ಜೀವನದಲ್ಲಿ ಆಯುರ್ವೇದವನ್ನು ಒಂದು ಭಾಗವಾಗಿ ಅಳವಡಿಸಿಕೊಳ್ಳಿ
ಮೈಸೂರು

ಜೀವನದಲ್ಲಿ ಆಯುರ್ವೇದವನ್ನು ಒಂದು ಭಾಗವಾಗಿ ಅಳವಡಿಸಿಕೊಳ್ಳಿ

November 21, 2018

ಮೈಸೂರು: ಇಂದಿನ ಜೀವನಶೈಲಿಯ ನಡುವೆ ಜನರು ತಮ್ಮ ಜೀವನದಲ್ಲಿ ಆಯುರ್ವೇದವನ್ನು ಒಂದು ಭಾಗವಾಗಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಇಂದಿಲ್ಲಿ ಸಲಹೆ ನೀಡಿದರು.

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಷ್ಟ್ರೀಯ ಆಯುಷ್ ಮಿಷನ್ ಜಂಟಿ ಆಶ್ರಯದಲ್ಲಿ ಮೈಸೂರಿನ ಜೆ.ಕೆ.ಮೈದಾನ ದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಮಂಗಳವಾರ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಕ್ಕೆ ಆಯುರ್ವೇದದ ಕೊಡುಗೆಯನ್ನು ನೀಡಿದ ದೇಶ ನಮ್ಮದು. ಆದರೆ ನಮ್ಮ ದೇಶದ ಔಷಧಿಯನ್ನು ನಾವೇ ಬಳಸದೆ ವಿದೇಶಿ ಔಷಧಿಗಳಿಗೆ ದಾಸರಾಗಿದ್ದೇವೆ. ಇದರ ಹಿಂದೆ ದೊಡ್ಡ ಲಾಬಿಯೇ ಇದೆ. ನಾವೇ ನಮ್ಮ ಆಯುರ್ವೇದ ಔಷಧಿ ಬಳಕೆಯಲ್ಲಿ ಹಿಂದೆ ಬೀಳಬಾರದು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧನ್ವಂತ್ರಿ ಜಯಂತಿ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿ ಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ದೇಶದ ಆರೋಗ್ಯ ರಕ್ಷಣೆಗಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಬೆಟ್ಟದ ನೆಲ್ಲಿಕಾಯಿ ಗಿಡಗಳನ್ನೆ ಕೊಡುಗೆಯಾಗಿ ನೀಡಿದ ಸಂಘಟಕರನ್ನು ಶ್ಲಾಘಿಸಿದ ಶಾಸಕರು, ನಮ್ಮ ಆರೋಗ್ಯಕ್ಕೆ ನೆಲ್ಲಿಕಾಯಿ ಉತ್ತಮ ಔಷಧಿಯಾಗಿ ಕೆಲಸ ನಿರ್ವಹಿಸುತ್ತದೆ. ಆಯುರ್ವೇದದ ಮಹತ್ವದ ಬಗ್ಗೆ ಇನ್ನೂ ಹೆಚ್ಚೆಚ್ಚು ಪ್ರಚುರಪಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಆಯುರ್ವೇದದ ಬಗ್ಗೆ ಜನರಲ್ಲಿ ಅರಿವಿದೆ. ಫಿಸಿಯೋಥೆರಪಿ ಇನ್ನಿತರ ಆಯುರ್ವೇದ ಚಿಕಿತ್ಸೆ ಪಡೆಯುವತ್ತ ಜನರು ಒಲವು ತೋರಿದ್ದಾರೆ. ಆಯುರ್ವೇದದ ಬಳಕೆ ಹಾಗೂ ಪ್ರಯೋಜನ ಕುರಿತು ಶಾಲಾ, ಕಾಲೇಜು, ಮಹಿಳಾ ಸಂಘ ಸಂಸ್ಥೆಗಳಲ್ಲಿ ಅರಿವು ಮೂಡಿಸಿದರೆ ಇದರಲ್ಲಿ ಸಫಲರಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ. ಗಜಾನನ ಹೆಗಡೆ, ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಸಂದರ್ಭದಲ್ಲಿ ನ.12ರಿಂದ 17ರವರೆಗ ನಾಗರಿಕರಲ್ಲಿ ಆಯುರ್ವೇದದ ಬಗ್ಗೆ ಅರಿವು ಮೂಡಿಸುವ 75 ವಿವಿಧ ಕೇಂದ್ರಗಳಲ್ಲಿ ಸಂಸ್ಥೆಯ 58 ವೈದ್ಯರು, 124 ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಆಯುರ್ವೇದದ ನಡಿಗೆ ಆರೋಗ್ಯದ ಕಡೆಗೆ ಜಾಥಾ ನಡೆಸಿದ್ದೇವೆ. ಆಯುರ್ದರ್ಶನ ಮುಕ್ತ ದಿನ ಕಾರ್ಯಕ್ರಮ ನಡೆಸಿದ್ದೇವೆ. ಆಮಲಕಿ ಉತ್ಸವದ ಮೂಲಕ ಬೆಟ್ಟದ ನೆಲ್ಲಿಕಾಯಿಯ ಔಷಧೀಯ ಮೌಲ್ಯಗಳು, ಆಹಾರದಲ್ಲಿ ಅದರ ಬಳಕೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದರು.ಸಮಾರಂಭದಲ್ಲಿ ಉಪಮೇಯರ್ ಶಫಿ ಅಹಮದ್, ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಆರ್.ನಾಗರಾಜ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »