಹಳಷ್ಟಿದೆ. ನನಗೆ ನೆನಸಿಕೊಂಡರೆ ಕಣ್ಣಿನಲ್ಲಿ ನೀರು ಬರುತ್ತದೆ. ಕೊರೊನಾ ಸಂಕಷ್ಟ ಇಲ್ಲವಾಗಿದ್ದರೆ ರಾಜ್ಯದ ಅಭಿವೃದ್ಧಿ ವೇಗದಲ್ಲಿ ಮುನ್ನಡೆಯುತ್ತಿತ್ತು. ಲಾಕ್‍ಡೌನ್ ವಿಚಾರ ಇನ್ನು ಪ್ರಸ್ತಾಪ ಮಾಡುವುದು ಬೇಡ. ಇನ್ನು ಮುಂದೆ ಲಾಕ್‍ಡೌನ್ ಬಗ್ಗೆ ಚರ್ಚೆ ಮಾಡದೇ ಕೊರೊನಾ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯ. ಅದನ್ನು ಒಂದು ವರ್ಷದಲ್ಲಿ ಸರ್ಕಾರ ಯಶಸ್ವಿಯಾಗಿ ಮಾಡಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮೀಯರು ಯಾವುದೇ ಭೇದಭಾವ ಇಲ್ಲದೆ ಬದುಕುತ್ತಿದ್ದಾರೆ. ಕೋಮು ಸಂಘರ್ಷ ಇಲ್ಲದೆ ರಾಜ್ಯ ಮುನ್ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳವಾದ ಅವಕಾಶವಿದೆ. ಇದಕ್ಕಾಗಿ ಡಾ.ಸುಧಾಮೂರ್ತಿಯವರ ಅಧ್ಯಕ್ಷತೆ ಯಲ್ಲಿ ಸಮಿತಿ ರಚನೆ ಮಾಡಿದ್ದು, ಸಮಿತಿ ಕಾರ್ಯಪ್ರವೃತ್ತ ವಾಗಿದೆ. ಪ್ರಾದೇಶಿಕ ಅಸಮತೋಲನದ ಪರಿಣಾಮವಾಗಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಆಗಲಿಲ್ಲ. ಇದನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಡಾ.ನಂಜುಂಡಪ್ಪ ವರದಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು. ಸಂವಿಧಾನದ `371 ಜೆ’ ಪ್ರಕಾರ `ಹೈದರಬಾದ್-ಕರ್ನಾಟಕ’ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ನಮ್ಮ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರದೇಶವನ್ನು `ಕಲ್ಯಾಣ ಕರ್ನಾಟಕ’ ಮಾಡಲು ಸಂಕಲ್ಪ ಮಾಡಿದೆ ಎಂದು ನುಡಿದರು.

ಈಗಾಗಲೇ ಗ್ರಾಮೀಣ ರಸ್ತೆಗೆ ಹೆಚ್ಚು ಒತ್ತು ಕೊಟ್ಟಿದ್ದು, 785 ಕಿ.ಮೀ. ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ನಿತಿನ್ ಗಡ್ಕರಿಯವರ ಸಹಕಾರದಿಂದ ರಾಷ್ಟ್ರೀಯ ಹೆದ್ದಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗಾಗಲೇ 970 ಕೀ.ಮಿ.ಗೂ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಗಂಗಾ ಕಲ್ಯಾಣ ಯೋಜನೆಯಡಿ 8,517 ಬೋರ್‍ವೆಲ್ ತೆಗೆಸಲಾಗಿದೆ. ಮಹಾ ದಾಯಿ ಜಲವಿವಾದ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಮೇಕೆದಾಟು ಯೋಜನೆಯಡಿ 15,424 ಹೆಕ್ಟೇರ್ ಪ್ರದೇಶಕ್ಕೆ ನೀರು ಕೊಡುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 1,130 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಸರ್ಕಾರ ಸದಾ ರೈತರ ನೆರವಿಗೆ ಧಾವಿಸಲಿದೆ ಎಂದು ನುಡಿದರು.

Translate »