ಮೈಸೂರು, ಫೆ.21(ಆರ್‍ಕೆಬಿ)- ಮೈಸೂರಿನ ಕಲಾಮಂದಿರ ಭಾನುವಾರ ಸಾಹಿತ್ಯ ಪ್ರಿಯರು ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. `ಪರ್ವ’ ಕಾದಂಬರಿ ಮತ್ತು ರಂಗ ಪ್ರಸ್ತುತಿ ಕುರಿತಂತೆ `ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ ನಡೆಯಿತು.
ರಂಗಾಯಣ ಮತ್ತು ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎಸ್.ಎಲ್.ಭೈರಪ್ಪನವರು ಉದ್ಘಾಟಿಸಿದರು. `ಪರ್ವ’ದ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಸಾಹಿತಿ ಹಾಗೂ ವಿಮರ್ಶಕ ಶತಾವಧಾನಿ ಡಾ.ಆರ್. ಗಣೇಶ್ ಬಿಡುಗಡೆ ಮಾಡಿ, ವಿಚಾರ ಸಂಕಿ ರಣದಲ್ಲಿ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಉಪನ್ಯಾಸ ನೀಡಿದರು.
ಈ ವೇಳೆ ಅವರು ಪರ್ವ ಕುರಿತು ವಿಮ ರ್ಶಿಸುತ್ತಾ, ಡಾ.ಎಸ್.ಎಲ್.ಭೈರಪ್ಪನವರ ಪ್ರತಿಭೆ ಜೊತೆಗೆ
ಪಾಂಡಿತ್ಯವೂ ಸೇರಿರುವುದು ಕೃತಿಯಲ್ಲಿ ಕಾಣುತ್ತದೆ. ಅವರ ಕಾದಂಬಂರಿಗಳು ಪ್ರತಿಯೊಂದರಲ್ಲೂ ಹೊಸತನ ಇರುತ್ತದೆ. ಅವರು ಬರೆಯುವುದೇ ಹಾಗೇ ಎಂದರು.
42 ವರ್ಷಗಳ ಹಿಂದೆ ಅಂದರೆ 1979ರಲ್ಲಿ `ಪರ್ವ’ ಬರೆದ ಎಸ್.ಎಲ್.ಭೈರಪ್ಪನವರು ಕಲ್ಪನೆ ಭಿನ್ನವಾಗಿದೆ. ಅವರೊಬ್ಬ ತಪಸ್ವಿ. ಪ್ರಶಸತಿ ಪುರಸ್ಕಾರಗಳ ಹಿಂದೆ ಬೀಳದೆ, ಸಾಹಿತ್ಯ ಚಳುವಳಿಯಿಂದ ಆಚೆಗೆ ನಿಂತು, ಯಾವುದೇ ಮೋಹಕ್ಕೆ ಒಳಗಾಗದೇ ಬರೆದಿದ್ದಾರೆ. ನಾಟ್ಯ ಶಾಸ್ತ್ರವನ್ನು ಪ್ರತಿಧ್ವನಿಸಿದ್ದಾರೆ. ತಮ್ಮ ಅನುಭವಕ್ಕೆ ಬಂದದ್ದನ್ನು ಪರಿಣಾಮ ಕಾರಿಯಾಗಿ ತಂದರೆ ಅದೇ ಶಾಸ್ತ್ರ ಎಂಬುದನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಪರ್ವದಲ್ಲಿ ಮಹಾಭಾರತದ ಕೌರವರು, ಅರ್ಜುನ ಅಷ್ಟೇ ಅಲ್ಲ. ಅದರ ಮೂಲಕ ನಮ್ಮ ಬದುಕನ್ನು ತೋರಿಸಿದ್ದಾರೆ. ಯಾವುದೇ ಮಹಾಕೃತಿ ಬರೆಯುವಾಗ ನಿಸ್ಸಂಕೋಚ ವಾಗಿ, ಮುಕ್ತವಾಗಿ ಯಾವಾಗ ಬೇಕೋ ಆಗ ಓದಿಕೊಂಡು ಹೋಗುವಂಥದ್ದು. ಅವರು ಬರೆದಿರುವುದು ಭಾರತದ ಕಲಾ ಕಾವ್ಯ ಪರಂಪರೆಯ ಮುಂದುವರಿಕೆ. ಅವರು ಬರೆದದ್ದು, ಭಾರತೀಯ ಕಾವ್ಯ ಮೀಮಾಂಸೆಗೆ ಅನುಗುಣವಾದದ್ದು. ಭಾರತೀಯ ಕಲಾ ಮೀಮಾಂಸೆ ಕಲ್ಪನೆಯಲ್ಲ. ಅದು ಭ್ರಮೆಯಲ್ಲ. ಅದು ಸತ್ಯ. ಆ ಸತ್ಯ ಯಾರಿಗೆ ಸಾಕ್ಷಾತ್ಕಾರವಾಗುತ್ತದೆ. ಭೈರಪ್ಪನವರ ಬರವಣಿಗೆ ಈ ದೃಷ್ಟಿಯಿಂದ ಹೋಗುತ್ತದೆ. ಇದರಿಂದಲೇ ಅವರ ಕಾದಂ ಬರಿಗೆ ಬದುಕಿದೆ. ಅವರ ಕಾದಂಬರಿ ಎಲ್ಲರೂ ಓದಿ ಸಂತೋಷಿಸುತ್ತಿದ್ದಾರೆ ಎಂದರು.
