ಕೆ.ಆರ್.ಆಸ್ಪತ್ರೆ ಹಾಗೂ ಕ್ವಾರಂಟೇನ್ ಮನೆಗಳ ಸುತ್ತ ಪೆರಾಕ್ಸೈಡ್ , ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಣೆ
ಮೈಸೂರು

ಕೆ.ಆರ್.ಆಸ್ಪತ್ರೆ ಹಾಗೂ ಕ್ವಾರಂಟೇನ್ ಮನೆಗಳ ಸುತ್ತ ಪೆರಾಕ್ಸೈಡ್ , ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಣೆ

March 29, 2020
  • ಸೋಂಕಿತರು ಓಡಾಡಿರುವ ಸ್ಥಳಗಳಲ್ಲಿ ವೈರಾಣು ನಾಶಕ್ಕೆ ಕ್ರಮ
  • ಹೋಮ್ ಕ್ವಾರಂಟೇನ್ ಇರುವ ಮನೆಗಳು, ಸರ್ಕಾರಿ ಕಚೇರಿ ಸಮುಚ್ಚಯಕ್ಕೂ ಸಿಂಪಡಣೆ

ಮೈಸೂರು,ಮಾ.29(MTY)- ನೊವೆಲ್ ಕೊರೊನಾ ವೈರಸ್ ಮೈಸೂರಿನಲ್ಲಿ ಮೂರನೇ ಹಂತಕ್ಕೆ ವ್ಯಾಪಿಸಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಕೆ.ಆರ್.ಆಸ್ಪತ್ರೆ, ಸರ್ಕಾರಿ ಕಚೇರಿ ಹಾಗೂ ವಿವಿಧ ಬಡಾವಣೆಗಳಲಿರುವ ಹೋಮ್ ಕ್ವಾರಂಟೇನ್ ಮನೆಗಳಿಗೆ ವೈರಾಣು ನಾಶ ಮಾಡುವ ಜಲಜನಕದ ಪೆರಾಕ್ಸೈಡ್ ಹಾಗೂ ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಿಸು ಕಾರ್ಯಾಚರಣೆ ಆರಂಭಿಸಿದೆ.

ಕಳೆದ ಎರಡು ದಿನದಿಂದ ಮೈಸೂರು ನಗರ ಪಾಲಿಕೆಯ ಎಲ್ಲಾ 65 ವಾರ್ಡ್ ಗಳಲ್ಲಿ ವೈರಾಣು ನಾಶ ಮಾಡುವ ರಾಸಾಯನಿಕ ದ್ರಾವಣ ಸಿಂಪಡಿಸುವ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ನಗರ ಪಾಲಿಕೆ ಇಂದು ತಜ್ಞರ ಅಭಿಪ್ರಾಯ ಹಾಗೂ ಸೂಚನೆ ಮೇರೆಗೆ ವೈರಾಣುಗಳನ್ನು ಕ್ಷಣ ಮಾತ್ರದಲ್ಲಿ ನಾಶ ಮಾಡುವ ಶಕ್ತಿ ಹೊಂದಿರುವ ರಾಸಾಯನಿಕ ವಸ್ತುವನ್ನು ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಿಂಪಡಿಸುವ ಕಾರ್ಯ ನಡೆಸುತ್ತಿದೆ.

100 ಲೀಟರ್ ಗೆ ಒಂದು ಲೀಟರ್ ಶೇ. ೨.೫ % ಜಲಜನಕದ ಪೆರಾಕ್ಸೈಡ್ ಮತ್ತು ಸಿಲ್ವರ್ ನೈಟ್ರೇಟ್ ಮಿಶ್ರಣ ಮಾಡಿ ಕೆ.ಆರ್.ಆಸ್ಪತ್ರೆಯ ಎಲ್ಲಾ ವಿಭಾಗಕ್ಕೂ ಸಿಂಪಡಿಸಿಲಾಗುತ್ತಿದೆ.

ಎರಡು ಅಭಯ ತಂಡ 7 ಸಿಬ್ಬಂದಿಗಳು ರಾಸಾಯನಿಕ ದ್ರಾವಣ ಸಿಂಪಡಿಸುತ್ತಿದ್ದಾರೆ. ಶನಿವಾರವಷ್ಟೇ ಕೊರೊನಾ ಸೋಂಕು ದೃಡಪಟ್ಟ ಐವರು ಸೋಂಕಿತರನ್ನು ಎಕ್ಸ್ ರೇ ಸೇರಿದಂತೆ ವಿವಿಧ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಕರೆದೊಯ್ಯಲಾಗಿತ್ತು. ಸೋಂಕು ಇರುವುದು ದೃಡಪಟ್ಟ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಆತಂಕ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ಕೆ.ಆರ್.ಆಸ್ಪತ್ರೆ ಹೊರ ರೋಗಿ ವಿಭಾಗ, ತುರ್ತು ಚಿಕಿತ್ಸಾ ಘಟಕ, ಎಕ್ಸ್ ರೇ ವಿಭಾಗ, ವಿವಿಧ ವಾರ್ಡ್ , ಆಸ್ಪತ್ರೆ ಆವರಣ ಸೇರಿದಂತೆ ಎಲ್ಲೆಡೆ ವೈರಾಣು ನಾಶ ಮಾಡಲು ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದೆ.
ಇದಲ್ಲದೆ ಸಾರ್ವಜನಿಕ ಹೆಚ್ಚಾಗಿ ಓಡಾಡುವ ಸ್ಥಳ, ಜಿಲ್ಲಾಧಿಕಾರಿ ಕಚೇರಿ , ಜಿ.ಪಂ ಕಚೇರಿ ಸಮುಚ್ಚಯಕ್ಕೂ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿತ್ತದೆ. ವಿದೇಶದಿಂದ ಬಂದು ಹೋಮ್ ಕ್ವಾರಂಟೇನ್ ನಲ್ಲಿರುವವರ ಮನೆ ಸುತ್ತಲೂ ವೈರಾಣು ನಾಶಕ್ಕಾಗಿ ದ್ರಾವಣ ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಪಾಲಿಕೆಯಿಂದ ಕಾರ್ಯಾಚರಣೆ : ಈ ಕುರಿತಂತೆ ‘ ಮೈಸೂರು ಮಿತ್ರ’ನೊಂದಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮಾತನಾಡಿ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಯುಕ್ತ ಗುರುದತ್ತ ಹೆಗಡೆ ಅವರ ಸೂಚನೆ ಮೇರೆಗೆ ವೈರಾಣು ನಾಶ ಮಾಡುವ ದ್ರಾವಣ ಸಿಂಪಡಣೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೈರಸ್ ಗಳನ್ನು ಕಡಿಮೆ ಅವಧಿಯಲ್ಲಿ ನಾಶ ಮಾಡುವ ಶಕ್ತಿ ಹೊಂದಿರುವ ಶೇ.೨.೫ % ಜಲಜನಕದ ಪೆರಾಕ್ಸೈಡ್ ಮತ್ತು ಸಿಲ್ವರ್ ನೈಟ್ರೇಟ್ ಮೊದಲ ಬಾರಿಗೆ ಬಳಸುತ್ತಿದ್ದೇವೆ. ಯಾವುದಾರು ಸ್ಥಳದಲ್ಲಿ ವೈರಾಣುಗಳಿದ್ದರೆ ಅವು ಮತ್ತೊಬ್ಬರಿಗೆ ಹರಡದಂತೆ ನಾಶ ಮಾಡಲು ದ್ರಾವಣ ಸಿಂಪಡಿಸಲಾಗುತ್ತಿದೆ ಎಂದರು.

Translate »