ರಾಜ್ಯ ಸರ್ಕಾರದ ವಿರುದ್ಧ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ
ಮೈಸೂರು

ರಾಜ್ಯ ಸರ್ಕಾರದ ವಿರುದ್ಧ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

November 21, 2018

ಮೈಸೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ದಲಿತ ವಿರೋಧಿ, ರೈತ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿ ದಲಿತ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಎಸ್‍ಎಫ್‍ಐ, ಪ್ರಗತಿಪರ ಚಿಂತಕರ ಸಂಘ, ಬಹುಜನ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಮಂಗಳವಾರ ಮೈಸೂರಿನ ಮಾನಸಗಂಗೋತ್ರಿ ದೊಡ್ಡ ಗಡಿಯಾರದ ಬಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯ ಸರ್ಕಾರದ ನೀತಿ ನಿಯಮಗಳು ಶೋಷಿತ ಸಮುದಾಯಗಳಿಗೆ ಮರಣ ಶಾಸನವಾಗಿ ಪರಿಣಮಿಸು ತ್ತಿವೆ. ಕೆಪಿಎಸ್‍ಸಿ ವಿಷಯದಲ್ಲಿ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಆಯಾ ಜಾತಿಯ ಮೀಸಲಾತಿ ಯಲ್ಲಿಯೇ ಪರಿಗಣಿಸಬೇಕು. ಅವರು ಎಷ್ಟೇ ಉತ್ತಮ ಅಂಕ ಗಳಿಸಿದ್ದರೂ ಅವರಿಗೆ ಸಾಮಾನ್ಯ ಮೆರಿಟ್‍ನಲ್ಲಿ ಪರಿಗಣಿಸಬಾರದು ಎಂಬ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.

ಕಾನೂನು ಮಾಡಿಯೂ ಜಾರಿ ಮಾಡದೇ ಅನ್ಯಾಯ ಮಾಡುತ್ತಿರುವ `ಬಡ್ತಿ ಮೀಸಲಾತಿ’ ಕಾಯ್ದೆಯಿಂದ ವಂಚನೆಗೊಳಗಾಗಿರುವ ಎಸ್‍ಸಿ, ಎಸ್‍ಟಿ ನೌಕರರ ಹಿತ ಕಾಯಬೇಕು. ಮಣ್ಣಿನ ಮಕ್ಕಳೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ, ರೈತ ಸಮುದಾಯದ ವಿರುದ್ಧ ಮಾತನಾಡುವುದನ್ನು ಬಿಟ್ಟು ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ, ಬಾಕಿ ಪಾವತಿ ಇನ್ನಿತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಮಹೇಶ್ ಸೋಸಲೆ, ಗೋಪಾಲ್, ವಸಂತ್ ಕಲಾಲ್, ಮೂರ್ತಿ, ಸಂದೀಪ್, ಕಿರಣ್, ರಮೇಶ್, ಚಂದ್ರಪ್ಪ, ಕೈಲಾಶ್, ಶಿವಕುಮಾರ್, ಶಿವಮೂರ್ತಿ, ಶಿವಶಂಕರ್, ನಾಗೇಂದ್ರ, ನವೀನ್‍ಮೂರ್ತಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »