ಕೊರೊನಾ ಜಾಗೃತಿಗಾಗಿ ಬಂದ ‘ರಾಮಾಚಾರಿ’
ಮೈಸೂರು

ಕೊರೊನಾ ಜಾಗೃತಿಗಾಗಿ ಬಂದ ‘ರಾಮಾಚಾರಿ’

March 29, 2020

* ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಜನರಲ್ಲಿ ಅರಿವು
* ಸ್ವಯಂ ಪ್ರೇರಣೆಯಿಂದ ಸುತ್ತುತ್ತಿರುವ ತಿ.ನರಸೀಪುರದ ವ್ಯಕ್ತಿ

ಮೈಸೂರು,ಮಾ.29(ಎಂಟಿವೈ)- ಮಾರಕ ಕೊರೊನಾ ವೈರಸ್ ಮೈಸೂರಿನಲ್ಲಿ ಮೂರನೆ ಹಂತಕ್ಕೆ ಕಾಲಿಟ್ಟಿದ್ದು ರೆಡ್ ಅಲರ್ಟ್ ಘೋಷಿಸುವ ಸಂದರ್ಭ ಒದಗಿ ಬರುತ್ತಿದ್ದರೂ ಜನರು ಮಾತ್ರ ಬುದ್ದಿ ಕಲಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಬಗ್ಗೆ ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕಗ್ಗಲೀಪುರದ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ರಾಮಾಚಾರಿ ಎಂಬುವರೆ ಕಳೆದ ಐದು ದಿನಗಳಿಂದ ಕೊರೊನಾ ಹಾಗೂ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಕವಿದಿರುವ ಬೇಜಾವಾಬ್ದಾರಿತನವನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಎರಡನೇ ಹಂತದಿಂದ ಕೊರೊನಾ ವೈರಸ್ ಮೂರನೆ ಹಂತಕ್ಕೆ ದಾಪುಗಾಲಿಟ್ಟ ಹಿನ್ನೆಲೆಯಲ್ಲಿ ಪ್ರದಾನಿ ಮೋದಿ ಏ.14ರವರೆಗೂ ಇಡಿ ದೇಶವನ್ನೇ ಲಾಕ್ ಡೌನ್ ಮಾಡಲು ಕರೆ ನೀಡಿದ್ದರೂ ಜನರು ಮಾತ್ರ ಅನಾವಶ್ಯಕವಾಗಿ ರಸ್ತೆಗಳಲ್ಲಿ ಸುತ್ತಾಡುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಕಾರಣ ಇದೀಗ ರಾಮಾಚಾರಿ ಮೈಕ್ ಕಟ್ಟಿಕೊಂಡು ಬೈಕ್ ನಲ್ಲಿ ರೋಡ್ ಗೆ ಇಳಿದಿದ್ದಾರೆ.

ಈಗಾಗಲೇ ತಿ.ನರಸೀಪುರ , ಬನ್ನೂರು ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಜಾಗೃತಿ ಮೂಡಿಸಿರುವ ರಾಮಾಚಾರಿ ಶನಿವಾರದಿಂದ ಮೈಸೂರಲ್ಲಿ ಜನರಿಗೆ ತಿಳುವಳಿಕೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಸ್ವಯಂ ಪ್ರೇರಣೆಯಿಂದ:’ಮೈಸೂರು ಮಿತ್ರ’ನೊಂದಿಗೆ ಮಲ್ಲಿಕಾರ್ಜುನ ರಾಮಾಚಾರಿ ಮಾತನಾಡಿ, ಕೊರೊನಾ ವೈರಸ್ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಟಿವಿಯಲ್ಲಿ ನೋಡುತ್ತಿದ್ದರೂ ನಮ್ಮ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಪೊಲೀಸರು , ಸೆಲಿಬ್ರಿಟಿಗಳು ಕೈ ಮುಗಿದು ಮನೆಯಿಂದ ಹೊರಗೆ ಬರಬೇಡಿ ಎಂದು ಗೋಗರೆಯುತ್ತಿದ್ದರೂ ಜನರು ಮನ್ನಣೆ ನೀಡುತ್ತಿಲ್ಲ. ಇದರಿಂದ ನನ್ನಿಂದ ಜನರಿಗೆ ಸ್ವಲ್ಪಮಟ್ಟಿಗಾದರೂ ಒಳ್ಳೆಯದಾಗಲೆಂದು ಸ್ವಯಂ ಪ್ರೇರಣೆಯಿಂದ ಜಾಗೃತಿ ಮೂಡಿಸುತ್ತಿದ್ದೇನೆ.

ಬೈಕ್ ಗೆ ಒಂದು ಮೈಕ್ ಕಟ್ಟಿಕೊಂಡು, ಮೊಬೈಲ್‌ ನಲ್ಲಿ ಕೊರೊನಾ, ಹಕ್ಕಿಜ್ವರದ ಸಮಸ್ಯೆ ಇರುವುದರಿಂದ ಜನರು ಗುಂಪುಗೂಡಬಾರದು, ಮನೆಯಿಂದ ಅನಗತ್ಯವಾಗಿ ಹೊರಬರಬಾರದು ಎಂದು ಪ್ರಚಾರ ಮಾಡುತ್ತಿದ್ದೇನೆ. ನಮ್ಮ ಪಂಚಾಯ್ತಿಯಿಂದ ಪೆಟ್ರೋಲ್ ಗಾದರೂ ಹಣ ನೀಡುವಂತೆ ಕೋರಿದೆ. ಆದರೆ ಅದಕ್ಕೆ ಅವಕಾಶ ಇಲ್ಲ ಎಂದರು. ಇದರಿಂದ ನನ್ನ ಸ್ವಂತ ಖರ್ಚಿನಲ್ಲೇ ಪ್ರಚಾರ ಮಾಡಿ ಸಾಧ್ಯವಾದಷ್ಟು ಜನರಿಗೆ ನನ್ನ ಉದ್ದೇಶ ತಿಳಿಸುತ್ತಿದ್ದೇನೆ. ಮೈಸೂರಿನ ಜನರು ವಿದ್ಯಾವಂತರು ಹಾಗೂ ತಿಳುವಳಿಕೆ ಉಳ್ಳವರಾಗಿದ್ದಾರೆ. ಆದರೂ ರಸ್ತೆಗಿಳಿಯುತ್ತಿರುವುದು ತಲೆತಗ್ಗಿಸುವ ಸಂಗತಿ ಎಂದು ವಿಷಾದಿಸಿದರು.

Translate »