ಇಂಥ ಮೂಲಭೂತವಾದ ಸಾಹಿತ್ಯವನ್ನು ಇಷ್ಟವಾಗಿ ಯಾರು ಬರೆದಿದ್ದಾರೋ ಅವರ ಬರವಣಿಗೆ ಉಳಿಯುತ್ತದೆ. ಹಾಗಲ್ಲದೆ ಇದ್ದವರು ಸಾಕ್ಷಾತ್ ಸರಸ್ವತಿಯಾದರೂ ಆಗುವಂಥದ್ದಲ್ಲ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಭೈರಪ್ಪನವರು ಯಾವ ಕಾದಂಬರಿ ಬರೆದರೂ `ಆವರಣ’ದ ಐತಿಹಾಸಿಕ ಕತೆ ಇರ ಬಹುದು, ಸಾರ್ಥದಲ್ಲಿ ಬರುವ ನಾಗಭಟ್ಟನ ಕತೆ ಇರಬಹುದು. ಒಂದು 17ನೇ ಶತಮಾನದ ಭಾರತ, ಮತ್ತೊಂದು 7-8ನೇ ಶತಮಾನದ ಭಾರತ, ಪರ್ವವಂತು ಮತ್ತೂ ಹಿಂದಿನದ್ದು. ಸಾಮಾಜಿಕ ಕಾದಂಬರಿ ಎಂದರೆ ಸಮಕಾಲೀನ ಕಾದಂಬರಿ ಮಾತ್ರವಲ್ಲ, ಸಾರ್ವಕಾಲಿಕ ಕಾದಂಬರಿಯನ್ನು ಬರೆಯುತ್ತಾರೆ. ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ್ದು, ಮೈ, ಮೈಗೆ ಮೂಲವಾದ ಮನಸ್ಸು, ಮನಸ್ಸಿನ ಮೂಲವಾದ ಜೀವಾಳ ಅತ್ಮ, ಆ ಮಟ್ಟಕ್ಕೆ ಬರೆಯು ತ್ತಾರೆ. ಹೀಗೆ ಬರೆದಾಗ ಅವರಿಗೆ ಔಟ್ ಡೇಟ್ ಆಗುತ್ತದೆಂಬ ಭಯ ಇರುವುದಿಲ್ಲ ಭೈರಪ್ಪನವರ ಬರವಣಿಗೆ, ಅವರ ಕಾದಂಬರಿಗೆ ಬದುಕಿದೆ ಎಂದರು.
ಇಡೀ ಕಾದಂಬರಿಯಲ್ಲಿ ಹುಟ್ಟನ್ನು ಕುರಿತು ಚರ್ಚೆ ಮಾಡಿರುವಂತಿದೆ. ಕಲ್ಪನಾ ಶೀಲತೆ ಇದೆ. ಹೆಚ್ಚಿನ ಪರಿಶ್ರಮವಿದೆ. ಇದರಲ್ಲಿ ಒಂದೊಂದು ಪಾತ್ರವೂ ತಮ್ಮ ಅಂತರಂಗವನ್ನು ತೋರಿಸುವಂತಿದೆ. ಅವರು ಕಾದಬಂರಿ ಬರೆದಿದ್ದರೂ, ಅವರೊಬ್ಬ ವಿದ್ವಾಂಸ, ತತ್ವಜ್ಞಾನಿ, ವ್ಯಾಸರೇನಾದರೂ ಇದ್ದಿದ್ದರೆ ಭೈರಪ್ಪನವರಿಗೆ, ನಾನು ನಿನಗಾಗಿ ಬಿಟ್ಟಿಕೊಟ್ಟಿದ್ದೇನೆ ಎಂದು ಹೇಳುತ್ತಿದ್ದರೇನೋ. ಏನೇ ಇರಲಿ, `ಪರ್ವ’ದ ಬಗ್ಗೆ ಮಾತನಾಡಬೇಕಾದರೆ ಒಂದೆರಡು ಗಂಟೆಯಲ್ಲ, 30 ದಿನವಾದರೂ ಮಾತನಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, `ಪರ್ವ’ ನಾಟಕದ ನಿರ್ದೇಶಕ ಪ್ರಕಾಶ್ ಬೆಳವಾಡಿ, ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಡಾ.ಜಿ.ಎಲ್.ಶೇಖರ್ ಇನ್ನಿತರರು ಉಪಸ್ಥಿತರಿದ್ದರು.