ಕುಕ್ಕರಹಳ್ಳಿ ಕೆರೆ ಪ್ರವಾಸಿ ತಾಣವಾಗಿಸಲು ಸಚಿವ ಸಾರಾ ನಿರ್ಧಾರ
ಮೈಸೂರು

ಕುಕ್ಕರಹಳ್ಳಿ ಕೆರೆ ಪ್ರವಾಸಿ ತಾಣವಾಗಿಸಲು ಸಚಿವ ಸಾರಾ ನಿರ್ಧಾರ

November 23, 2018

ಮೈಸೂರು: ತಾಂತ್ರಿಕ ತಜ್ಞರ ಕಮಿಟಿ ವರದಿಯಂತೆ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಮುಂದುವರೆಸಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ವಿಶ್ವವಿದ್ಯಾನಿಲಯದ ಇಂಜಿನಿಯರ್‌ಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಪ್ರವಾಸೋದ್ಯಮ ಇಲಾಖೆಯಿಂದ 2009-10ನೇ ಸಾಲಿನಲ್ಲಿ ಮಂಜೂರಾ ಗಿದ್ಧ 2 ಕೋಟಿ ರೂ. ಅನುದಾನದಲ್ಲಿ ಕುಕ್ಕರಹಳ್ಳಿ ಕೆರೆ ಆವರಣವನ್ನು ಮೂಲ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ವಿಶ್ವವಿದ್ಯಾನಿಲಯವು ಪೂರೈಸಿದೆ. ಅದನ್ನು ಪರಿಶೀಲನೆ ನಡೆಸಿದ ಸಚಿವರು. ಈಗಾಗಲೇ 1.5 ಕೋಟಿ ರೂಗಳನ್ನು ಖರ್ಚು ಮಾಡಿ ಮಕ್ಕಳ ಉದ್ಯಾನ, ಯೋಗಾ ಪ್ಲಾಟ್ ಫಾರಂ, ಪ್ರವೇಶ ಗೋಪುರ, ವಾಹನ ನಿಲುಗಡೆ, ಸೆಕ್ಯೂರಿಟಿ ಕ್ಯಾಬಿನ್, ಬೋಟಿಂಗ್ ಸ್ಥಳ, ಬಫರ್ ವಲಯ, ದ್ವೀಪ, ಬ್ಯಾಂಬೂ ಡೈವರ್ಸಿಟಿ ಪಾರ್ಕ್, ಬಟಾನಿಕಲ್ ಗಾರ್ಡನ್, ವಾಕರ್ ಶೆಲ್ಟರ್‍ಗಳನ್ನು ನಿರ್ಮಿಸಿರುವುದನ್ನು ವೀಕ್ಷಿಸಿದರು.

ಇದೀಗ ಮುಂದುವರೆದ ಕಾಮಗಾರಿ ಗಳಾದ ಸೆಂಟ್ರಲ್ ಐಲ್ಯಾಂಡ್ ಅನ್ನು ಬಲ ಪಡಿಸುವುದು (45 ಲಕ್ಷ ರೂ.) ಕೆರೆಯ ಉತ್ತರ ಭಾಗದಲ್ಲಿ ಲ್ಯಾಂಡ್‍ಸ್ಕೇಪ್ ಮಾಡು ವುದು, ಅಡ್ವೆಂಚರ್ ಪಾರ್ಕ್, ಬಟರ್‍ಫ್ಲೈ ಪಾರ್ಕ್ ಸೇರಿದಂತೆ ಇನ್ನಿತರ ಪ್ರವಾಸಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು 96 ಲಕ್ಷ ರೂ.ಗಳ ಕಾಮಗಾರಿಗೆ ಯೋಜನೆ ತಯಾರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈಗಾಗಲೇ ಮಂಜೂರಾಗಿ ರುವ 2 ಕೋಟಿ ರೂ. ಪೈಕಿ ಉಳಿದಿರುವ ಅನುದಾನದಲ್ಲಿ ಕಾಮಗಾರಿ ಆರಂಭಿಸಿ ಅಗತ್ಯ ಬಿದ್ದರೆ ಪ್ರವಾಸೋದ್ಯಮ ಇಲಾಖೆ ಯಿಂದ ಹಣ ಕೊಡಿಸುತ್ತೇವೆ ಎಂದು ಸಾ ರಾ. ಮಹೇಶ್ ತಿಳಿಸಿದರು.

ಕರ್ಬ್ ಸ್ಟೋನ್, ವಾಯುವಿಹಾರಿ ಗಳು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ಕೆರೆಯ ಪೂರ್ವ ಮತ್ತು ಪಶ್ಚಿಮ ಭಾಗ ದಲ್ಲಿ ಜಿಮ್‍ಪಾರ್ಕ್ ಹಾಗೂ ಬಯೋ ಡೈವರ್ಸಿಟಿ ಪಾರ್ಕ್ ಅನ್ನೂ ಅಭಿವೃದ್ಧಿ ಪಡಿಸಿ ಎಂದ ಸಚಿವರು, ಕೆರೆಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಜಲಚರ ಪ್ರಾಣಿ ಹಾಗೂ ಪಕ್ಷಿಗಳಿಗೂ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕೆಂದೂ ಇದೇ ವೇಳೆ ತಾಕೀತು ಮಾಡಿದರು.

