ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ
ಮೈಸೂರು

ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ

March 29, 2020

ಮೈಸೂರು, ಮಾ.29(ಎಸ್ ಬಿಡಿ)-  ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  ಹೆಚ್ಚುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅನಗತ್ಯವಾಗಿ ಓಡಾಡದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದರೂ ಗಂಭೀರವಾಗಿ ಪರಿಗಣಿಸದಿರುವುದು, ಆತಂಕ ಹೆಚ್ಚಿಸಿದೆ.

ಮೈಸೂರಿನ ದೇವರಾಜ ಸಂಚಾರ ಠಾಣೆ ಪೊಲೀಸರು ಕೆ.ಆರ್.ವೃತ್ತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ತಡೆದು, ಅವರಿಗೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದರು. ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ತಿಳಿ ಹೇಳುತ್ತಿದ್ದರು.

ಮತ್ತೊಂದೆಡೆ ಪೊಲೀಸ್ ಸಿಬ್ಬಂದಿಯೊಬ್ಬರು  ವಾಹನ ಸವಾರರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗವೂ ನಡೆದಿದೆ. ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆತರುತ್ತಿದ್ದ ವ್ಯಕ್ತಿಗೆ ತೀಷ್ಣವಾಗಿಯೇ ಎಚ್ಚರಿಕೆ ನೀಡಿದ್ದಾರೆ. ‘ಭಾರತ ಹಾಳು ಮಾಡೋಕೆ ಹುಟ್ಟಿದ್ದೀರಾ.

ಡಾಕ್ಟರ್, ಪೊಲೀಸರನ್ನ ಸಾಯಿಸ್ಬಿಟ್ಟು ಆಮೇಲೆ‌ ನೆಮ್ಮದಿಯಾಗಿ ಇರ್ತಿರಾ ನೀವು. ಚಿಕ್ಕ ಮಕ್ಕಳನ್ನ ಕೂರಿಸಿಕೊಂಡು ಹೊರಗೆ ಬಂದಿದ್ದೀರಾ ನೀವು’ ಎಂದು ಮನವರಿಕೆ ಮಾಡಲು ಯತ್ನಿಸಿದರು. ಅದಕ್ಕೆ ಆ ವ್ಯಕ್ತಿ ‘ಸರ್ ನನ್ನ‌ ಮಾತು ಕೇಳಲ್ಲ ಸರ್ ಇವರು.
ಮನೆಯಲ್ಲಿ ಇರಿ ಅಂದ್ರೆ ಕೇಳಲ್ಲ‌ ನೀವೆ ಹೇಳಿ ಸರ್ ಇವ್ರಿಗೆ’ ಎಂದಿದ್ದರಿಂದ ಮತ್ತಷ್ಟು ಆಕ್ರೋಶಗೊಂಡ ಪೊಲೀಸ್, ‘ನಿಮ್ಮ ಮಕ್ಕಳು ನಿಮ್ಮ ಮಾತು ಕೇಳಿಲ್ಲ ಅಂದ್ರೆ ನಾಚಿಕೆ ಆಗಬೇಕು ನಿಮಗೆ. ಸುಮ್ನೆ ಮನೆಯಲ್ಲಿರೋದನ್ನ‌ ಕಲಿತುಕೊಳ್ಳಿ. ಇಲ್ಲವಾದರೆ ಮಕ್ಕಳನ್ನೆ‌ ಇಲ್ಲೇ ಬಿಟ್ಟು ಹೋಗಿ’ ಎಂದು ಕಟುವಾಗಿಯೇ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಕೊರೊನಾ ಮಹಾಮಾರಿ ಹರಡುತ್ತಿರುವ ಗಂಭೀರತೆಯನ್ನು ಅರಿಯದವರಂತೆ ವರ್ತಿಸುತ್ತಿರುವ ಬೇಜವಾಬ್ದಾರಿ ಜನರ ನಿಯಂತ್ರಿಸುವಲ್ಲಿ ಪೊಲೀಸರು ರೋಸಿ ಹೋಗಿದ್ದಾರೆ. ಕೈ ಮುಗಿದು ಕೇಲಿಕೊಂಡರೂ ಉದ್ದಟತನ ತೋರುವವರಿಗೆ ಬೇರೆ ಮಾರ್ಗವಿಲ್ಲದೆ ಖಡಕ್ಕಾಗಿಯೇ ತಿಳಿ ಹೇಳುತ್ತಿದ್ದಾರೆ.

Translate »