ಹಸಿದವರ ನೋವಿಗೆ ಸ್ಪಂದಿಸಿದ ‘ಈಜಿ಼ ಬಾಯ್ಸ್’
ಮೈಸೂರು

ಹಸಿದವರ ನೋವಿಗೆ ಸ್ಪಂದಿಸಿದ ‘ಈಜಿ಼ ಬಾಯ್ಸ್’

March 29, 2020
  • ದಿನಕ್ಕೆ 300 ಮಂದಿ ವಸತಿಹೀನರಿಗೆ ಆಹಾರ, ನೀರು ಪೂರೈಕೆ
  • ಕರ್ತವ್ಯ ನಿರತ ಪೊಲೀಸರಿಗೆ ಸ್ಯಾನಿಟೈಸರ್ ವಿತರಣೆ

ಮೈಸೂರು,ಮಾ.29(MTY)- ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19 ದೇಶದಲ್ಲಿ ವ್ಯಾಪಿಸುವುದನ್ನ ತಡೆಗಟ್ಟಲು ಏ.14ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಮೈಸೂರಲ್ಲಿ ಕಂಗಾಲಾಗಿರುವ ವಸತಿಹೀನರ ಹಸಿವು ತಣಿಸಲು ಯುವಕರ ತಂಡವೊಂದು ಸದ್ದಿಲ್ಲದೆ ಸೇವೆ ಮಾಡುತ್ತಿದೆ.

ಸಮಾನ ಮನಸ್ಕರ ಯುವಕರ ತಂಡ ಹಸಿದವರಿಗಾಗಿ ಅನ್ನ ನೀಡುವ ಮಹತ್ತರ ಸೇವೆ ಮಾಡುತ್ತಿದೆ. ಈಜೀ಼ ಬಾಯ್ಸ್( EeZee boys) ತಂಡದ ಸದಸ್ಯರೇ ಮಾನವೀಯತೆ ಪ್ರದರ್ಶಿಸುತ್ತಿದ್ದಾರೆ. ತಾವೇ ದೇಣಿಗೆ ಹಾಕಿ ಶುದ್ಧ, ಶುಚಿಯಾದ ಆಹಾರ ಪದಾರ್ಥ ತಯಾರಿಸಿ ಪ್ರತಿದಿನ 300 ಮಂದಿಗೆ ಸರಬರಾಜು ಮಾಡುತ್ತಿದ್ದಾರೆ.

ಮಾರಕ ಕೊರೊನಾ ವೈರಸ್ ಹರಡುವ ಚೇನ್ ಲಿಂಕ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾ.21ರಿಂದ ಜಾರಿಗೆ ಬಂದ ಲಾಕ್ ಡೌನ್ ನಿಂದಾಗಿ ಮೈಸೂರಲ್ಲಿ 300ಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಊಟಕ್ಕಾಗಿ ಪರಿತಪಿಸುತ್ತಿರುವವರ ಸಂಕಷ್ಟ ಅರಿತು ನೆರವಿಗೆ ಬಂದಿದ್ದಾರೆ.

ಲಾಕ್ ಡೌನ್ ಮುಗಿಯುವವರೆಗೂ ಸೇವೆ: ಈ ಕುರಿತಂತೆ ಈಜೀ಼ ಬಾಯ್ಸ್ ತಂಡದ ಮಧುಮಾಲೇಶ್ ‘ ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಲಾಕ್ ಡೌನ್ ನಿಂದಾಗಿ ರೈಲ್ವೆ ನಿಲ್ದಾಣದ ಬಳಿ ಆಹಾರವಿಲ್ಲದೆ ಪರಿತಪಿಸುತ್ತಿರುವ ಜನರ ಕಷ್ಟಕ್ಕೆ ಸ್ಪಂದಿಸಬೇಕೆಂದು ಸಮಾನ ಮನಸ್ಕರ ತಂಡ ನಿರ್ದರಿಸಿತು. ಇದಕ್ಕಾಗಿ ನಮ್ಮ 20ಕ್ಕೂ ಹೆಚ್ಚು ಸ್ನೇಹಿತರು ಆರ್ಥಿಕ ನೆರವು ನೀಡಿದರು. ಹೆಬ್ಬಾಳು ಕೈಗಾರಿಕಾ ಬಡಾವಣೆಯಲ್ಲಿರುವ ವೈ ಪಂಜಾಬಿ ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡಿಸುತ್ತಿದ್ದೇವೆ. ಗೀರ್ ರೈಸ್, ಚಿತ್ರಾನ್ನ, ರೈಸ್ ಬಾತ್ ಸೇರಿದಂತೆ ಪ್ರತಿದಿನ ಬೇರೆ ಬೇರೆ ಆಹಾರ ತಯಾರಿಸಿ ಕಂಟೇನರ್(ಬಾಕ್ಸ್)ನಲ್ಲಿ ಪ್ಯಾಕ್ ಮಾಡಿ ಸರಬರಾಜು ಮಾಡುತ್ತಿದ್ದೇವೆ. ಜೊತೆಗೆ ಅರ್ದ ಲೀಟರ್‌‌ ನೀರಿನ ಬಾಟಲ್ ನೀಡುತ್ತಿದ್ದೇವೆ. ಅಡುಗೆ ತಯಾರಿಕೆಯಲ್ಲೂ ಸ್ವಚ್ಚತೆಗೆ ಆದ್ಯತೆ ನೀಡಿ ಗ್ಲೌಸ್, ಹೆಪ್ರಾನ್ ದರಿಸಿ ಅಡುಗೆ ಭಟ್ಟರಿಂದಲೇ ಆಹಾರ ಪದಾರ್ಥ ತಯಾರಿಸಲಾಗುತ್ತಿದೆ. ಕರ್ತವ್ಯ ನಿರತ ಪೊಲೀಸರಿಗೂ ಆಹಾರ ನೀಡಲಾಗುತ್ತಿದೆ. ಇಂದಿನಿಂದ ಗಣೇಶ ಕೆಮಿಕಲ್ಸ್ ವತಿಯಿಂದ 250 ಎಂಎಲ್ ಸಾಮರ್ಥ್ಯದ ಸ್ಯಾನಿಟೈಸರ್ ಅನ್ನು ಪೊಲೀಸರಿಗೆ ಉಚಿತವಾಗಿ ನೀಡುತ್ತಿದ್ದೇವೆ. ನಮ್ಮ ತಂಡದ ಸದಸ್ಯರಾದ ಅವಿನಾಶ್, ಗಣೇಶ್, ಕೀರ್ತಿ, ಬಿಜು, ಕಿಶೋರ್, ಪ್ರಣವ್, ಹಾಗೂ ರೂಪಕ್ ಶ್ರಮಿಸುತ್ತಿದ್ದಾರೆ. ಪ್ರತಿದಿನ ಮದ್ಯಾಹ್ನ ರೈಲ್ವೆ ನಿಲ್ದಾಣದ ಬಳಿ ಊಟದ ಪ್ಯಾಕ್ ನೀಡುತ್ತಿದ್ದೇವೆ. ಈ ಸೇವೆ ಮಾಡಲು ನಮಗೆ ತೃಪ್ತಿಯಿದೆ ಎಂದರು.

Translate »