ಮೃಗಾಲಯದ ಎಕ್ಸಿಕ್ಯೂಟಿವ್ ಡೈರೆಕ್ಟರ್ ನೇತೃತ್ವದಲ್ಲಿ ರಚಿಸಿರುವ ತಾಂತ್ರಿಕ ತಜ್ಞರ ಸಮಿತಿ ವರದಿಯಂತೆಯೇ ಯೋಜನೆ ರೂಪಿಸಿ ಅನುಮೋದನೆ ಪಡೆದು ಕಾಮಗಾರಿ ನಡೆಸಬೇಕು, ಪರಿಸರಸ್ನೇಹಿ ಪ್ರವಾಸಿ ತಾಣವಾಗಿ ಕುಕ್ಕರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ ಎಂದೂ ಸಚಿವರು ಮೈಸೂರು ವಿವಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದೇ ವೇಳೆ ಕೆಲ ಪರಿಸರವಾದಿಗಳು, ಸಾರ್ವಜನಿಕರು ಸಚಿವರನ್ನು ಸುತ್ತುವರಿದು, ಕುಕ್ಕರಹಳ್ಳಿ ಕೆರೆಯ ನೈಸರ್ಗಿಕ ವಾತಾವರಣ ವನ್ನು ಉಳಿಸಿ, ಅಪರೂಪದ ಪಕ್ಷಿ ಹಾಗೂ ಜಲಚರಗಳನ್ನು ಸಂರಕ್ಷಿಸಬೇಕು. ಅಭಿವೃದ್ಧಿ ಹೆಸರಲ್ಲಿ ಕೆರೆಯನ್ನು ಕಾಂಕ್ರಿಟ್ ವಲಯವಾಗಿ ಮಾರ್ಪಡಿಸಬೇಡಿ ಎಂದು ಸಲಹೆ ನೀಡಿದರು.

ಪರಿಸರ ಉಳಿಸಿಕೊಂಡು ಅಭಿವೃದ್ಧಿಪಡಿಸುತ್ತೇವೆ

ವಾಯುವಿಹಾರಿಗಳು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟು ಕೆರೆ ಸೌಂದರ್ಯ ವೃದ್ಧಿಸುವುದು ಯೋಜನೆ ಉದ್ದೇಶವೇ ಹೊರತು, ಕಾಂಕ್ರಿಟ್ ಜಂಗಲ್ ಮಾಡುವುದಲ್ಲ ಎಂದು ಸಾ.ರಾ.ಮಹೇಶ್ ಪರಿಸರ ಪ್ರೇಮಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಚಿವರ ಗಮನ ಸೆಳೆದ ಮೈಸೂರು ಗ್ರಾಹಕರ ಪರಿಷತ್(ಎಂಜಿಪಿ)ನ ಡಾ.ಭಾಮಿ ವಿ. ಶೆಣೈ ಅವರು ಯುಜಿಡಿ ಹಾಗೂ ಬಟ್ಟೆ ತೊಳೆದ ಸೋಪು ಮಿಶ್ರಿತ ನೀರು ಕೆರೆಗೆ ಹರಿಯುತ್ತಿರುವುದರಿಂದ ಕುಕ್ಕರಹಳ್ಳಿ ಕೆರೆ ನೀರು ಕಲುಷಿತವಾಗುತ್ತಿದ್ದು, ಪರಿಣಾಮ ಮೀನು, ಇನ್ನಿತರೆ ಜಲಚರ ಪ್ರಾಣಿಗಳು ಸಾಯುತ್ತಿವೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾ.ರಾ.ಮಹೇಶ್, ಪಡುವಾರಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದು ಬರುತ್ತಿದ್ದ ನೀರನ್ನು ತಡೆದು ಮಾರ್ಗ ಬದಲಿಸಲಾಗುತ್ತಿದೆ. ಜಿಲ್ಲಾಡಳಿತ ನೀರು ಕಲುಷಿತವಾಗದಂತೆ ತಡೆಯಲು ಪ್ರಯತ್ನಿಸುತ್ತಿದೆ ಎಂದರು. ಮುಚ್ಚಿ ಹೋಗಿರುವ ದಿವಾನ್ ಪೂರ್ಣಯ್ಯ ನಾಲೆಯನ್ನು ತೆರವುಗೊಳಿಸಿದರೆ ಕುಕ್ಕರಹಳ್ಳಿ ಕೆರೆಗೆ ಶುದ್ಧ ನೀರು ಹರಿಯಲು ಸಹಕಾರಿಯಾಗುತ್ತದೆ ಎಂದು ಪರಿಸರ ಪ್ರೇಮಿಗಳು ಇದೇ ಸಂದರ್ಭ ಸಚಿವರ ಗಮನ ಸೆಳೆದರು. ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪ್ರವಾಸೋದ್ಯಮ ಉಪ ನಿರ್ದೇಶಕ ಹೆಚ್.ಜನಾರ್ಧನ, ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸಚಿವರ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

Translate »